ಬಿಜೆಪಿಗರಂತೆ ಸುಳ್ಳು ಭರವಸೆ ಕೊಡಲ್ಲ: ಸಿಎಂ ಸಿದ್ದರಾಮಯ್ಯ

| Published : Mar 24 2024, 01:34 AM IST / Updated: Mar 24 2024, 01:00 PM IST

ಸಾರಾಂಶ

ಬಿಜೆಪಿಯವರಂತೆ ನಾವು ಯಾವತ್ತೂ ಜನರಿಗೆ, ಪಕ್ಷದ ಕಾರ್ಯಕರ್ತರಿಗೆ ಬರೀ ಸುಳ್ಳು ಭರವಸೆಗಳನ್ನು ನೀಡುತ್ತಾ, ಭಾವನಾತ್ಮಕವಾಗಿ ಕೆರಳಿಸಿ ನಂತರ ಕೈಕೊಡುವ ಕೆಲಸಗಳನ್ನು ಮಾಡಿಲ್ಲ. ಕೊಟ್ಟ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದೇವೆ. ಮುಂದೆಯೂ ಹಾಗೆಯೇ ನಡೆಯುತ್ತೇವೆ ಎಂದು ಸಿದ್ದು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

‘ಬಿಜೆಪಿಯವರಂತೆ ನಾವು ಯಾವತ್ತೂ ಜನರಿಗೆ, ಪಕ್ಷದ ಕಾರ್ಯಕರ್ತರಿಗೆ ಬರೀ ಸುಳ್ಳು ಭರವಸೆಗಳನ್ನು ನೀಡುತ್ತಾ, ಭಾವನಾತ್ಮಕವಾಗಿ ಕೆರಳಿಸಿ ನಂತರ ಕೈಕೊಡುವ ಕೆಲಸಗಳನ್ನು ಮಾಡಿಲ್ಲ. ಕೊಟ್ಟ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದೇವೆ. 

ಮುಂದೆಯೂ ಹಾಗೆಯೇ ನಡೆಯುತ್ತೇವೆ.’ಇದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ‘ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಸಮಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಸಮಾವೇಶ’ದಲ್ಲಿ ನೀಡಿದ ಭರವಸೆ. 

ಬಿಜೆಪಿಯವರು ಈ ಹಿಂದಿನ ಚುನಾವಣೆಗಳಲ್ಲಿ ಕೊಟ್ಟ ಭರವಸೆಯಂತೆ ಅಚ್ಛೇ ದಿನ್ ಬಂತಾ? ರೈತರ ಆದಾಯ ದುಪ್ಪಟ್ಟು ಆಯಿತಾ? ಡೀಸೆಲ್-ಪೆಟ್ರೋಲ್-ಗ್ಯಾಸ್ ಬೆಲೆ ಕಡಿಮೆ ಮಾಡಿದ್ರಾ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸಿದರಾ? ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕಿದರಾ? ಯಾವುದನ್ನೂ ಮಾಡಿಲ್ಲ. 

ಬಿಜೆಪಿಯವರು ಸರಣಿ ಸುಳ್ಳುಗಾರರು. ಭಾರತದ ಪ್ರಧಾನಿಗಳಲ್ಲಿ ಅತ್ಯಂತ ಹೆಚ್ಚು ಸುಳ್ಳು ಹೇಳಿದವರು ನರೇಂದ್ರ ಮೋದಿ. ಈಗ ನಮ್ಮ ಗ್ಯಾರಂಟಿಗಳನ್ನು ಕದ್ದು ಅದಕ್ಕೆ ‘ಮೋದಿ ಗ್ಯಾರಂಟಿ’ ಎಂದು ಹೆಸರಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಗ್ಯಾರಂಟಿ ಯೋಜನೆಗಳು ಎಲ್ಲಾ ಧರ್ಮ, ಎಲ್ಲಾ ಜಾತಿ, ಎಲ್ಲಾ ವರ್ಗದವರಿಗೆ ಸೇರಿವೆ. ಸರ್ವರನ್ನೂ ಸಮಾನವಾಗಿ ಕಾಣುವ ಕಾರ್ಯಕ್ರಮಗಳನ್ನು ನಮ್ಮ ಕಾಂಗ್ರೆಸ್ ಸರ್ಕಾರ ರೂಪಿಸಿ ಜಾರಿ ಮಾಡುತ್ತಿದೆ. 

ಇವೆಲ್ಲವನ್ನೂ ನೀವುಗಳು ನಾಡಿನ ಜನರಿಗೆ ಸರಿಯಾಗಿ ಅರ್ಥ ಮಾಡಿಸಬೇಕು. ಅಷ್ಟೇ ಅಲ್ಲ, ನಮ್ಮ ಸರ್ಕಾರದ ಗ್ಯಾರಂಟಿಗಳನ್ನು, ನಮ್ಮ ಸಾಧನೆಗಳನ್ನು ಬಿಜೆಪಿ ಸಾಧನೆ ಎಂದು ಹಳ್ಳಿ ಹಳ್ಳಿಗಳಲ್ಲಿ ಅವರು ನಿರಂತರವಾಗಿ, ನಿರ್ಲಜ್ಜತನದಿಂದ ಸುಳ್ಳು ಹೇಳುತ್ತಿದ್ದಾರೆ. 

ಹೀಗಾಗಿ ನಾಡಿನ ಜನರ ಜೇಬಿಗೆ, ಮಹಿಳೆಯರ ಖಾತೆಗೆ ಹಣ ಹಾಕುತ್ತಿರುವುದು ಕಾಂಗ್ರೆಸ್ ಸರ್ಕಾರ. ನಾಡಿನ ಜನತೆಗೆ, ಮಹಿಳೆಯರಿಗೆ, ಯುವ ಸಮೂಹಕ್ಕೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುತ್ತಿರುವುದು ನಮ್ಮ ಕಾಂಗ್ರೆಸ್ ಸರ್ಕಾರ ಎಂಬ ಸತ್ಯವನ್ನು ಜನರಿಗೆ ತಿಳಿಸಬೇಕು ಎಂದು ಕರೆ ನೀಡಿದರು.

ಜೊತೆಗೆ, ಕರ್ನಾಟಕದಿಂದ ನಾವು ವರ್ಷಕ್ಕೆ 4.50 ಲಕ್ಷ ಕೋಟಿ ರು. ತೆರಿಗೆಯನ್ನು ಕೇಂದ್ರಕ್ಕೆ ಕಟ್ಟುತ್ತೇವೆ. ಆದರೆ, ಕೇಂದ್ರ ಸರ್ಕಾರ ರಾಜ್ಯಕ್ಕೆ ವಾಪಸ್ ಕೊಡುತ್ತಿರುವುದು ಕೇವಲ 50 ಸಾವಿರ ಕೋಟಿ ರು. ಈ ಅನ್ಯಾಯವನ್ನೇ ನ್ಯಾಯ ಎಂದು ಬಿಜೆಪಿ-ಜೆಡಿಎಸ್ ನವರು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. 

ಇದನ್ನೂ ಜನರಿಗೆ ಅರ್ಥ ಮಾಡಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಹೆಚ್.ಎಂ.ರೇವಣ್ಣ, ಉಪಾಧ್ಯಕ್ಷರಾದ ಪುಷ್ಪಾ ಅಮರನಾಥ್, ಸೂರಜ್ ಹೆಗ್ಡೆ, ಮೆಹರೋಜ್ ಖಾನ್, ಬಿಬಿಎಂಪಿ ವ್ಯಾಪ್ತಿಯ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಕೃಷ್ಣಪ್ಪ ಉಪಸ್ಥಿತರಿದ್ದರು.

ಲೋಕ ಚುನಾವಣೆಯಲ್ಲಿ ಪಕ್ಷ ವಿರೋಧಿ ಕೆಲಸ ಸಹಿಸಲ್ಲ: ಸಿಎಂ, ಡಿಸಿಎಂ ಎಚ್ಚರಿಕೆಲೋಕಸಭಾ ಚುನಾವಣೆಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ನಮಗೆ ಪೂರಕ ವಾತಾವರಣವಿದೆ. 

ಪಕ್ಷ ವಿರೋಧಿ ಕೆಲಸ ಮಾಡಿದರೆ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪಕ್ಷದ ಎಲ್ಲ ಜನಪ್ರತಿನಿಧಿಗಳು, ಮುಖಂಡರಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಲೋಕಸಭಾ ಚುನಾವಣೆಯ ಮೊದಲ ಹಂತದ 14 ಕ್ಷೇತ್ರಗಳ ಹಾಲಿ ಮಾಜಿ ಶಾಸಕರು, ಸಚಿವರ, ಮುಖಂಡರೊಂದಿಗಿನ ಸಭೆಯನ್ನು ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಆರಂಭಿಸಲಾಯಿತು.

ಮೊದಲ ದಿನ ಕೋಲಾರ, ಹಾಸನ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳ ಜನಪ್ರತಿನಿಧಿಗಳು ಹಾಗೂ ಮುಖಂಡರೊಂದಿಗೆ ಉಭಯ ನಾಯಕರು ಸಭೆ ನಡೆಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವಂತೆ ಸೂಚಿಸಿದರು.

ಈಗಾಗಲೇ ಹಾಸನ ಕ್ಷೇತ್ರದ ಅಭ್ಯರ್ಥಿಯಾಗಿ ಶ್ರೇಯಸ್‌ ಪಟೇಲ್‌ ಅವರನ್ನು ಘೋಷಿಸಲಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಶೀಘ್ರದಲ್ಲೇ ಅಭ್ಯರ್ಥಿಯ ಹೆಸರನ್ನು ಪಕ್ಷ ಅಂತಿಮಗೊಳಿಸಿ ಪ್ರಕಟಿಸಲಿದೆ. 

ಈ ಮೂರೂ ಕ್ಷೇತ್ರಗಳೂ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವಿಗೆ ಪೂರಕ ವಾತಾವರಣ ಕಂಡುಬರುತ್ತಿದೆ. 

ಹಾಗಾಗಿ ಆಯಾ ಜಿಲ್ಲಾ ವ್ಯಾಪ್ತಿಯ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಮುಖಂಡರು, ಕಾರ್ಯಕರ್ತರು ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಟ್ಟಾಗಿ ಕೆಲಸ ಮಾಡಿ. 

ಹೆಚ್ಚಿನ ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಸರ್ವ ರೀತಿಯಲ್ಲೂ ಶ್ರಮಿಸಬೇಕೆಂದು ಹೇಳಿದರು.

ಇದೇ ವೇಳೆ ಯಾವುದೇ ಪಕ್ಷ ವಿರೋಧಿ ಚಟುವಟಿಕೆಗಳನ್ನು ಸಹಿಸುವುದಿಲ್ಲ. ಅಂತಹ ಮನಸ್ಥಿತಿ ಯಾರಿಗಾದರೂ ಇದ್ದರೆ ಈಗಲೇ ಪಕ್ಷ ಬಿಟ್ಟು ಹೋಗಬಹುದು ಎಂದು ಕೂಡ ಉಭಯ ನಾಯಕರು ಖಡಕ್‌ ಎಚ್ಚರಿಕೆ ನೀಡಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪ್ರತ್ಯೇಕವಾಗಿ ನಡೆದ ಮೂರೂ ಕ್ಷೇತ್ರಗಳ ಮುಖಂಡರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್‌.ರಾಜಣ್ಣ, ಬೈರತಿ ಸುರೇಶ್‌, ಡಾ.ಎಂ.ಸಿ.ಸುಧಾಕರ್‌, ರಾಜ್ಯಸಭೆ ಮಾಜಿ ಸದಸ್ಯ ಜವರೇಗೌಡ, ಶಾಸಕ ಆನಂದ್‌, ಮಾಜಿ ಸಚಿವ ಶಿವರಾಂ, ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌, ಶಾಸಕರಾದ ಪ್ರದೀಪ್‌ ಈಶ್ವರ್‌, ಶಿವಲಿಂಗೇಗೌಡ, ಸಂಪಂಗಿ ಮತ್ತಿತರರು ಭಾಗವಹಿಸಿದ್ದರು.