ಸಾರಾಂಶ
ಶಿಗ್ಗಾಂವಿ: ಪಟ್ಟಣದಲ್ಲಿ ಫೆ.೧೧ರಂದು ೫ನೇ ಶಿಗ್ಗಾಂವಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದ್ದು, ಕನ್ನಡ ಭಾಷೆ ಮತ್ತು ನಾಡಿನಬಗ್ಗೆ ಅಭಿಮಾನ ಹೊಂದಿದವರಾಗಿ ಶಿಗ್ಗಾಂವಿ-ಸವಣೂರ ಕ್ಷೇತ್ರವನ್ನೂ ಸೇರಿದಂತೆ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ಆಶಿಸುತ್ತ ಕನ್ನಡದ ಮನಸ್ಸುಗಳನ್ನು ಕಾರ್ಯಕ್ರಮಕ್ಕೆ ಸ್ವಾಗತಿಸುತ್ತೇನೆ ಎಂದು ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ, ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು.ಪಟ್ಟಣದ ಶಾಸಕರ ಕಚೇರಿಯಲ್ಲಿ ೫ನೇ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಮ್ಮೇಳನದಲ್ಲಿ ಧ್ವಜಾರೋಹಣ, ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಸಭಾ ಕಾರ್ಯಕ್ರಮಗಳು, ಪುಸ್ತಕಗಳ ಬಿಡುಗಡೆ, ಗೋಷ್ಠಿಗಳು, ಬಹಿರಂಗ ಅಧಿವೇಶನ, ಸಾಧಕರಿಗೆ ಸನ್ಮಾನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸರ್ಕಾರದ ಯಾವುದೇ ಅನುದಾನ ಇಲ್ಲದಿದ್ದರೂ ಇಷ್ಟೆಲ್ಲಾ ಕಾರ್ಯಕ್ರಮಗಳನ್ನು ಬಹಳಷ್ಟು ಜನರು ಸ್ವಯಂಪ್ರೇರಿತರಾಗಿ, ಆಯೋಜಕಾರಾಗಿ ಕಾರ್ಯನಿರ್ವಹಿಸುವ ಮೂಲಕ ಕನ್ನಡ ಪ್ರೇಮಿಗಳಿಂದ, ಕೊಡಗೈ ದಾನಿಗಳಿಂದ ಸಹಾಯ ಪಡೆದು ಕಾರ್ಯಕ್ರಮವನ್ನು ಮಾಡುತ್ತಿರುವುದು ಸ್ವಾಗತಾರ್ಹವಾಗಿದೆ. ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಕೋರಿದರು. ಈ ಸಂದರ್ಭದಲ್ಲಿ ಎಸ್.ಎಫ್. ಮಣಕಟ್ಟಿ, ಗುಡ್ಡಪ್ಪಾ ಜಲದಿ, ನಾಗಪ್ಪಾ ಬೆಂತೂರ, ರಮೇಶ ಹರಿಜನ, ಶಂಭಲಿಂಗಪ್ಪ ಕೇರಿ, ಸಿ.ಡಿ.ಯತ್ತಿನಹಳ್ಳಿ, ಶಶಿಕಾಂತ ರಾಠೋಡ, ಸ್ನೇಹಲತಾ ಕುನ್ನೂರ, ಲಲಿತಾ ಹಿರೇಮಠ, ಸಂಜನಾ ರಾಯ್ಕರ, ಮಲ್ಲಮ್ಮಾ ಸೋಮನಕಟ್ಟಿ, ರಾಜೇಶ್ವರಿ ಹಿರೇಮಠ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕನ್ನಡಾಭಿಮಾನಿಗಳು ಇದ್ದರು.