ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಕೆಎಚ್‌ಡಿಸಿ ನಿಗಮದಡಿ ದುಡಿಯುತ್ತಿರುವ ನೇಕಾರರಿಗೆ ಡಿಬಿಟಿ ಅನ್ವಯ ನೇರ ಬ್ಯಾಂಕ್‌ನ ಉಳಿತಾಯ ಖಾತೆಗೆ ಮಜೂರಿ ಹಣ ಜಮೆಯಾಗುವಂತೆ ನಿರ್ಣಯ ಕೈಗೊಂಡಿರುವುದನ್ನು ವಿರೋಧಿಸಿರುವ ಕೈಮಗ್ಗ ನೇಕಾರರು, ನಗದು ರೂಪದಲ್ಲಿಯೇ ಮಜೂರಿ ಹಣ ನೀಡಬೇಕೆಂದು ಆಗ್ರಹಿಸಿ ಮಂಗಳವಾರ ಬನಹಟ್ಟಿ ಕೆಎಚ್‌ಡಿಸಿ ಕಾರ್ಯಾಲಯದ ಆವರಣದಲ್ಲಿ ಪ್ರತಿಭಟಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಸಿದ್ದಪ್ಪ ಗಂವಾರ ಮಾತನಾಡಿ, ಕಳೆದ 15 ದಿನಗಳಿಂದ ನಾವು ದುಡಿದ ನೇಯ್ಗೆಯ ಮಜೂರಿ ದೊರೆತಿಲ್ಲ. ಬ್ಯಾಂಕ್ ಖಾತೆಗೆ ಪಾವತಿಸುವುದನ್ನು ವಿರೋಧಿಸಲಾಗಿದ್ದು, ತಕ್ಷಣವೇ ನಗದು ರೂಪದಲ್ಲಿ ಮಜೂರಿ ನೀಡಬೇಕು ಎಂದು ಹೇಳಿದರು.

ಹೆಚ್ಚಾಗಿ ವಯೋವೃದ್ಧರೇ ನೇಯ್ಗೆಯಲ್ಲಿ ತೊಡಗಿದ್ದಾರೆ. ದೂರದ ಬ್ಯಾಂಕ್‌ಗಳಿಗೆ ತೆರಳಲು ಸಾಧ್ಯವಾಗುವುದಿಲ್ಲ. ಅಲ್ಲದೆ ಔಷಧೋಪಚಾರ, ಒಪ್ಪತ್ತಿನ ಊಟಕ್ಕೂ ತೊಂದರೆಯಾಗುತ್ತಿದೆ. ನಿಗಮವು ಇವೆಲ್ಲವನ್ನು ಅವಲೋಕಿಸಿ ಮೊದಲಿದ್ದ ಹಾಗೇ ಬಟ್ಟೆ ತಲುಪಿಸಿದ ಕೂಡಲೇ ನಮ್ಮ ಮಜೂರಿಯನ್ನು ನಗದು ರೂಪದಲ್ಲಿ ಕೊಡದಿದ್ದಲ್ಲಿ ಇಡೀ ದಿನ ಸಾಮೂಹಿಕ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ನೇಕಾರರಾದ ನಾಮದೇವ ಗೊಂದಕ, ಹಜರತ್ ಮುಲ್ಲಾ, ಎಂ.ಎ.ಜಮಾದಾರ, ಗಂಗಪ್ಪ ಹುಣಶ್ಯಾಳ, ವಜೀರ ಕೆರೂರ, ಇಮಾಮಸಾಬ ಹವರೆ, ಅಕ್ಬರ್ ಅಥಣಿ, ಶಾರದಾ ಆಟೀಲ, ಎಸ್.ಕೆ.ಕಳ್ಳಿಗುದ್ದಿ, ಎಂ.ಎಂ. ಕವಿಶೆಟ್ಟಿ, ಎಸ್.ಎಸ್.ಮುಗಳೊಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.


--------ಕೋಟ್‌....

ರಾಜ್ಯದ 83 ಕೇಂದ್ರಗಳಲ್ಲಿ 73ರಲ್ಲಿ ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ಮಜೂರಿ ವೇತನ ನೀಡಲಾಗುತ್ತಿದೆ. ಬನಹಟ್ಟಿ ಪ್ರಧಾನ ಕಚೇರಿಯಲ್ಲಿರುವ ೧೦ ಕೇಂದ್ರಗಳಿಂದಲೂ ಅದೇ ಕಾರ್ಯವಾಗಿದೆ. ನಿಗಮದ ಆದೇಶವಿದ್ದು, ನೇಕಾರರು ಸಹಕರಿಸಬೇಕು.

-ವಿಜಯಕುಮಾರ ಬೀಳಗಿ, ಯೋಜನಾಧಿಕಾರಿ, ಕೆಎಚ್‌ಡಿಸಿ, ಬನಹಟ್ಟಿ.--------------