ಸಾರಾಂಶ
ಶಿವಮೊಗ್ಗ : ಕನ್ನಡತನದ ವಿಷಯ ಬಂದಾಗ ತಂದೆ ದಿ.ಎಸ್.ಬಂಗಾರಪ್ಪನವರಂತೆ ರಾಜಿಗೆ ಸಿದ್ದವಿಲ್ಲದೇ ನಾಡಿನ ಅಸ್ಮಿತೆಯ ಹಿತಕಾಯಲು ಟೊಂಕಕಟ್ಟಿ ನಿಲ್ಲುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಇಲ್ಲಿನ ಚಾಲುಕ್ಯನಗರದ ಸಾಹಿತ್ಯ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಅವರ ಹೆಸರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಗ್ರಂಥಾಲಯಕ್ಕೆ ಸಚಿವರು ತಮ್ಮ ವೇತನದಲ್ಲಿ 5 ಲಕ್ಷ ರು. ಚೆಕ್ ಅನ್ನು ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.
ಸಾಹಿತ್ಯ ಗ್ರಾಮದಲ್ಲಿ 2.50 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮುಂದುವರಿದ ಕಟ್ಟಡ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳಿಂದ ಹಾಗೂ ಸರ್ಕಾರದ ವತಿಯಿಂದ ಅಗತ್ಯ ನೆರವು ನೀಡಲಾಗುವುದು. ಕನ್ನಡ ಸಾಹಿತ್ಯ ಸಮ್ಮೇಳನಗಳು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯದ ಭಾಗವಾಗಿವೆ ಎಂದರು.
ಕನ್ನಡ ಭಾಷೆಯ ಉಳಿವು ವಿಕಾಸಗೊಳಿಸುವ ಸದುದ್ದೇಶದಿಂದ ಗ್ರಂಥಾಲಯಕ್ಕೆ ನೆರವು ನೀಡುವ ಮೂಲಕ ಅಲ್ಪಸೇವೆಯನ್ನು ನೀಡಲಾಗಿದ್ದು, ಕನ್ನಡ ನಾಡು-ನುಡಿಯ ಬೆಳವಣಿಗೆ ಮತ್ತು ನೆಲ-ಜಲ ಸಂರಕ್ಷಣೆ ಸೇರಿದಂತೆ ಇಲ್ಲಿನ ಶ್ರೀಮಂತ ಕಲೆ, ಸಾಹಿತ್ಯ, ಸಂಗೀತ, ನೃತ್ಯ ಪರಂಪರೆಯನ್ನು ಒಳಗೊಂಡಂತೆ ನಾಡಿನ ಅಸ್ಮಿತೆಯ ಹಿತಕಾಯಲು ಸದಾ ಸಿದ್ಧ ಎಂದರು.
ಕನ್ನಡವನ್ನು ಇನ್ನೂ ಚೆನ್ನಾಗಿ ಓದಿಸುವ, ಮಕ್ಕಳು ಕನ್ನಡ ಭಾಷೆಯ ಸೊಗಡು, ಶ್ರೀಮಂತಿಕೆಯನ್ನ ಅರ್ಥೈಸಿಕೊಳ್ಳಲು ಅನುಕೂಲವಾಗುವಂತೆ ಸಂಶೋಧನಾತ್ಮಕ, ಪ್ರಾಯೋಗಿಕ ಸಲಹೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಅದರ ಅನುಷ್ಠಾನಕ್ಕಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥಗೌಡ, ವಿಧಾನಪರಿಷತ್ ಸದಸ್ಯೆ ಬಲ್ಕಿಶ್ಬಾನು, ಗ್ಯಾರಂಟಿ ಅನುಷ್ಟಾನ ಸಮಿತಿಯ ಅಧ್ಯಕ್ಷ ಚಂದ್ರಭೂಪಾಲ, ಎಲ್ಲಾ ತಾಲೂಕುಗಳ ಕನ್ನಡ ಸಾಹಿತ್ಯ ಪರಿಷತ್ಸದಸ್ಯರು, ಕಸಾಪ ಪದಾಧಿಕಾರಿಗಳು ಇದ್ದರು.
ಮುಂದಿನ ವರ್ಷದಿಂದ ಮಕ್ಕಳಿಗೆ ಪಠ್ಯದ ಜೊತೆ ಕೌಶಲ್ಯ ತರಗತಿ
ಮುಂದಿನ ಶೈಕ್ಷಣಿಕ ಸಾಲಿನಿಂದಲೇ ರಾಜ್ಯದಲ್ಲಿ 8 ರಿಂದ 12ನೇ ತರಗತಿಯವರೆಗಿನ ಎಲ್ಲಾ ಮಕ್ಕಳಿಗೆ ಪಠ್ಯದ ಜೊತೆಗೆ ಕೌಶಲ್ಯ ತರಗತಿಗಳನ್ನು ಆರಂಭಿಸಲು ಉದ್ದೇಶಿಸಲಾಗಿದ್ದು, ಶೀಘ್ರದಲ್ಲಿ ವಿವರಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಮಕ್ಕಳ ಆರ್ಥಿಕ ಸಂಕಷ್ಟವನ್ನು ಅರಿತು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುವಂತೆ ಎಸ್ಸೆಸ್ಸೆಲ್ಸಿ ನಂತರದ ಶಿಕ್ಷಣದೊಂದಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಉಚಿತವಾಗಿ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳಂತೆಯೇ ರಾಜ್ಯದ ಎಲ್ಲಾ ಗ್ರಂಥಾಲಯಗಳಿಗೆ ಉಚಿತ ವಿದ್ಯುತ್, ಇತರ ಸೌಲಭ್ಯಗಳನ್ನು ಒದಗಿಸಿ, ಗ್ರಂಥಾಲಯದ ಕಾರ್ಯಾವಧಿಯನ್ನು ವಿಸ್ತರಿಸಲಾಗುವುದು. ಅಲ್ಲದೇ ಸಿಬ್ಬಂಧಿಯ ಕೊರತೆಯನ್ನು ನೀಗಿಸಲು ಗಮನಹರಿಸಲಾಗುವುದು. ಗ್ರಂಥಾಲಯದಲ್ಲಿನ ಹಲವು ನ್ಯೂನತೆಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಅವರ ವ್ಯವಸ್ಥಿತ ನಿರ್ವಹಣೆಗಾಗಿ ಇಲಾಖೆಗೆ ಹೊಸದಾಗಿ ನಿಯೋಜತ ಅಧಿಕಾರಿಗಳಿಗೆ ಅದರ ಹೊಣೆಗಾರಿಕೆ ವಹಿಸಲಾಗಿದೆ ಎಂದರು.
ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಿವಮೊಗ್ಗದಲ್ಲಿ ನಡೆಸಲು ಅವಕಾಶ ದೊರೆತಲ್ಲಿ, ಅದರ ವ್ಯವಸ್ಥಿತ ಆಯೋಜನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.