ಸಾರಾಂಶ
-ಕನ್ನಡ ರಥಕ್ಕೆ ಅದ್ದೂರಿ ಸ್ವಾಗತ, ಮೆರವಣಿಗೆ -ತಾಲೂಕು ಆಡಳಿತ, ಕನ್ನಡ ಸಂಘಟನೆಗಳ ನೇತೃತ್ವದಲ್ಲಿ ಸಂಭ್ರಮ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರಕರ್ನಾಟಕ ಸಂಭ್ರಮ 50ರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಭಾಗವಾಗಿ ಬುಧವಾರ ತಾಲೂಕಿಗೆ ಆಗಮಿಸಿದ ಕನ್ನಡ ಜ್ಯೋತಿ ರಥವನ್ನು ತಾಲೂಕಿನ ಗಡಿ ಪ್ರದೇಶದಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು.
ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ, ರೈಲು ನಿಲ್ದಾಣ ಬಳಿಯ ವಿ.ಕೃ.ಗೋಕಾಕ್ ವೃತ್ತ, ಡಿ ಕ್ರಾಸ್ ಬಳಿಯ ಡಾ.ರಾಜ್‌ಕುಮಾರ್ ವೃತ್ತದ ಮೂಲಕ ದೊಡ್ಡಬಳ್ಳಾಪುರ ನಗರಕ್ಕೆ ಬರಮಾಡಿಕೊಳ್ಳಲಾಯಿತು. ಇಲ್ಲಿನ ನೆಲದಾಂಜನೇಯಸ್ವಾಮಿ ದೇವಾಲಯ ಸಮೀಪದ ಜಯಚಾಮರಾಜೇಂದ್ರ ವೃತ್ತದಲ್ಲಿ ಕನ್ನಡ ರಥದ ಮೆರವಣಿಗೆಗೆ ಅಧಿಕೃತ ಚಾಲನೆ ದೊರೆಯಿತು.ಈ ವೇಳೆ ತಹಸೀಲ್ದಾರ್ ವಿಭಾ ವಿದ್ಯಾ ರಾಥೋಡ್ ಮಾತನಾಡಿ, ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ಅವಿಸ್ಮರಣೀಯ ಕ್ಷಣವನ್ನು ಸಂಭ್ರಮವನ್ನಾಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಕನ್ನಡ ರಥಯಾತ್ರೆಗೆ ಚಾಲನೆ ನೀಡಿದೆ. ವಿಜಯನಗರ ಜಿಲ್ಲೆಯ ಹಂಪಿಯಿಂದ ಹೊರಟಿರುವ ರಥ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಸಂಚರಿಸಿ ನಾಡಿನ ಅನನ್ಯತೆಯನ್ನು ಸಾರಿದೆ ಎಂದರು.
ತಾ.ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರ್ಣಗೊಂಡಿದೆ. “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ರಾಜ್ಯದೆಲ್ಲೆಡೆ ಕರ್ನಾಟಕ ಸುವರ್ಣ ಸಂಭ್ರಮಾಚರಣೆ ನಡೆಯುತ್ತಿದೆ. ಕನ್ನಡ ಸಾಹಿತಿಗಳು, ಕನ್ನಡಪರ ಹೋರಾಟಗಾರರು, ಕನ್ನಡ ಅಭಿಮಾನಿಗಳ ನಿರಂತರ ಹೋರಾಟದಿಂದ ಕರ್ನಾಟಕ ಏಕೀಕರಣವಾಯಿತು ಎಂದರು.ಕನ್ನಡ ಸಂಘಟನೆಗಳ ಮುಖಂಡರು ಮಾತನಾಡಿ, ಕನ್ನಡ ನಾಡಿನ ಅಸ್ಮಿತೆಯ ರಕ್ಷಣೆಗೆ ಕನ್ನಡಿಗರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಈ ರಥಯಾತ್ರೆ ಮಹತ್ವ ಪಡೆದಿದೆ. ಪ್ರತಿಯೊಬ್ಬ ಕನ್ನಡಿಗನೂ ಭಾಷೆ, ನಾಡು, ನೆಲ, ಜಲದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಕರ್ನಾಟಕ ಎಂದು ಹೆಸರಾಗಿರುವ ನಮ್ಮ ನಾಡಿನಲ್ಲಿ ಕನ್ನಡ ಉಸಿರಾಗಬೇಕು. ಕನ್ನಡತನ ರಾರಾಜಿಸಬೇಕು ಎಂಬುದು ಎಲ್ಲರ ಆಶಯ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ದುರ್ಗಾಶ್ರೀ, ತಾಪಂ ಇಒ ಎನ್.ಮುನಿರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ರವಿಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.ಸಡಗರದ ನಾಡದೇವಿ ಉತ್ಸವ:
ಬಾಶೆಟ್ಟಹಳ್ಳಿಯಿಂದ ಪ್ರಾರಂಭವಾದ ಕನ್ನಡ ಜ್ಯೋತಿ ರಥವನ್ನು ಶಾಲಾ ವಿದ್ಯಾರ್ಥಿಗಳು ಕನ್ನಡ ಬಾವುಟಗಳನ್ನು ಹಿಡಿದು ಸಂಭ್ರಮದಿಂದ ಬರಮಾಡಿಕೊಂಡರು. ಪೂರ್ಣಕುಂಭ ಸ್ವಾಗತ ನೀಡಲಾಯಿತು. ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣದ ವಿ.ಕೃ.ಗೋಕಾಕ್ ವೃತ್ತ, ಡಿ ಕ್ರಾಸ್‌ನ ಡಾ.ರಾಜ್‌ಕುಮಾರ್ ವೃತ್ತ, ಮಹಾತ್ಮಗಾಂಧಿ ವೃತ್ತ, ಜಯಚಾಮರಾಜೇಂದ್ರ ವೃತ್ತ, ಬಿಎಂಶ್ರೀ ರಸ್ತೆ, ರಂಗಪ್ಪ ವೃತ್ತ, ತೇರಿನಬೀದಿ, ಅರಳುಮಲ್ಲಿಗೆ ಬಾಗಿಲು, ಸಂಜಯನಗರ, ಸ್ವಾಮಿ ವಿವೇಕಾನಂದ ರಸ್ತೆ, ತಾಲೂಕು ಕಛೇರಿ ವೃತ್ತ(ಬಸವೇಶ್ವರ ವೃತ್ತ), ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಜಿ.ರಾಮೇಗೌಡ ವೃತ್ತದವರೆಗೆ ಸಂಚರಿಸಿತು.
ಮೊಕದ್ದಮೆ ವಾಪಸ್ಸಿಗೆ ಒತ್ತಾಯ:
ಕರ್ನಾಟಕ ಏಕೀಕರಣ, ಗೋಕಾಕ್ ಚಳುವಳಿ ಸೇರಿದಂತೆ ಹಲವಾರು ಮಹತ್ವದ ಕನ್ನಡಪರ ಹೋರಾಟಗಳಲ್ಲಿ ಕನ್ನಡಪರ ಹೋರಾಟಗಾರರ ಪಾತ್ರ ಮಹತ್ವದಾಗಿದೆ. ಕನ್ನಡ ನಾಡು, ನುಡಿ, ಪರಂಪರೆಗಳ ವಿಚಾರಗಳಲ್ಲಿ ಸಮಸ್ಯೆಗಳು ಎದುರಾದಾಗ ಕನ್ನಡಪರ ಹೋರಾಟಗಾರರು ತಕ್ಷಣವೇ ಸ್ಪಂದಿಸಿ ಹೋರಾಟಗಳನ್ನು ಮಾಡುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಕನ್ನಡಪರ ಹೋರಾಟಗಾರ ವಿರುದ್ದ ದಾಖಲಾಗಿರುವ ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ವಾಪಸ್ಸು ಪಡೆಯಬೇಕು ಎಂದು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಾಯಿತು.