ಖಾಸಗೀಕರಣದಿಂದ ಸರ್ಕಾರಕ್ಕೆ ವಾರ್ಷಿಕ 100 ಕೋಟಿ ರು. ರಾಜಸ್ವ ನಷ್ಟವಾಗುವುದಲ್ಲದೆ, ಗ್ರಾಹಕರ ರಕ್ಷಣೆ ವಿಫಲವಾಗುತ್ತದೆ. ನೂರಾರು ಕೋಟಿ ಜನರಿರುವ ನಮ್ಮ ದೇಶದಲ್ಲಿ ತೂಕ ಮತ್ತು ಅಳಗೆಯಲ್ಲಿ ಸಣ್ಣ ಮೋಸವಾದರೂ ಸಾವಿರಾರು ಕೋಟಿ ರು. ನಷ್ಟ ಉಂಟಾಗುತ್ತದೆ. ಈ ಎಲ್ಲ ಕಾರಣಗಳಿಂದಾಗಿ ತೂಕದ ಯಂತ್ರಗಳ ಪರಿಶೀಲನೆ ಮತ್ತು ಮುದ್ರೆ ಅವಧಿ ವಿಸ್ತರಿಸದೆ ಒಂದು ವರ್ಷದ ಅವಧಿ ಮುಂದುವರಿಸಬೇಕೆಂದು ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ, ತುಮಕೂರು
ಕೇಂದ್ರ ಸರ್ಕಾರ ಅಧಿಸೂಚನೆ ಮೂಲಕ ಗ್ರಾಹಕ ವ್ಯವಹಾರಗಳ ಅಡಿಯಲ್ಲಿ ಬರುವ ಕಾನೂನು ಮಾಪನಶಾಸ್ತ್ರ ಇಲಾಖೆಗೆ ನಿಯಮಗಳ ತಿದ್ದುಪಡಿ ಮಾಡಲು ಹೊರಟಿದೆ. ಲೈಸೆನ್ಸ್ ನವೀಕರಿಸುವ ಸಮಯ ಮಿತಿ ವಿಸ್ತಾರಗೊಳಿಸುತ್ತಿದ್ದು, ಇದು ಗ್ರಾಹಕರ ಹಿತಾಸಕ್ತಿಗೆ ವಿರುದ್ಧ. ಗ್ರಾಹಕರ ಹಕ್ಕು ಮೊಟಕು ಮಾಡಲಿದೆ ಎಂದು ಗ್ರಾಹಕ ಜಾಗೃತಿ ಹಕ್ಕು ಮತ್ತು ಶಿಕ್ಷಣ ಪರಿಷತ್ ಅಸಮಾಧಾನ ವ್ಯಕ್ತಪಡಿಸಿದೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ ಕಾರ್ಯದರ್ಶಿ ಹಾಗೂ ವಕೀಲ ಟಿ.ಎಸ್.ನಿರಂಜನ್, ಪೆಟ್ರೋಲ್, ಡೀಸೆಲ್ ಪಂಪ್ ಸೇರಿ ತೂಕ ಮತ್ತು ಅಳತೆ ಯಂತ್ರಗಳನ್ನು ವರ್ಷಕ್ಕೊಮ್ಮೆ ತಪಾಸಣೆ ನಡೆಸಿ ಯೋಗ್ಯತಾ ಪತ್ರ ನೀಡುವ ಅವಕಾಶ ಈವರೆಗೆ ಇದೆ. ಆದರೆ ಈ ಅವಧಿಯನ್ನು ಮೂರು ವರ್ಷಕ್ಕೆ ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಅಧಿಸೂಚನೆ ಹೊರಡಿಸಿದೆ. ಇದರಿಂದ ಗ್ರಾಹಕರ ಮೇಲೆ ಮತ್ತಷ್ಟು ಹೊಡೆತ ಬೀಳುವುದಲ್ಲದೆ, ತೂಕ ಮತ್ತು ಅಳತೆ ಮೋಸ ಹೆಚ್ಚಲಿದೆ ಎಂದರು.
ಪೆಟ್ರೋಲ್, ಡೀಸೆಲ್ ಪಂಪುಗಳ ಮುದ್ರೆ ಅವಧಿ ಒಂದರಿಂದ 2 ವರ್ಷಕ್ಕೆ ವಿಸ್ತರಿಸಲಾಗಿದೆ. ಕೇಂದ್ರ ಸರ್ಕಾರ ಕಾನೂನು ಮಾಪನ ಶಾಸ್ತ್ರ ಇಲಾಖೆಯನ್ನು ಖಾಸಗೀಕರಣಗೊಳಿಸುವ ಮೂಲಕ ಇಲಾಖೆ ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದೆ. ಮುದ್ರೆ ಮಾಡುವ ಅಧಿಕಾರವನ್ನು ಖಾಸಗೀಯವರ ಕೈಗೆ ಒಪ್ಪಿಸುವ ಪ್ರಯತ್ನ ನಡೆದಿದೆ. ಕೂಡಲೆ ಈ ಮಸೂದೆಯನ್ನು ಸಾರ್ವಜನಿಕ ಚರ್ಚೆಗೆ ಬಿಡುವಂತೆ ಆಗ್ರಹಿಸಿದರು.ಬಹಳಷ್ಟು ಕಡೆ ಪೆಟ್ರೋಲ್, ಡೀಸೆಲ್ ಪಂಪುಗಳಲ್ಲಿ ಮೋಸದ ಆರೋಪಗಳಿವೆ. ಕಾನೂನು ಮಾಪನ ಶಾಸ್ತ್ರ ಇಲಾಖೆ ಈ ಬಗ್ಗೆ ಹೆಚ್ಚು ತಪಾಸಣೆ ನಡೆಸಿ ಅನ್ಯಾಯ ಪತ್ತೆ ಹಚ್ಚಬೇಕು. ಆದರೆ ಸಮಯದ ಅವಕಾಶ ಎರಡು ವರ್ಷಗಳಿಗೆ ವಿಸ್ತರಿಸುವುದರಿಂದ ಇಲಾಖೆ ಕಾರ್ಯವೈಖರಿಯನ್ನೇ ಕುಂಠಿತಗೊಳಿಸಿದಂತಾಗುತ್ತದೆ. ಮೋಸದ ಸಂಭವ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಅಸಮಾದಾನ ವ್ಯಕ್ತಪಡಿಸಿದರು.ರೈತರು ತೂಕ ಮಾಡಿಸುವ ಯಂತ್ರಗಳು, ಒಡವೆ, ಆಭರಣ ಅಂಗಡಿಗಳಲ್ಲಿ, ದಿನಸಿ ಅಂಗಡಿಗಳಲ್ಲಿ, ವ್ಯಾಪಾರ ಸ್ಥಳಗಳಲ್ಲಿ ಬಳಸುವ ತೂಕದ ಯಂತ್ರಗಳನ್ನು ಪರಿಶೀಲಿಸಿ ಮುದ್ರೆ ಮಾಡುವ ಅಧಿಕಾರ ಖಾಸಗೀಯವರಿಗೆ ವಹಿಸಿದರೆ ಮತ್ತಷ್ಟು ಅಪಾಯವಿದೆ. ಇದರಿಂದ ಮೋಸದ ಸಾಧ್ಯತೆ ಹೆಚ್ಚುತ್ತದೆ. ನಿಯಮ ಉಲ್ಲಂಘಿಸುವವರಿಗೆ ಕಠಿಣ ಕ್ರಮ ವಹಿಸುವ ಬದಲು ಸುಧಾರಣಾ ನೋಟಿಸ್ ನೀಡುವ ಮೂಲಕ ಗ್ರಾಹಕರ ಹಕ್ಕುಗಳನ್ನು ವಂಚಿಸಲಾಗುತ್ತಿದೆ ಎಂದು ಹೇಳಿದರು.
ಖಾಸಗೀಕರಣದಿಂದ ಸರ್ಕಾರಕ್ಕೆ ವಾರ್ಷಿಕ 100 ಕೋಟಿ ರು. ರಾಜಸ್ವ ನಷ್ಟವಾಗುವುದಲ್ಲದೆ, ಗ್ರಾಹಕರ ರಕ್ಷಣೆ ವಿಫಲವಾಗುತ್ತದೆ. ನೂರಾರು ಕೋಟಿ ಜನರಿರುವ ನಮ್ಮ ದೇಶದಲ್ಲಿ ತೂಕ ಮತ್ತು ಅಳಗೆಯಲ್ಲಿ ಸಣ್ಣ ಮೋಸವಾದರೂ ಸಾವಿರಾರು ಕೋಟಿ ರು. ನಷ್ಟ ಉಂಟಾಗುತ್ತದೆ. ಈ ಎಲ್ಲ ಕಾರಣಗಳಿಂದಾಗಿ ತೂಕದ ಯಂತ್ರಗಳ ಪರಿಶೀಲನೆ ಮತ್ತು ಮುದ್ರೆ ಅವಧಿ ವಿಸ್ತರಿಸದೆ ಒಂದು ವರ್ಷದ ಅವಧಿ ಮುಂದುವರಿಸಬೇಕೆಂದು ಆಗ್ರಹಿಸಿದರು.ಗ್ರಾಹಕ ಪರಿಷತ್ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ಹೋರಾಟ ರೂಪಿಸಲಾಗುವುದು. ಪ್ರಹ್ಲಾದ ಜೋಷಿ ಅವರಿಗೂ ಮನವಿ ಸಲ್ಲಿಸಲಾಗುವುದು ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಎ.ವಿ.ವಿಠ್ಠಲರಾವ್, ಅತ್ತಿ ರೇಣುಕಾನಂದ, ಅಯಾಜ್ ಅಹಮದ್ ಉಪಸ್ಥಿತರಿದ್ದರು.
