ಕಸ್ತೂರಿರಂಗನ್ ವರದಿ ಜಾರಿ ಸಂಬಂಧ ಇದೀಗ ಮತ್ತೊಮ್ಮೆ ಅಧಿಸೂಚನೆ ಬಂದಿದೆ. ಆಕ್ಷೇಪಕ್ಕೆ ಕಾಲಾವಕಾಶ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಸ್ತೂರಿರಂಗನ್ ವರದಿ ಜಾರಿ ಸಂಬಂಧ ಇದೀಗ ಮತ್ತೊಮ್ಮೆ ಅಧಿಸೂಚನೆ ಬಂದಿದೆ. ಆಕ್ಷೇಪಕ್ಕೆ ಕಾಲಾವಕಾಶ ನೀಡಲಾಗಿದೆ. ನಾವು ಕೊನೆ ಕ್ಷಣದವರೆಗೆ ಕಾಯದೇ ರಾಜ್ಯ ಸರ್ಕಾರದಿಂದ ವಿರೋಧ ದಾಖಲಿಸುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಸ್ತೂರಿರಂಗನ್ ವರದಿಗೆ ಮೊದಲಿಂದಲೂ ವಿರೋಧ ವ್ಯಕ್ತಪಡಿಸಲಾಗುತ್ತಿದೆ. 2013ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ವಿರೋಧಿಸಲಾಗಿತ್ತು. ಆಗಲೇ ಇದನ್ನು ತಿರಸ್ಕರಿಸಿ, ರಾಜ್ಯ ಸರ್ಕಾರ ನಿರ್ಣಯ ಕೈಗೊಂಡು ಕಳುಹಿಸಿತ್ತು ಎಂದು ತಿಳಿಸಿದರು.
ಈ ಹಿಂದೆ ವಿರೋಧ ಮಾಡಿದಾಗ ಸರ್ಕಾರದ ಜತೆ ಕೇಂದ್ರ ಚರ್ಚೆ ಮಾಡಬೇಕಿತ್ತು. ಸಂಸದರು ಇಲ್ಲಿ ಬಂದು ನಮ್ಮದೇನಿಲ್ಲ ಎಂದು ಮನವಿ ಕೊಡ್ತಾರೆ. ಆದರೆ, ಕೇಂದ್ರ ಸರ್ಕಾರವೇನು ನಮ್ಮದಾ..? ನಮ್ಮದಾಗಿದ್ರೇ ಎರಡು ನಿಮಿಷದಲ್ಲಿ ಈ ವರದಿಯನ್ನು ತಿರಸ್ಕಾರ ಮಾಡಿ ಬಿಸಾಕುತ್ತಿದ್ದೆವು. ಇಲ್ಲಿನ ಸಂಸದರು ಜನರಿಗೆ ತಪ್ಪು ಮಾಹಿತಿ ಕೊಡೋ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.ಕಸ್ತೂರಿ ರಂಗನ್ ವರದಿ ಸಂಬಂಧ ಮುಖ್ಯಮಂತ್ರಿಗಳು ಇತ್ತೀಚೆಗೆ ಶಾಸಕರು, ಸಚಿವರ ಸಭೆ ಕರೆದಿದ್ದರು. ಸಭೆಯಲ್ಲಿ ವಿಶೇಷ ಅಧಿವೇಶನ ಕರೆದು, ನಿರ್ಣಯ ಕಳಿಸುವ ತೀರ್ಮಾನವಾಗಿದೆ. ಸೆ.3ರಂದು ಕ್ಯಾಬಿನೆಟ್ ಇದೆ. ಅಲ್ಲೂ ಚರ್ಚೆ ಮಾಡಿ ಮುಂದೆ ಕೊಂಡೊಯ್ಯುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಅತೀ ಹೆಚ್ಚು ಬಿಜೆಪಿ ಸಂಸದರಿದ್ದಾರೆ. ಕಸ್ತೂರಿ ರಂಗನ್ ವರದಿಯಿಂದ ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಹೆಚ್ಚು ತೊಂದರೆಯಾಗುತ್ತಿದೆ. ಸಂಸದರಾದ ಬಿ.ವೈ.ರಾಘವೇಂದ್ರ ಹಾಗೂ ಕಾಗೇರಿಯವರು ಇಲ್ಲಿ ಬಂದು ಪುಗ್ಸಟ್ಟೆ ಹೇಳಿಕೆ ಕೊಡ್ತಾರೆ. ಈ ಬಗ್ಗೆ ಪಾರ್ಲಿಮೆಂಟ್ ಅಲ್ಲಿ ಯಾಕೆ ಚರ್ಚೆ ಮಾಡಲಿಲ್ಲ. ಸಾಲದಕ್ಕೆ ಅವರ ತಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆಗ ಯಾಕೆ ಚರ್ಚೆ ಮಾಡಲಿಲ್ಲ. ಆಗ ಏನೂ ಮಾಡದೆ ಈಗ ಬಿಜೆಪಿ ರಾಜ್ಯಾಧ್ಯಕ್ಷರು ನಮಗೆ ಮನವಿ ಕೊಡುತ್ತಾರೆ. ಅತ್ತ ಸಂಸದ ರಾಘವೇಂದ್ರ ಅವರು ಮನವಿ ಮಾಡ್ತಾರೆ. ರಾಜಕೀಯವಾಗಿ ಹೀಗೆ ಬಿಡೋಕೆ ಆಗಲ್ಲ. ಕೇಂದ್ರ ಸರ್ಕಾರವನ್ನು ನಾವು ಟೀಕೆ ಮಾಡಲೇಬೇಕು. ಅಲ್ಲಿ ಜನ ಬದುಕ್ತಿದ್ದಾರೆ. ಗ್ರಾಮ, ಶಾಲೆ, ಆಸ್ಪತ್ರೆ ಎಲ್ಲವೂ ಇದೆ. ಈಗ ಈ ವರದಿ ಜಾರಿ ಆದರೆ ಎಲ್ಲರೂ ಸಮಸ್ಯೆ ಎದುರಿಸಬೆಕಾಗುತ್ತದೆ. ಹೀಗಾಗಿ ಈ ವರದಿಯನ್ನು ವಿರೋಧಿಸಿ ಸರ್ಕಾರದಿಂದ ವಿರೋಧ ದಾಖಲಿಸುತ್ತೇವೆ ಎಂದು ತಿಳಿಸಿದರು.ರಾಯರೆಡ್ಡಿ ಅಭಿಪ್ರಾಯ ಹೇಳಿದ್ದಾರೆ: ಶಿವಮೊಗ್ಗ: ಸಚಿವ ಬಸವರಾಜ ರಾಯರೆಡ್ಡಿ ಇಸ್ಲಾಂ ಧರ್ಮ ಶ್ರೇಷ್ಠ ಎಂದು ಅವರ ಅಭಿಪ್ರಾಯವನ್ನು ಹೇಳಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಹ ಮುಂದಿನ ಜನ್ಮದಲ್ಲಿ ಮುಸ್ಲಿಂನಾಗಿ ಹುಟ್ಟಬೇಕು ಅಂದಿದ್ರು. ದೇವೇಗೌಡರು ಬಿಜೆಪಿ ಜೊತೆ ಸೇರಿದ ತಕ್ಷಣ ಪವಿತ್ರರಾಗಿ ಬಿಡುತ್ತಾರೆ ಎಂದು ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.
ಇದೇ ದೇವೇಗೌಡ ಅವರು ಈ ಹಿಂದೆ ಮೋದಿಯವರು ಪ್ರಧಾನಿಯಾದ್ರೆ ದೇಶ ಬಿಟ್ಟು ಹೋಗ್ತೇನೆ ಅಂದಿದ್ರು. ಈಗ ಪಕ್ಕದಲ್ಲೇ ಹಲ್ಲು ಕಿಸ್ಕೊಂಡು ಕೂತುಕೊಳ್ಳುತ್ತಾರೆ. ನಾವೇನು ಅರ್ಜಿ ಹಾಕ್ಕೊಂಡು ಇದೇ ಧರ್ಮದಲ್ಲಿ ಹುಟ್ಟಬೇಕು ಅಂತ ಹುಟ್ಟಲ್ಲ. ಬಿ.ಆರ್ ಅಂಬೇಡ್ಕರ್ ಸಂವಿಧಾನದಲ್ಲಿ ಮಾತಾಡೋಕೆ ಸ್ವತಂತ್ರ ಕೊಟ್ಟಿದ್ದಾರೆ. ಬೇರೆಯವರನ್ನು ಪ್ರೀತಿ ಮಾಡೋದು ನಮ್ಮ ಸಂವಿಧಾನದ ವಿಶೇಷ. ಬಿಜೆಪಿಯವರು ಬೆಳಗ್ಗೆಯಿಂದ ಸಂಜೆ ತನಕ ಇಂತಹದನ್ನೇ ಹುಡುಕುತ್ತಾರೆ ಎಂದು ಕುಟುಕಿದರು.ಬಿಜೆಪಿ ಬಳ್ಳಾರಿ ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ತುದಿಬುಡ ಗೊತ್ತಿಲ್ಲ. ಇತ್ತ ಕುಮಾರಸ್ವಾಮಿ ಅವರು ಪಾದಯಾತ್ರೆ ಬಗ್ಗೆ ನನಗೆ ಗೊತ್ತೆ ಇಲ್ಲ ಎಂದು ಹೇಳುತ್ತಿದ್ದಾರೆ. ಕುಮಾರಸ್ವಾಮಿ ಅವರಿಗೆ ಬಿಜೆಪಿ ಏನೂ ಅರ್ಥ ಆಗಿಲ್ಲ ಅಂದ ಮೇಲೆ ಅವರ ಜೊತೆಗೆ ಯಾಕೆ ಇದ್ದಾರೆ ಅಂತ ಪ್ರಶ್ನೆ ಮಾಡಿಕೊಳ್ಳಬೇಕು. ಬಿಜೆಪಿಯವರಿಗೆ ಈಗ ಯಾವುದೇ ವಿಷಯ ಇಲ್ಲ. ಸರ್ಕಾರದ ಗ್ಯಾರಂಟಿಗಳು ಚೆನ್ನಾಗಿ ನಡಿಯುತ್ತಿದೆ. ಜನರ ಕಷ್ಟಕ್ಕೆ ಸ್ಪಂದನೆ ಮಾಡುವಂತ ಸರ್ಕಾರ ಇದೆ. ಈಗ ಯಾವುದೇ ವಿಷಯ ಇಟ್ಟುಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿಯವರು ಪಾದಯಾತ್ರೆ ಹೆಸರಿನಲ್ಲಿ ವಾಕಿಂಗ್ ಮಾಡಲಿ ಸ್ವಲ್ಪ ಹೊಟ್ಟೆನಾದ್ರೂ ಕರಗುತ್ತದೆ ಎಂದು ಟಾಂಗ್ ನೀಡಿದರು.
ಕೆಪಿಎಸ್ಸಿ ಹಗರಣದಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಬಂಧನವಾಗಿರುವ ಬಗ್ಗೆ ನನಗೆ ಅಷ್ಟು ಗೊತ್ತಿಲ್ಲ. ತಪ್ಪು ಯಾರೇ ಮಾಡಿದರು ಕಾನೂನಿನಡಿಯಲ್ಲಿ ಶಿಕ್ಷೆ ಆಗುತ್ತೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.