ಮಲೀನವಾದ ವಿಷ್ಣು ಸಮುದ್ರದ ಕೆರೆಯ ಕಲ್ಯಾಣಿ

| Published : Feb 12 2025, 12:31 AM IST

ಸಾರಾಂಶ

ಪಟ್ಟಣದ ವಿಷ್ಣು ಸಮುದ್ರದ ಕೆರೆ ಬಳಿ ಇರುವ ಕಲ್ಯಾಣಿಯಲ್ಲಿ ಕಸ- ಕಡ್ಡಿ ಪಾಚಿಗಳು ತುಂಬಿ ಮಲೀನವಾಗಿದೆ. ಭಕ್ತರು ಹಾಗೂ ಪ್ರವಾಸಿಗರು ಅಶುದ್ಧ ನೀರಿನಲ್ಲಿ ಸ್ನಾನ ಮಾಡಬೇಕಾದ ದುಸ್ಥಿತಿ ಎದುರಾಗಿದೆ. ಚನ್ನಕೇಶವ ದೇಗುಲ ಕಾರ್ಯನಿರ್ವಹಣಾಧಿಕಾರಿ ಎಚ್ಚೆತ್ತುಗೊಂಡು ಸ್ವಚ್ಛಗೊಳಿಸದಿದ್ದರೆ ಕರವೇ ವತಿಯಿಂದ ದೇಗುಲ ಕಚೇರಿ ಎದುರು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು

ಕನ್ನಡಪ್ರಭ ವಾರ್ತೆ ಬೇಲೂರು

ಪಟ್ಟಣದ ವಿಷ್ಣು ಸಮುದ್ರದ ಕೆರೆ ಬಳಿ ಇರುವ ಕಲ್ಯಾಣಿಯಲ್ಲಿ ಕಸ- ಕಡ್ಡಿ ಪಾಚಿಗಳು ತುಂಬಿ ಮಲೀನವಾಗಿದೆ. ಭಕ್ತರು ಹಾಗೂ ಪ್ರವಾಸಿಗರು ಅಶುದ್ಧ ನೀರಿನಲ್ಲಿ ಸ್ನಾನ ಮಾಡಬೇಕಾದ ದುಸ್ಥಿತಿ ಎದುರಾಗಿದೆ. ಚನ್ನಕೇಶವ ದೇಗುಲ ಕಾರ್ಯನಿರ್ವಹಣಾಧಿಕಾರಿ ಎಚ್ಚೆತ್ತುಗೊಂಡು ಸ್ವಚ್ಛಗೊಳಿಸದಿದ್ದರೆ ಕರವೇ ವತಿಯಿಂದ ದೇಗುಲ ಕಚೇರಿ ಎದುರು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರವೇ ತಾಲೂಕು ಅಧ್ಯಕ್ಷ ವಿ. ಎಸ್. ಭೊಜೇಗೌಡ ಎಚ್ಚರಿಕೆ ನೀಡಿದ್ದಾರೆ.ಐತಿಹಾಸಿಕ ಹಿನ್ನೆಲೆಯುಳ್ಳ ವಿಷ್ಣು ಸಮುದ್ರ ಕೆರೆ ಕಲ್ಯಾಣಿ ತ್ಯಾಜ್ಯ ಬಸ್ತುಗಳಿಂದ ತುಂಬಿ ತುಳುಕಲು ಇಲ್ಲಿಯ ಅಧಿಕಾರಿಗಳೆ ನೇರ ಹೊಣೆಯಾಗಿದ್ದಾರೆ. ಬೇಲೂರು ವಿಷ್ಣು ಸಮುದ್ರ ಕಲ್ಯಾಣಿ ಸ್ವಚ್ಛಗೊಳಿಸಲು ಸುಂದರವಾಗಿ ಕಾಣಲು ಅಭಿವೃದ್ಧಿಗೆ ಹಿಂದಿನ ಸರ್ಕಾರ ಸುಮಾರು ೨ ಕೋಟಿ ರು.ಗೂ ಹೆಚ್ಚು ವ್ಯಯ ಮಾಡಿತ್ತು. ಆದರೆ ಕಾಟಾಚಾರಕ್ಕೆ ಕಲ್ಯಾಣಿಯಲ್ಲಿ ಅಭಿವೃದ್ಧಿ ಕೆಲಸವನ್ನು ಮಾಡಿ ಗುತ್ತಿಗೆದಾರ ಬಿಲ್ ತೆಗೆದುಕೊಂಡು ನಾಪತ್ತೆಯಾಗಿದ್ದ. ಕಲ್ಯಾಣಿಗೆ ಯಾವುದೇ ಭದ್ರತೆ ಇಲ್ಲದೆ ಇದಕ್ಕೆ ಹಾಕಿದ ಗೇಟ್ ಮುರಿದು ಹೋಗಿದೆ. ಇನ್ನು ಕಲ್ಯಾಣಿ ಎಂದರೆ ಪವಿತ್ರ ಗಂಗೆ ಎನ್ನುತ್ತಾರೆ. ಆದರೆ ಈ ಪವಿತ್ರ ಗಂಗೆಯನ್ನು ಭಕ್ತರು ತಮ್ಮ ಮುಡಿಪೂಜೆಗೆ, ಸ್ನಾನಕ್ಕೆ ಬಂದರೆ ಅವರ ಗತಿ ಹೇಳತೀರದಾಗಿದೆ‌ ಎಂದರು.ಕಲ್ಯಾಣಿಯಲ್ಲಿ ಸಂಪೂರ್ಣ ಕಸದ ರಾಶಿಯಲ್ಲಿ ತುಂಬಿ ಗಿಡಗಂಟೆಗಳಲ್ಲಿ ನೀರು ಸಂಪೂರ್ಣ ಹಾಳಾಗಿದೆ. ಒಂದು ವರ್ಷದಲ್ಲಿ ಈ ಕಲ್ಯಾಣಿಯಲ್ಲಿ ಸುಮಾರು ೫ ಜನ ಈಜಲು ಹೋಗಿ ಸಾವನ್ನಪ್ಪಿದ್ದಾರೆ. ಅಶುದ್ಧ ನೀರನ್ನು ಹೊರತಗೆದು ಸ್ವಚ್ಛ ಮಾಡುವ ಕೆಲಸ ದೇಗುಲ ಮಂಡಳಿ ಸಣ್ಣ ನೀರಾವರಿ ಇಲಾಖೆಯದ್ದಾಗಿದೆ. ಆದರೆ ಇವರು ತಮಗೆ ಸಂಬಂಧವಿಲ್ಲ ಎಂಬಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ. ಅಲ್ಲದೆ ಪ್ರತಿನಿತ್ಯ ಪುರಸಭೆ ಸುತ್ತಮುತ್ತಲಿನ ಸ್ವಚ್ಛತೆ ಮಾಡುತ್ತಿದೆ . ಆದರೆ ಇಲ್ಲಿಯ ಸ್ಥಳೀಯರು ಕಸ ತಂದು ಇಲ್ಲಿ ಸುರಿಯುತ್ತಿದ್ದಾರೆ. ಇದರಿಂದ ಈ ಕಲ್ಯಾಣಿ ಸಂಪೂರ್ಣ ಮಲೀನವಾಗಿದೆ. ಕೂಡಲೇ ಅದನ್ನು ಸ್ವಚ್ಛ ಮಾಡಿ ಭದ್ರತೆ ನೀಡುವುದರ ಜೊತೆಗೆ ಭಕ್ತರ ಅನುಕೂಲಕ್ಕೆ ಕಾಯಕಲ್ಪ ನೀಡಬೇಕು ಎಂದರು. ದೇಗುಲ ಅಡ್ಡೆಗಾರ ಪ್ರಮೋದ್ ಹಾಗೂ ಚಂದ್ರು ಮಾತನಾಡಿ, ಕಲ್ಯಾಣಿ ಕಸ ಕಡ್ಡಿ ಪಾಚಿ ತುಂಬಿ ನೈರ್ಮಲ್ಯದಿಂದ ತುಂಬಿದೆ. ಸಂಪೂರ್ಣ ನೀರು ಪಾಚಿ ಕಟ್ಟಿ ಹಾಳಾಗಿದ್ದು ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಂಗಾಪೂಜೆಗೆ ಈ ನೀರನ್ನು ಉಪಯೋಗಿಸುತ್ತಾರೆ. ಆದರೆ ಇಲ್ಲಿ ಪೂಜೆಗೂ ಸಹ ನೀರು ಯೋಗ್ಯವಾಗಿಲ್ಲ. ಕಾಮಗಾರಿ ಸಮಯದಲ್ಲಿ ಸಣ್ಣ ಪೈಪ್ ಅಳವಡಿಸಿರುವುದರಿಂದ ಇಲ್ಲಿ ಕಲ್ಮಷ ನೀರು ಕಸ ತುಂಬಿ ಹೊರ ಹೋಗುತ್ತಿಲ್ಲ. ಪುರಸಭೆ ಚರಂಡಿ ಸ್ವಚ್ಛತೆ ಮಾಡಿದರೂ ನೀರು ತುಂಬಿದ ಸಂದರ್ಭದಲ್ಲಿ ಕೊಳಚೆ ನೀರು ಕಲ್ಯಾಣಿಗೆ ಬರುವುದರಿಂದ ಹಾಳಾಗಿದೆ. ಇನ್ನೆರಡು ತಿಂಗಳಲ್ಲಿ ಚನ್ನಕೇಶವ ರಥೋತ್ಸವ ಹಾಗು ತೆಪ್ಪೋತ್ಸವ ನಡೆಯುವುದರಿಂದ ಈ ನೀರನ್ನು ಕೂಡಲೇ ಶುದ್ಧೀಕರಿಸಬೇಕು. ಮುಡಿಕಟ್ಟೆಗೆ ಸೂಕ್ತ ಕಾಯಕಲ್ಪ ನೀಡಿದರೆ ಭಕ್ತರಿಗೆ ಅನುಕೂಲವಾಗುತ್ತದೆ ಎಂದರು.

ಕರವೇ ಪ್ರಧಾನಕಾರ್ಯದರ್ಶಿ ಜಯಪ್ರಕಾಶ್ ಹಾಗೂ ಮಹೇಶ್ ಹಾಜರಿದ್ದರು.