2025ಕ್ಕೆ ರಾಜ್ಯಾದ್ಯಂತ ಸಂಭ್ರಮದ ಸ್ವಾಗತ

| Published : Jan 01 2025, 12:01 AM IST

ಸಾರಾಂಶ

ಹೊಸ ವರ್ಷ-2025ಅನ್ನು ರಾಜ್ಯಾದ್ಯಂತ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಮಧ್ಯರಾತ್ರಿ 12 ಗಂಟೆಯಾಗುತ್ತಿದ್ದಂತೆ ‘ಹ್ಯಾಪಿ ನ್ಯೂ ಇಯರ್‌’ ಎಂದು ಶುಭಾಶಯ ಕೋರುತ್ತಾ ಬೀದಿಗಿಳಿದ ಜನ ಪಟಾಕಿ ಸಿಡಿಸಿ, ಘೋಷಣೆ ಕೂಗಿ ಸಂಭ್ರಮಿಸಿದರು. ಹಾದಿ-ಬೀದಿಗಳಲ್ಲಿ ಜನರ ಸಂಭ್ರಮ ಮೇರೆ ಮೀರಿತ್ತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೊಸ ವರ್ಷ-2025ಅನ್ನು ರಾಜ್ಯಾದ್ಯಂತ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಮಧ್ಯರಾತ್ರಿ 12 ಗಂಟೆಯಾಗುತ್ತಿದ್ದಂತೆ ‘ಹ್ಯಾಪಿ ನ್ಯೂ ಇಯರ್‌’ ಎಂದು ಶುಭಾಶಯ ಕೋರುತ್ತಾ ಬೀದಿಗಿಳಿದ ಜನ ಪಟಾಕಿ ಸಿಡಿಸಿ, ಘೋಷಣೆ ಕೂಗಿ ಸಂಭ್ರಮಿಸಿದರು. ಹಾದಿ-ಬೀದಿಗಳಲ್ಲಿ ಜನರ ಸಂಭ್ರಮ ಮೇರೆ ಮೀರಿತ್ತು.

ಈ ಬಾರಿ ರಾಜ್ಯದ ಬೀಚ್‌ಗಳಲ್ಲಿ ಪಾರ್ಟಿಗಳಿಗೆ ಅನುಮತಿ ನೀಡಲಾಗಿದ್ದು, ಲೈವ್ ಬ್ಯಾಂಡ್, ಡಿಜೆ, ಡ್ಯಾನ್ಸ್ ಶೋ, ಮ್ಯೂಸಿಕಲ್ ನೈಟ್‌ ಹಬ್ಬ, ಮ್ಯಾಜಿಕ್ ಶೋ, ಫೈರ್ ವರ್ಕ್ಸ್ ಗಳು ವರ್ಷಾಚರಣೆಯ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದ್ದವು. ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಸ್ಟಾರ್‌ ಹೋಟೆಲ್‌, ರೆಸ್ಟೋರೆಂಟ್‌, ರೆಸಾರ್ಟ್‌ಗಳಲ್ಲಿ ಪಾರ್ಟಿ, ಮೋಜು, ಮಸ್ತಿಗಳು ಎಲ್ಲೆ ಮೀರಿದ್ದವು. ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದರೆ, ಧಾರ್ಮಿಕ ಕೇಂದ್ರಗಳಲ್ಲಿ ಪೂಜೆ, ಪುನಸ್ಕಾರ, ಪ್ರಾರ್ಥನೆಗಳು ನೆರವೇರಿದವು.

ರಾಜಧಾನಿ ಬೆಂಗಳೂರಿನಲ್ಲಿ ಸಂಜೆ 6 ಗಂಟೆಯಿಂದಲೇ ಎಂ.ಜಿ.ರಸ್ತೆ, ಬ್ರಿಗೇಡ್‌ ಸೇರಿ ಪ್ರಮುಖ ರಸ್ತೆಗಳಲ್ಲಿ ಜನ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ರಾತ್ರಿ 12 ಗಂಟೆಯಾಗುತ್ತಿದ್ದಂತೆ ಜನ ಬೀದಿಗಳಲ್ಲಿ ನೃತ್ಯ ಮಾಡುತ್ತಾ, ಹೊಸ ವರ್ಷದ ಶುಭಾಶಯ ಕೋರುತ್ತಾ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬೆಂಗಳೂರಿನ ಹೊರವಲಯದ ರೆಸಾರ್ಟ್‌ಗಳಲ್ಲಿಯೂ ಜನರ ಸಂಭ್ರಮಾಚರಣೆ ಎಲ್ಲೆ ಮೀರಿತ್ತು.

ಮಂಗಳೂರಿನ ಪಣಂಬೂರು, ಕಾಪು, ಕಾರವಾರ ಸೇರಿ ಕರಾವಳಿಯ ಬೀಚ್‌ಗಳಲ್ಲಿ ರಾತ್ರಿ 12.30ರವರೆಗೂ ಪಾರ್ಟಿಗಳಿಗೆ ಅವಕಾಶ ನೀಡಲಾಗಿತ್ತು. ಪ್ರವಾಸಿಗರು ಮೋಜು, ಮಸ್ತಿಗಳಲ್ಲಿ ತೊಡಗಿ ಹೊಸ ವರ್ಷವನ್ನು ಸಡಗರ, ಸಂಭ್ರಮಗಳಿಂದ ಬರಮಾಡಿಕೊಂಡರು. ನೂತನ ವರ್ಷದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಬಾದಾಮಿ, ಐಹೊಳೆ, ಪಟ್ಟದಕಲ್ಲ, ವಿಜಯಪುರದ ಗೊಳಗುಮ್ಮಟ, ವಿಶ್ವ ಪ್ರಸಿದ್ಧ ಹಂಪಿ ಸೇರಿ ರಾಜ್ಯದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಂಡೇ ಹರಿದು ಬಂದಿದ್ದು, ತಡರಾತ್ರಿವರೆಗೂ ಸಂಭ್ರಮಾಚರಣೆ ನಡೆದಿತ್ತು. ಈ ಮಧ್ಯೆ, ಎಚ್ಚರಿಕೆಯ ನಡುವೆಯೂ ಚಿಕ್ಕಮಗಳೂರು ಜಿಲ್ಲೆಯ ಮುಳ್ಳನಗಿರಿ, ಬಾಬಾಬುಡನ್‌ಗಿರಿ, ಕೆಮ್ಮಣ್ಣಗುಂಡಿ, ದೇವರಮನೆ, ಝರಿ ಫಾಲ್ಸ್‌, ಸಿರಿಮನೆ ಫಾಲ್ಸ್‌ ಸೇರಿ ಹಲವೆಡೆ ಪ್ರವಾಸಿಗರು ಕಲ್ಲು ಬಂಡೆಯ ತುತ್ತ ತುದಿ ಏರಿ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ಘಟನೆಗಳು ನಡೆದವು.

ಮಡಿಕೇರಿಯ ರಾಜಾಸೀಟ್‌, ದುಬಾರೆ, ಕಾವೇರಿ ನಿಸರ್ಗಧಾಮ, ಹಾರಂಗಿ ಜಲಾಶಯ, ತಲಕಾವೇರಿ, ಭಾಗಮಂಡಲ, ಗೋಕರ್ಣದ ಓ ಬೀಚ್‌, ಹುಬ್ಬಳ್ಳಿ ಉಣಕಲ್‌ ಕೆರೆ, ತುಂಗಭದ್ರಾ ಜಲಾಶಯ ಹಿನ್ನೀರು ಪ್ರದೇಶ ಸೇರಿ ಹಲವೆಡೆ 2004ರ ಕೊನೆಯ ಸೂರ್ಯಾಸ್ತ, 2005ರ ಮೊದಲ ಸೂರ್ಯೋದಯ ವೀಕ್ಷಿಸಲು ಜನ ಮುಗಿಬಿದ್ದರು.

ಇದೇ ವೇಳೆ, ಧರ್ಮಸ್ಥಳ, ಕೊಲ್ಲೂರು, ಸವದತ್ತಿ, ಗೋಕರ್ಣ, ಶೃಂಗೇರಿ, ಹೊರನಾಡು ಅನ್ನಪೂರ್ಣೇಶ್ವರಿ, ಮುರುಡೇಶ್ವರ ಸೇರಿ ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ದರ್ಶನಕ್ಕೆ ಭಕ್ತರು ಮುಗಿಬಿದ್ದಿದ್ದಾರೆ.

ಈ ಮಧ್ಯೆ, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರವಾಸಿ ತಾಣಗಳಾದ ಶಿವಗಂಗೆ ಬೆಟ್ಟ, ಸಿದ್ದರಬೆಟ್ಟ, ಮಾಕಳಿದುರ್ಗ, ಆವತಿ ಬೆಟ್ಟ, ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟ ಸೇರಿ ಹಲವು ಪ್ರವಾಸಿ ತಾಣಗಳಿಗೆ ರಾತ್ರಿ 8ರ ನಂತರ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಎಲ್ಲೆಡೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ದೇವಸ್ಥಾನ, ಭಟ್ಕಳ ಸೇರಿ ಹಲವೆಡೆ ಬಾಂಬ್ ನಿಷ್ಕ್ರಿಯ ದಳದವರಿಂದ ತಪಾಸಣೆ ಕೂಡ ನಡೆಸಲಾಯಿತು.