ಸಾರಾಂಶ
ಅರಕಲಗೂಡು : ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮಾಡಲು ಹಾಗೂ ಮೈತ್ರಿ ಧರ್ಮ ಪಾಲನೆ ಉದ್ದೇಶದಿಂದ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು, ಮುಖಂಡರು ಮೈತ್ರಿ ಅಭ್ಯರ್ಥಿ ಪರ ಕಾರ್ಯ ನಿರ್ವಹಿಸುತ್ತೇವೆ ಎಂದು ಬಿಜೆಪಿ ಮುಖಂಡ ಎಚ್.ಯೋಗಾರಮೇಶ್ ತಿಳಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಡುವೆ ಮಾಡಿಕೊಂಡಿರುವ ಮೈತ್ರಿಯನ್ನು ಬಿಜೆಪಿ ಪಕ್ಷದ ಪ್ರತಿಯೊಬ್ಬರು ಪಾಲನೆ ಮಾಡಲಿದ್ದಾರೆ. ಈ ಕುರಿತು ಪಕ್ಷದ ವರಿಷ್ಠರ ನಿರ್ದೇಶನ ಕೂಡ ಇದ್ದು, ಯಾವುದೇ ರೀತಿಯ ವೈಯಕ್ತಿಕ ಹಿತಾಸಕ್ತಿಗೆ ಒಳಗಾಗದೆ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಲಾಗುವುದು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಜಯಗಳಿಸುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯಕ್ರಮ ರೂಪಿಸಲಾಗಿದೆ. ಈ ಕುರಿತು ಚರ್ಚಿಸಲು ಏ.13 ರಂದು ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರ ಸಭೆಯನ್ನು ಪಟ್ಟಣದಲ್ಲಿ ಏರ್ಪಡಿಸಲಾಗಿದೆ. ರಾಷ್ಟ್ರದ ಹಿತದೃಷ್ಠಿ ಹಾಗೂ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕೆಂಬುದು ಪ್ರತಿಯೊಬ್ಬ ಭಾರತೀಯನ ಮಹಾದಾಸೆಯಾಗಿದೆ ಎಂದು ಹೇಳಿದರು.
ಕಳೆದ ಬಾರಿ ಜೆಡಿಎಸ್ ಶಾಸಕರಾಗಿದ್ದ ಎ.ಟಿ.ರಾಮಸ್ವಾಮಿ ಅವರನ್ನು ಆ ಪಕ್ಷದ ಮುಖಂಡರು ನಡೆಸಿಕೊಂಡಿರುವ ರೀತಿ ಇಡೀ ಜಿಲ್ಲೆಗೆ ಗೊತ್ತಿದೆ. ಇದರಿಂದ ನೊಂದಿರುವ ಅವರು ಚುನಾವಣೆಯಲ್ಲಿ ತಟಸ್ಥರಾಗಿ ಉಳಿಯುವುದಾಗಿ ಹೇಳಿದ್ದು, ಈ ಕುರಿತು ಬಿಜೆಪಿ ವರಿಷ್ಠರಿಗೂ ತಿಳಿಸಿದ್ದಾರೆ ಎಂದರು.
ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ‘ಈಗಾಗಲೇ ನನ್ನ ನಿಲುವು ಕುರಿತು ಬಿಜೆಪಿ ವರಿಷ್ಟರಿಗೆ ತಿಳಿಸಿದ್ದೇನೆ .ನಾಲ್ಕುಗೋಡೆ ನಡುವೆ ನಡೆದಿರುವ ವಿಷಯವನ್ನು ನಾನು ಬಹಿರಂಗ ಪಡಿಸುವುದಿಲ್ಲ. ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಚ್.ಯೋಗಾರಮೇಶ್ ಮತ್ತು ಇತರೆ ಮುಖಂಡರೊಂದಿಗೆ ಈ ಕುರಿತು ಚರ್ಚಿಸಿದ್ದೇನೆ’ ಎಂದರು.
ಪಪಂ ಮಾಜಿ ಅಧ್ಯಕ್ಷ ಲೋಕೇಶ್ ಇದ್ದರು.