ಶಿಕ್ಷಣದ ಜೊತೆಗೆ ಕೌಶಲ್ಯ ಹೊಂದಿರುವುದು ಇಂದಿನ ಅಗತ್ಯ

| Published : Aug 11 2025, 12:31 AM IST

ಸಾರಾಂಶ

ಓದು, ಅಂಕ ಹಾಗೂ ಸಂವಹನ ಕೌಶಲ್ಯವನ್ನು ಉದ್ದೀಪನಗೊಳಿಸುವ ಶಿಕ್ಷಣ ನಮ್ಮದಾಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಕಾಲೇಜು ಶಿಕ್ಷಣ ಪಡೆದು ಬರೇ ತೇರ್ಗಡೆ ಹೊಂದಿದರೇ ಸಾಲದು, ಸಹಜ ಶಿಕ್ಷಣದ ಜೊತೆಗೆ ಕೌಶಲ್ಯ ಹೊಂದಿರುವವರು ಮಾತ್ರ ಪ್ರಸ್ತುತ ಕಾಲಮಾನದಲ್ಲಿ ಉಳಿಯುತ್ತಾರೆ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಅಭಿಪ್ರಾಯಪಟ್ಟರು.

ರೂಪಾನಗರದ ದೀಪಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಓದು, ಅಂಕ ಹಾಗೂ ಸಂವಹನ ಕೌಶಲ್ಯವನ್ನು ಉದ್ದೀಪನಗೊಳಿಸುವ ಶಿಕ್ಷಣ ನಮ್ಮದಾಗಬೇಕು. ಇದಕ್ಕೆ ಸಮಯದ ನಿರ್ವಹಣೆ ಮತ್ತು ಪರಿಣಾಮಕಾರಿ ಬಳಕೆ ನಿಮಗೆ ಅಮೂಲ್ಯವಾಗಬೇಕು. ವಿದ್ಯಾರ್ಥಿಗಳು ವಿಭಿನ್ನವಾಗಿ ಆಲೋಚನೆ ಮಾಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಯುವ ಸಮಾಜ ಸೃಜನಶೀಲ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಹೀಗಾದಾಗ ವಿದ್ಯಾರ್ಥಿ ಬದುಕು ಸರ್ವತೋಮುಖವಾಗಿ ವೃದ್ಧಿಯಾಗುತ್ತದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ದೀಪಾ ಶಿಕ್ಷಣ ಮತ್ತು ಸೇವಾ ಸಂಸ್ಥೆಯ ಅಧ್ಯಕ್ಷ ಎಂ. ರಾಮಪ್ಪ ಮಾತನಾಡಿ, ಶಿಕ್ಷಣ ಪಡೆಯುವುದು ಎಲ್ಲರ ಗುರಿಯಾಗಬೇಕು, ಅದು ಯಾರ ಸ್ವತ್ತು ಅಲ್ಲ, ಇದರಲ್ಲಿ ಮೇಲ್ವರ್ಗ ಕೆಳವರ್ಗ ಎಂಬ ತಾರತಮ್ಯ ಇರುವುದಿಲ್ಲ ಎಂದರು.

ಜ್ಞಾನ ಸಂಪಾದನೆ ಎನ್ನುವುದನ್ನು ಯಾರೂ ಕದಿಯಲು ಆಗುವುದಿಲ್ಲ, ಅಂತಹ ವಿದ್ಯೆಯನ್ನು ಪಡೆದುಕೊಳ್ಳಲು ಮುಂದಾಗಬೇಕು ಕಡಿಮೆ ಸವಲತ್ತುಗಳನ್ನು ಬಳಸಿಕೊಂಡು ಅಪರಿಮಿತ ಸಾಧನೆಯನ್ನು ಮಾಡಬೇಕು. ಸಂಸ್ಕಾರ ಹಾಗೂ ವಿದ್ಯೆ ಪ್ರಗತಿಗೆ ಪೂರಕವಾಗಿರಲಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪದಗ್ರಹಣ ಹಾಗೂ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ದೀಪಾ ಶಿಕ್ಷಣ ಮತ್ತು ಸೇವಾ ಸಂಸ್ಥೆಯ ಕಾರ್ಯದರ್ಶಿ ಸುಂದರ್, ನಿರ್ದೇಶಕರಾದ ಬಾಲಕೃಷ್ಣ, ದೀಪಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಣೀತಾ ಎರ್ಮಾಳ್, ದೀಪಾ ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಶಿಲ್ಪಾ ಜಗದೀಶ್, ಉಪನ್ಯಾಸಕರಾದ ಪುರುಷೋತ್ತಮ, ಕೀರ್ತಿ, ಶಿವಕುಮಾರ್, ಎ.ಎಸ್. ಗೋವಿಂದೇಗೌಡ, ಸುಮತಿ, ಸ್ವಾಮಿ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.