ಹೊಸ ನಿರೀಕ್ಷೆ, ಭರವಸೆಯೊಂದಿಗೆ 2025ಕ್ಕೆ ಸ್ವಾಗತ

| Published : Jan 01 2025, 01:01 AM IST

ಸಾರಾಂಶ

ಸಂತರು, ಶರಣರ ನಾಡಾಗಿರುವ ಹಾವೇರಿ ಜಿಲ್ಲೆ ಅಭಿವೃದ್ಧಿ ದೃಷ್ಟಿಯಿಂದ ಇನ್ನೂ ಹಿಂದುಳಿದಿದೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ಜಲಮೂಲ ಸೇರಿದಂತೆ ಸುಸ್ಥಿರ ಅಭಿವೃದ್ಧಿಗೆ ಬೇಕಾದ ಎಲ್ಲ ಅಂಶಗಳೂ ಜಿಲ್ಲೆಯಲ್ಲಿವೆ. ಕೃಷಿ ಪ್ರಧಾನ ಜಿಲ್ಲೆಯಲ್ಲಿ ಹೈನುಗಾರಿಕೆಗೂ ವಿಪುಲ ಅವಕಾಶಗಳಿವೆ.

ಹಾವೇರಿ: ಸಂತರು, ಶರಣರ ನಾಡಾಗಿರುವ ಹಾವೇರಿ ಜಿಲ್ಲೆ ಅಭಿವೃದ್ಧಿ ದೃಷ್ಟಿಯಿಂದ ಇನ್ನೂ ಹಿಂದುಳಿದಿದೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ಜಲಮೂಲ ಸೇರಿದಂತೆ ಸುಸ್ಥಿರ ಅಭಿವೃದ್ಧಿಗೆ ಬೇಕಾದ ಎಲ್ಲ ಅಂಶಗಳೂ ಜಿಲ್ಲೆಯಲ್ಲಿವೆ. ಕೃಷಿ ಪ್ರಧಾನ ಜಿಲ್ಲೆಯಲ್ಲಿ ಹೈನುಗಾರಿಕೆಗೂ ವಿಪುಲ ಅವಕಾಶಗಳಿವೆ. ಕೃಷಿ ಸಂಬಂಧಿ ಕೈಗಾರಿಕೆ ಸ್ಥಾಪನೆಯಾಗಿ ಜಿಲ್ಲೆಯ ಜನರ ಜೀವನ ಮಟ್ಟ ಸುಧಾರಣೆಯಾಗಬೇಕಿದೆ. ಈ ಹಿಂದೆ ಏನಾಗಿದೆ, ಏನಾಗಿಲ್ಲ ಎಂಬುದರ ಬಗ್ಗೆ ಯೋಚಿಸದೇ, ಆದರೆ, ಹಿಂದಿನ ಅನುಭವಗಳನ್ನೇ ಮೆಟ್ಟಿಲಾಗಿಸಿಕೊಂಡು ಹೊಸ ನಿರೀಕ್ಷೆ ಹಾಗೂ ಭರವಸೆಯೊಂದಿಗೆ ಹೊಸ ವರ್ಷಕ್ಕೆ ಹೆಜ್ಜೆಯಿಡುವ ಗಳಿಗೆ ಬಂದಿದೆ.

ಸಮಯ ಎಂಬುದು ಬಲು ಅಮೂಲ್ಯ. ಕಳೆದು ಹೋದ ಕ್ಷಣ ಮತ್ತೆ ಸಿಗದು. ಹೀಗಾಗಿ, ಈ ಬದುಕಿನ ಹೊಸ ಪುಟದಲ್ಲಿ ಯಶಸ್ಸು, ಖುಷಿ, ಶಾಂತಿ, ನೆಮ್ಮದಿಯ ನೆನಪುಗಳೇ ದಾಖಲಾಗುವಂತೆ ಮಾಡುವುದು ಮುಖ್ಯ. ಇದೇ ಹೊಸ ಹುರುಪಿನಲ್ಲಿ 2025ನೇ ವರ್ಷವನ್ನು ಸ್ವಾಗತಿಸೋಣ. ಜತೆಗೆ, ಹೊಸ ವರ್ಷದಲ್ಲಿ ಹೊಸದನ್ನು ಬರಮಾಡಿಕೊಳ್ಳಲು ಮತ್ತು ಅದನ್ನು ಸರಿಯಾಗಿ ಪಡೆಯಲು ನಮಗೆ ಸಿಕ್ಕ ಅವಕಾಶ ಎಂದು ತಿಳಿದು ಮುನ್ನಡಿ ಇಡೋಣ. ಮಳೆ ಬೆಳೆ ಸಮರ್ಪಕವಾಗಿ ಆಗಿ ಅನ್ನದಾತನಿಗೆ ಈ ವರ್ಷ ಹರುಷ ತರಲೆಂದು ಆಶಿಸೋಣ. ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದ ಜನರಿಗೂ ಅವರವರ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲೆಂಬ ಹಾರೈಕೆಯೊಂದಿಗೆ 2025ನೇ ಇಸ್ವಿಯನ್ನು ಸ್ವಾಗತಿಸೋಣ.