ಶ್ರೀರಂಗಪಟ್ಟಣ ದಸರಾ ಗಜಪಡೆಗೆ ಸ್ವಾಗತ, ವಿಶೇಷ ಪೂಜೆ ಸಲ್ಲಿಕೆ

| Published : Oct 04 2024, 01:05 AM IST

ಶ್ರೀರಂಗಪಟ್ಟಣ ದಸರಾ ಗಜಪಡೆಗೆ ಸ್ವಾಗತ, ವಿಶೇಷ ಪೂಜೆ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಂಗಪಟ್ಟಣ ಪಟ್ಟಣದ ಶ್ರೀರಂಗನಾಥಸ್ವಾಮಿ ದೇಗುಲದ ಆವರಣಕ್ಕೆ ಗುರುವಾರ ಸಂಜೆ ಆಗಮಿಸಿದ ಅಂಬಾರಿ ಹೊರುವ ಮಹೇಂದ್ರ, ಲಕ್ಷ್ಮಿ ಹಾಗೂ ಹಿರಣ್ಯ ಮೂರು ಆನೆಗಳನ್ನು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣ ದಸರಾ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಆಗಮಿಸಿದ್ದ ಗಜಪಡೆಯನ್ನು ಜಿಲ್ಲಾಡಳಿತದಿಂದ ಸ್ವಾಗತಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಪಟ್ಟಣದ ಶ್ರೀರಂಗನಾಥಸ್ವಾಮಿ ದೇಗುಲದ ಆವರಣಕ್ಕೆ ಗುರುವಾರ ಸಂಜೆ ಆಗಮಿಸಿದ ಅಂಬಾರಿ ಹೊರುವ ಮಹೇಂದ್ರ, ಲಕ್ಷ್ಮಿ ಹಾಗೂ ಹಿರಣ್ಯ ಮೂರು ಆನೆಗಳನ್ನು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು.

ಶುಕ್ರವಾರ ಮಧ್ಯಾಹ್ನ ಪಟ್ಟಣದ ಕಿರಂಗೂರಿನ ಬನ್ನಿಮಂಟಪದಲ್ಲಿ ನಂದಿ ಧ್ವಜ ಪೂಜೆ ನಡೆಯಲಿದೆ. ಚಿತ್ರನಟ ಶಿವರಾಜ್ ಕುಮಾರ್ ಬನ್ನಿಮಂಟಪದಿಂದ ಶ್ರೀಚಾಮುಂಡೇಶ್ವರಿ ದೇವಿ ವಿಗ್ರಹ ಹೊತ್ತು ಸಾಗುವ ಅಂಬಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಅಂಬಾರಿ ಹೊತ್ತು ಸಾಗುವ ಮಹೇಂದ್ರ ಆನೆಗೆ ಜೊತೆಯಾಗಿ ಲಕ್ಷ್ಮಿ, ಹಿರಣ್ಯ ಸಾಥ್ ನೀಡಲಿವೆ. ಈ ವೇಳೆ ಸಚಿವ ಚಲುವರಾಯಸ್ವಾಮಿ, ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ.

ಬಿಳಿ ಕುದುರೆಗೆ ಬೆಚ್ಚಿದ ಹಿರಣ್ಯ:

ಗಜಪಡೆಗಳು ಶ್ರೀರಂಗನಾಥಸ್ವಾಮಿ ದೇಗುಲಕ್ಕೆ ತೆರಳುತ್ತಿದ್ದ ವೇಳೆ ಹಿರಣ್ಯ ಎಂಬ ಆನೆ ಬಿಳಿ ಕುದುರೆಯನ್ನು ಕಂಡು ಬೆಚ್ಚಿದ್ದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು. ದೇಗುಲದಲ್ಲಿ ಪೂಜೆ ಸಲ್ಲಿಸಿ ಗಜಪಡೆಗಳನ್ನು ಸ್ವಾಗತಿಸುವ ವೇಳೆ ಈ ಘಟನೆ ನಡೆಯಿತು.

ದೇವಾಲಯಕ್ಜೆ ತೆರಳುತ್ತಿದ್ದ ವೇಳೆ ದೇವಾಲಯದ ಆವರಣದಲ್ಲಿದ್ದ ಬಿಳಿ ಕುದುರೆಯನ್ನು ಕಂಡು ಬೆಚ್ಚಿದ ಹಿರಣ್ಯ, ಸ್ವಲ್ಪ ದೂರ ಹಿಂದೆ ಸಂಚರಿಸಿ ಘರ್ಜಿಸ ತೊಡಗಿತು. ಕೂಡಲೇ ಆನೆಯನ್ನು ಸುತ್ತುವರಿದ ಮಾವುತರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಹಿರಣ್ಯ ಆನೆಯನ್ನು ಸಮಾಧಾನ ಪಡಿಸಿ ದೇವಾಲಯಕ್ಕೆ ಕರೆದೊಯ್ದರು.