ಸಾರಾಂಶ
ಖಾಜು ಸಿಂಗೆಗೋಳ
ಕನ್ನಡಪ್ರಭ ವಾರ್ತೆ ಇಂಡಿಭೀಕರ ಬರಗಾಲ, ಜಲಮೂಲಗಳು ಬತ್ತಿದ್ದರಿಂದ ನೀರು ಸಿಗದೆ ಕಂಗಾಲಾಗಿದ್ದ ಜನ, ಜಾನುವಾರುಗಳು, ಪ್ರಾಣಿ, ಪಕ್ಷಿಗಳು ಹರ್ಷಗೊಂಡಿವೆ. ಮುಂಗಾರು ಪೂರ್ವ ಮಳೆಯಿಂದಾಗಿ ಬಿಸಿಲಿನಿಂದ ಬತ್ತಿದ್ದ ಹಳ್ಳ, ತೊರೆಗಳು ಈಗ ಕಂಗೊಳಿಸುತ್ತಿವೆ. ಇದೀಗ ಆಲಮಟ್ಟಿ ಡ್ಯಾಂನಿಂದ ಕಾಲುವೆಗೆ ಬಿಡಲಾಗಿರುವ ನೀರಿನಿಂದ ತಾಲೂಕಿನ ಅರ್ಧದಷ್ಟು ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಹಳ್ಳ, ನದಿ, ಬಾಂದಾರ, ಕಾಲುವೆಗಳಿಗೆ ನೀರು ಹರಿದಿದ್ದು, ರೈತರು ಹರ್ಷಗೊಂಡಿದ್ದಾರೆ. ಅಲ್ಲದೇ, ಮೂಕ ಪ್ರಾಣಿಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಿದೆ.ಆಲಮಟ್ಟಿ ಅಣೆಕಟ್ಟಿನಿಂದ ಬಿಟ್ಟಿರುವ ನೀರು ನಾರಾಯಣಪೂರ ಜಲಾಶಯಕ್ಕೆ ಸೇರಿ, ಅಲ್ಲಿಂದ ಇಂಡಿ ಶಾಖಾ ಕಾಲುವೆಯ ಮೂಲಕ ಬಳಗಾನೂರ ಕೆರೆ, ಸಂಗೋಗಿ ಕೆರೆ ತುಂಬಿ, ನಾದ ದೊಡ್ಡಹಳ್ಳ, ಮಾರ್ಸನಹಳ್ಳಿ ಬಳಿಯ ಹಳ್ಳದ ಮೂಲಕ ಭೀಮಾನದಿಗೆ ಸೇರುತ್ತಿದೆ. ಬಳಿಕ, ಹಳ್ಳ, ನದಿಯಲ್ಲಿ ನಿರ್ಮಿಸಿದ ಬಾಂದಾರಗಳು ಬಹುತೇಕ ತುಂಬಿ ಇದೀಗ ರೈತರು ಕೂಡ ಮಂದಹಾಸ ಬೀರುವಂತಾಗಿದೆ.
ಕೆಬಿಜೆಎನ್‌ಎಲ್ ಹಿರಿಯ ಅಧಿಕಾರಿಗಳ ಕಳಕಳಿಯಿಂದ ಇಂದು ಇಂಡಿ ಶಾಖಾ ಕಾಲುವೆಯ ಮೂಲಕ ಹಲಸಂಗಿ ಹಳ್ಳ, ಮಾರ್ಸಹನಳ್ಳಿ ಹಳ್ಳ, ನಾದ ಹಳ್ಳ, ಆಳೂರ ಹಳ್ಳ ಹಾಗೂ ಇಂಡಿ ಶಾಖಾ ಕಾಲುವೆಯ ಕೊನೆಯವರೆಗೆ ನೀರು ಹರಿದಿದೆ. ಕುಡಿಯುವ ನೀರಿಗೆ ಬಹಳ ಅನುಕೂಲವಾಗಿದೆ. ನಾದ ಹಳ್ಳಕ್ಕೆ ಹರಿಸಿದ ನೀರಿನಿಂದ ಶಿರಶ್ಯಾಡ, ನಾದ, ಗೋಳಸಾರ, ಲಾಳಸಂಗಿ, ಗೋಳಸಾರ, ಶಿವಪೂರ, ಮಿರಗಿ ಗ್ರಾಮದ ಹಾಗೂ ಮಾರ್ಸನಹಳ್ಳಿ ಗ್ರಾಮದ ಮುಂದಿನ ಹಳ್ಳಕ್ಕೆ ಹರಿದ ನೀರಿನಿಂದ ಮಾರ್ಸಹನಳ್ಳಿ, ಅರ್ಜುಣಗಿ, ಹಂಚನಾಳ, ಆಲಮೇಲ ವಸತಿ ಸಾರ್ವಜನಿಕರಿಗೆ ಹಾಗೂ ಹಲಸಂಗಿ ಗ್ರಾಮದ ಮುಂದಿನ ಹಳ್ಳಕ್ಕೆ ಹರಿಸಿದ ನೀರಿನಿಂದ ಸುಮಾರು ಐದಾರು ಗ್ರಾಮಗಳ ಜನರಿಗೆ ಕುಡಿಯುವ ನೀರಿನ ಅನುಕೂಲವಾಗಿದೆ. ಇದರಿಂದ ಬತ್ತಿದ್ದ ಬೋರ್‌ವೆಲ್ ಹಾಗೂ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಿ ಕಳೆ ಬಂದಂತಾಗಲಿದೆ.ತಾಲೂಕಿನ ಕೆರೆ, ಹಳ್ಳ, ಬಾವಿ, ಬೋರ್‌ವೆಲ್‌ಗಳು ಭೀಕರ ಬರಕ್ಕೆ ಬತ್ತಿದ್ದರಿಂದ ಪ್ರಾಣಿ, ಪಕ್ಷಿ, ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತೀವ್ರ ಸಮಸ್ಯೆಯಾಗಿತ್ತು. ಅಧಿಕಾರಿಗಳ ಕಳಕಳಿಯಿಂದ ಕಾಲುವೆ ಮೂಲಕ ಹಳ್ಳಕ್ಕೆ ನೀರು ಹರಿಸಿದ್ದರಿಂದ ಹಳ್ಳದ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಬಾವಿ, ಬೋರ್‌ವೆಲ್‌ಗಳ ಅಂತರ್ಜಲಮಟ್ಟ ಹೆಚ್ಚುತ್ತಿದೆ. ಪರಿಣಾಮ ಕುಡಿಯುವ ನೀರು ಸೇರಿದಂತೆ ಪ್ರಾಣಿ, ಪಕ್ಷಿಗಳಿಗೆ ನೀರಿನ ದಾಹ ತೀರಿಸಿಕೊಳ್ಳಲು ಅನುಕೂಲವಾಗಿದೆ.
ಹಲವು ವರ್ಷಗಳಿಂದ ಮಳೆ ಇಲ್ಲದೆ ನಾದ, ಮಾರ್ಸನಹಳ್ಳಿ, ಹಲಸಂಗಿ ಬಳಿಯ ಹಳ್ಳ ನೀರು ತುಂಬಿ ಹರಿದಿಲ್ಲ. ಇಂದು ಇಂಡಿ ಶಾಖಾ ಕಾಲುವೆಯ ಮೂಲಕ ಹರಿದ ನೀರು ಹಳ್ಳದ ಮೂಲಕ ಭೀಮಾನದಿ ಸೇರಿದೆ. ಮಳೆಗಾಲದಲ್ಲಿ ಹರಿಯದ ಹಳ್ಳಗಳು ಇಂದು ಕಾಲುವೆ ಮೂಲಕ ಹರಿಸಿದ ನೀರಿನಿಂದ ನೀರು ಕಂಡಿವೆ. ಅಲ್ಲದೇ, ಅಂತರ್ಜಲ ಮಟ್ಟ ವೃದ್ಧಿಗೂ ಕಾರಣವಾಗಿದ್ದು, ಬಾವಿ, ಬೋರ್‌ವೆಲ್ ರಿಜಾರ್ಜ್ ಆಗುತ್ತಿರುವುದರಿಂದ ರೈತರು ಕೂಡ ಸಂತಸ ಪಡುತ್ತಿದ್ದಾರೆ.---------------ಕಳೆದ ವರ್ಷ ಮಳೆ ಬಾರದೆ, ನಾದ ಗ್ರಾಮದ ಮುಂದಿನ ಹಳ್ಳ ಹರಿಯದೇ ಇರುವುದರಿಂದ ಈ ಭಾಗದ ಗ್ರಾಮಗಳ ಸುತ್ತಲಿನ ಅಂತರ್ಜಲಮಟ್ಟ ಕುಸಿದಿದೆ. ಹಳ್ಳದಲ್ಲಿ ಎಷ್ಟು ಆಳ ಗುಂಡಿ ತೋಡಿದರು ನೀರು ಬರದ ಸ್ಥಿತಿಯಲ್ಲಿತ್ತು. ಇಂದು ಕೆಬಿಜೆಎನ್‌ಎಲ್ ಹಿರಿಯ ಅಧಿಕಾರಿಗಳ ಕಳಕಳಿಯಿಂದ ಇಂದು ಹಳ್ಳಗಳಿಗೆ ನೀರು ಹರಿಸಿದ್ದರಿಂದ ಅಂತರ್ಜಲಮಟ್ಟ ಹೆಚ್ಚಾಗಿ ಕೃಷಿಗೂ ಹಾಗೂ ಕುಡಿಯುವ ನೀರಿಗೂ ಅನುಕೂಲವಾಗಿದೆ.
- ಶಿವಾನಂದ ರಾವೂರ, ಮಿರಗಿ ಗ್ರಾಮದ ಮುಖಂಡ.---------
ನಾದ ಹಳ್ಳದ ದಂಡೆಯ ಮೇಲಿರುವ ಹಲವು ಗ್ರಾಮಗಳಲ್ಲಿ ತೆರೆದ ಬಾವಿ, ಬೋರ್‌ವೆಲ್‌ಗಳಲ್ಲಿ ಅಂತರ್ಜಲಮಟ್ಟ ಕುಸಿದ್ದಿದ್ದರಿಂದ ನೀರಿನ ಸಮಸ್ಯೆ ತಲೆದೋರಿತ್ತು. ಪ್ರಾಣಿ, ಪಕ್ಷಿಗಳು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದವು. ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರಿಂದ, ನಮ್ಮ ಮನವಿಗೆ ಸ್ಪಂದಿಸಿ ನಾದ ಹಳ್ಳಕ್ಕೆ ಕಾಲುವೆ ಮೂಲಕ ನೀರು ಹರಿಸಿದ್ದಾರೆ. ಇಂದು ಹಳ್ಳದ ದಂಡೆಯಲ್ಲಿನ ತೆರೆದ ಬಾವಿ, ಬೋರ್‌ವೆಲ್‌ಗಳಿಗೆ ಅಂತರ್ಜಲಮಟ್ಟ ಹೆಚ್ಚಾಗಲು ಕಾರಣವಾಗಿದೆ. ಪ್ರಾಣಿ, ಪಕ್ಷಿ, ಜನ, ಜಾನುವಾರುಗಳಿಗೂ ನೀರಿನ ಅನುಕೂಲವಾಗಿದೆ.- ಚಂದಣ್ಣ ಆಲಮೇಲ, ಪಿಕೆಪಿಎಸ್ ಅಧ್ಯಕ್ಷ.
------------ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ಕುಡಿಯುವ ನೀರಿಗೆ ಮೊದಲ ಪ್ರಾಶಸ್ತ್ಯ ನೀಡಿದ್ದರಿಂದ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದ, ಕೆರೆಗಳನ್ನು ತುಂಬಿಸುವುದಕ್ಕೆ ಮೊದಲ ಆದ್ಯತೆ ನೀಡಿ ಕಾಲುವೆ ಮೂಲಕ ನೀರು ಹರಿಸಲಾಗಿದೆ. ಕುಡಿಯುವ ನೀರಿನ ತೊಂದರೆ ಇರುವ ಹಾಗೂ ಕಾಲುವೆ ಮೂಲಕ ನೀರು ಹೋಗದಿರುವ ಗ್ರಾಮಗಳ ವ್ಯಾಪ್ತಿಯ ಹಳ್ಳಗಳಿಗೆ ಇಂಡಿ ಶಾಖಾ ಕಾಲುವೆ ಮೂಲಕ ನೀರು ಹರಿಸಲಾಗಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪಮಟ್ಟಿಗೆ ಕಡಿಮೆ ಆಗಲಿದೆ.
- ಮನೋಜಕುಮಾರ ಗಡಬಳ್ಳಿ, ಅಭಿಯಂತರ ಕೆಬಿಜೆಎನ್‌ಎಲ್, ರಾಂಪೂರ.