ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದಲ್ಲಿ ಎತ್ತುಗಳ ಹಾಗೂ ಮಣ್ಣಿನ ಮಹತ್ವ ಸಾರುವ ಉದ್ದೇಶದಿಂದ ಗುರುವಿಗಾಗಿ ನಡೆ ನಮನ ಸಂದೇಶದೊಂದಿಗೆ ಬಿಜ್ಜರಗಿಯಿಂದ ಆರಂಭವಾದ ಜೋಡೆತ್ತು ಬಂಡಿಗಳ ನಂದಿ ಯಾತ್ರೆಗೆ ಸೋಮವಾರ ಸ್ವಾಗತ ಕೋರಲಾಯಿತು.ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಪಟ್ಟಣದ ವಿರಕ್ತಮಠದಿಂದ ರೈತರು ಜೋಡೆತ್ತು ಬಂಡಿಗಳಲ್ಲಿ ಬಸವೇಶ್ವರ, ಶಿವಯೋಗಿ ಶಿವಲಿಂಗೇಶ್ವರರ ಮೂರ್ತಿ ಹಾಗೂ ಸಿದ್ಧೇಶ್ವರ ಸ್ವಾಮೀಜಿ ಭಾವಚಿತ್ರದ ಮೆರವಣಿಗೆ ಮೂಲಕ ವಿಜಯಪುರ ರಸ್ತೆಯಲ್ಲಿನ ಬಸವ ಭವನ ಮುಂಭಾಗಕ್ಕೆ ಆಗಮಿಸಿದರು. ಬಿಜ್ಜರಗಿಯ ರೈತರು ತಾಲೂಕಿನ ನಂದಿಹಾಳ ಪಿಯು ಗ್ರಾಮದಿಂದ 9 ಜೋಡೆತ್ತು ಬಂಡಿಗಳೊಂದಿಗೆ ಆಗಮಿಸಿದ ನಂದಿ ಯಾತ್ರೆಗೆ ಸ್ವಾಗತ ಕೋರಲಾಯಿತು.
ನಂತರ ಬಸವಜನ್ಮ ಸ್ಮಾರಕ, ಅಗಸಿ ಮಾರ್ಗವಾಗಿ ಸಂಚರಿಸಿದ ಬಂಡಿಯಾತ್ರೆಯು ಬಸವೇಶ್ವರ ದೇವಸ್ಥಾನಕ್ಕೆ ತೆರಳಿತು. ಮುಂದೆ ಇಂಗಳೇಶ್ವರ ಗ್ರಾಮಕ್ಕೆ ನಂದಿಯಾತ್ರೆಯನ್ನು ಬೀಳ್ಕೊಡಲಾಯಿತು.ನಂದಿ ಯಾತ್ರೆಯ ನೇತೃತ್ವ ವಹಿಸಿರುವ ವಿಜಯಪುರದ ಅಭಿ ಫೌಂಡೇಶನ್ ಮುಖ್ಯಸ್ಥ ಬಸವರಾಜ ಬಿರಾದಾರ ಮಾತನಾಡಿ, ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳು ಎತ್ತುಗಳನ್ನು ಸಂರಕ್ಷಿಸಲು ಆಧ್ಯಾತ್ಮಿಕ ಸ್ಥಳಗಳಿಗೆ ನಂದಿ ಯಾತ್ರೆ ಕೈಗೊಳ್ಳಬೇಕೆಂಬ ಆಶಯ ಹೊರ ಹಾಕಿದ್ದರು. ಎತ್ತು ಹಾಗೂ ಮಣ್ಣಿನ ಮಹತ್ವದ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಬಿಜ್ಜರಗಿಯ ಸಿದ್ಧೇಶ್ವರ ರೈತಮಿತ್ರ ಸ್ವಯಂ ಸೇವಕರ ಸಂಘದ ನೇತೃತ್ವದಲ್ಲಿ ಜೋಡೆತ್ತು ಬಂಡಿಗಳ ಮೂಲಕ ನಂದಿ ಯಾತ್ರೆ ಆರಂಭಿಸಲಾಗಿದೆ ಎಂದರು.
ಜಿಲ್ಲೆಯ ಪ್ರಮುಖ 40 ಆಧ್ಯಾತ್ಮಿಕ ಕೇಂದ್ರಗಳಲ್ಲಿ ಸಂಘಗಳನ್ನು ಸ್ಥಾಪಿಸಲಾಗುವುದು. ಬಸವನಬಾಗೇವಾಡಿ ಪಟ್ಟಣ ಸೇರಿದಂತೆ ತಾಲೂಕಿನ ಮನಗೂಳಿ, ಯರನಾಳ, ನಂದಿಹಾಳ ಪಿಯು, ಇಂಗಳೇಶ್ವರ ಗ್ರಾಮಗಳಲ್ಲಿ ಸಂಘ ರಚನೆ ಮಾಡಲಾಗಿದೆ ಎಂದರು.ಯಾತ್ರೆಯ ಪ್ರಮುಖ ಬಸವರಾಜ ಕೋನರೆಡ್ಡಿ ಮಾತನಾಡಿ, ಎತ್ತುಗಳು ಉಳಿದರೆ ಭಾರತೀಯ ಕೃಷಿ ಪದ್ಧತಿ ಉಳಿಯುತ್ತದೆ. ಪಶುಗಳ ಸಾಕಾಣಿಕೆಗೆ ರೈತರಿಗೆ ಸಹಾಯಧನ ನೀಡುವ ಅಗತ್ಯತೆ ಇದೆ. ಇಂದಿನ ಆಹಾರ ಕಲಬೆರಕೆಯಿಂದ ಕೂಡಿದೆ. ದನಕರುಗಳ ಸಾಕಾಣಿಕೆಗೆ ಹೆಚ್ಚಿನ ಮಹತ್ವ ನೀಡಿ ಸಾವಯವ ಕೃಷಿ ಪದ್ಧತಿಗೆ ಉತ್ತೇಜನ ನೀಡಬೇಕಿದೆ ಎಂದು ತಿಳಿಸಿದರು.
ಯಾತ್ರೆಯ ಸಂದರ್ಭದಲ್ಲಿ ಬಸವರಾಜ ಹಾರಿವಾಳ, ಶ್ರೀಶೈಲ ಉಟಗಿ, ಶಿವಾನಂದ ಬಿರಾದಾರ, ಪ್ರಭಾಕರ ಖೇಡದ, ಮಲ್ಲಪ್ಪ ಕುಂಬಾರ, ಬಸವರಾಜ ಸಂಗಮ, ಸಿರಸಪ್ಪ ಉಟಗಿ ಭೀಮು ಪೋಳ, ಶಿವಾನಂದ ತೊಳನೂರ, ಹನಮಂತ ಕನಮಡಿ, ಕೆ.ಎಸ್.ಅವಟಿ, ನಿಂಗಪ್ಪ ಸಿಗ್ಗಾವಿ ಇತರರು ಇದ್ದರು.