ಸಾರಾಂಶ
ಶಿವಾನಂದ ಮಹಾಬಲಶೆಟ್ಟಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿರಾಜ್ಯದ ನೇಕಾರರಿಗೆ ಏಪ್ರಿಲ್ ೨೦೨೩ ರಿಂದ ಸೆಪ್ಟೆಂಬರ್ ೨೦೨೩ರವರೆಗಿನ ನೇಕಾರರಿಗೆ ಹೆಚ್ಚಿನ ವಿದ್ಯುತ್ ಬಿಲ್ನಲ್ಲಿ ಹೆಚ್ಚುವರಿ ಶುಲ್ಕವಾಗಿದ್ದನ್ನು ವಿರೋಧಿಸಿ ಕಳೆದ ೧೦ ತಿಂಗಳಿಂದ ಬಿಲ್ ಹಣ ನೀಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿದ್ದ ನೇಕಾರರು ತಮ್ಮ ಪಟ್ಟು ಸಡಿಲಿಸಿ ಒಮ್ಮತದಿಂದ ಎಲ್ಲರೂ ವಿದ್ಯುತ್ ಶುಲ್ಕ ತುಂಬಲು ಮುಂದಾಗಿದ್ದಾರೆ.ನೇಕಾರರಿಗೆ ₹೧.೨೫ ಸಬ್ಸಿಡಿ ದರದಲ್ಲಿ ವಿದ್ಯುತ್ ಒದಗಿಸಲಾಗುತ್ತಿತ್ತು. ಒಮ್ಮೆಲೆ ಕಳೆದ ವರ್ಷ ಏಪ್ರಿಲ್ ತಿಂಗಳಿನಿಂದ ಕನಿಷ್ಠ ಶುಲ್ಕ ₹೯೦ ಬದಲಾಗಿ ₹೧೪೦ ಹಾಗೂ ಇದಕ್ಕೆ ಇಂಧನ ಹೊಂದಾಣಿಕೆ ಶುಲ್ಕ(ಎಫ್‌ಎಸಿ)ವನ್ನು ಪ್ರತಿ ಯುನಿಟ್‌ಗೆ ₹೨.೫೫ ರಂತೆ ಹೆಚ್ಚಳಗೊಳಿಸಿದ್ದನ್ನು ಬಲವಾಗಿ ವಿರೋಧಿಸಿದ್ದರು. ರಾಜ್ಯದ ನೇಕಾರರು ಒಟ್ಟು ಸುಮಾರು ₹೧೫ ಕೋಟಿಗಳಷ್ಟು ವಿದ್ಯುತ್ ಶುಲ್ಕ ಬಾಕಿಯಾಗಿತ್ತು. ಅದರಲ್ಲಿ ರಬಕವಿ-ಬನಹಟ್ಟಿ ತಾಲೂಕಿನದ್ದೇ ₹೩.೫ ಕೋಟಿಗಳಷ್ಟಿದೆ. ಇದೀಗ ಎಲ್ಲ ನೇಕಾರರು ಒಮ್ಮತದ ಮೂಲಕ ವಿದ್ಯುತ್ ಶುಲ್ಕ ಕಟ್ಟುವಲ್ಲಿ ಸ್ವಯಂಪ್ರೇರಿತ ಮುಂದಾಗಿರುವುದು ಗಮನಾರ್ಹ ಅಂಶವಾಗಿದೆ.
ಯಾಕೆ ತುಂಬಲು ಮುಂದಾಗಿದ್ದಾರೆ?:ಈಗಾಗಲೇ ರಾಜ್ಯ ಸರ್ಕಾರ ಕಳೆದ ಬಜೆಟ್‌ನಲ್ಲಿ ನೇಕಾರರಿಗೆ ಅಕ್ಟೋಬರ್ ತಿಂಗಳಿನಿಂದ ೧೦ ಎಚ್‌ಪಿವರೆಗೆ ಸಂಪೂರ್ಣ ಉಚಿತ ವಿದ್ಯುತ್ ಒದಗಿಸುತ್ತಿದೆ. ಮತ್ತೊಂದು ಹೆಜ್ಜೆ ಮುಂದುವರೆದು ನೇಕಾರರ ಹೋರಾಟಕ್ಕೆ ಮಣಿದು ೨೦ ಎಚ್.ಪಿ.ವರೆಗಿನ ಮಗ್ಗಗಳಿಗೆ ೫೦೦ ಯುನಿಟ್ ವಿದ್ಯುತ್ ಬಳಕೆಗೆ ಮಾತ್ರ ಸೀಮಿತಗೊಳಿಸಿದ್ದ ಸಬ್ಸಿಡಿ ₹೧.೨೫ ಪ್ರತಿ ಯುನಿಟ್‌ನ್ನು ಅನಿಯಮಿತ ಬಳಕೆಗೆ ವಿಸ್ತರಿಸಿ ಆದೇಶ ಹೊರಡಿಸಿ ನೇಕಾರಿಕೆ ಉದ್ಯಮಕ್ಕೆ ಅವಕಾಶ ಕಲ್ಪಿಸಿದೆ. ಇದೆಲ್ಲದಕ್ಕೂ ನೇಕಾರರು ನಿರಾಳರಾಗಿದ್ದು, ಸರ್ಕಾರದಿಂದ ಬಾಕಿ ಹಣ ಕಟ್ಟಲೇಬೇಕೆಂಬ ಒತ್ತಡ ಹೆಚ್ಚಿರುವುದರಿಂದ ಎಲ್ಲ ನೇಕಾರರ ಸಮೂಹದ ಸಹಮತ ದೊರೆತಂತಾಗಿದೆ. ಬಾಕಿ ವಿದ್ಯುತ್ ಶುಲ್ಕವನ್ನು ಸರ್ಕಾರವೇ ಭರಿಸಬೇಕೆಂಬ ನಿಬಂಧನೆ ಬಿಟ್ಟು ನೇಕಾರರು ಭರಿಸಲು ಮುಂದಾಗಿದ್ದಾರೆ.
೧೦ ಎಚ್‌ಪಿ ನಂತರದವರಿಗೆ ಕನಿಷ್ಠ ಶುಲ್ಕ:೧೦ ಎಚ್‌ಪಿವರೆಗಿನ ಮಗ್ಗಗಳನ್ನು ಹೊಂದಿರುವ ನೇಕಾರರು ಕನಿಷ್ಠ ಶುಲ್ಕವನ್ನು ತುಂಬುವಂತಿಲ್ಲ(ಇದರಲ್ಲಿ ಗರಿಷ್ಠ ೧೦ ಮಗ್ಗಗಳಿಂದ ನೇಯ್ಗೆ ಮಾಡುವ ನೇಕಾರರು). ೧೦ ಎಚ್‌ಪಿದಿಂದ ೨೦ಎಚ್‌ಪಿ ಅಂದರೆ ಗರಿಷ್ಠ ೨೦ ಮಗ್ಗಗಳನ್ನು ಹೊಂದಿರುವ ನೇಕಾರರು ಪ್ರತಿ ಎಚ್‌ಪಿಗೆ ಕನಿಷ್ಠ ಶುಲ್ಕ ₹೧೪೦ಗಳಷ್ಟು ಆಕರಣೆಯಿದೆ. ಕನಿಷ್ಠ ಶುಲ್ಕ ಮತ್ತು ೨೦ಎಚ್‌ಪಿ ವರೆಗೆ ಬಳಕೆ ಮಾಡುವ ನೇಕಾರರಿಗೆ ಸರ್ಕಾರದ ಸಬ್ಸಿಡಿ ಮೊತ್ತವೇ ಆಕರಣೆಯಾಗುತ್ತಿರುವುದರಿಂದ ನೇಕಾರರು ಆದೇಶಪೂರ್ವ ಅವಧಿಯ ಬಾಕಿ ಮೊತ್ತವನ್ನು ತುಂಬುತ್ತಿದ್ದಾರೆ.