ಮೂಢನಂಬಿಕೆ ತೊಡೆದಾಗ ಕಲ್ಯಾಣ ಕಾರ್ಯ ಸಾಧ್ಯ: ಡಾ.ಪ್ರಿಯದರ್ಶಿನಿ ಅಭಿಪ್ರಾಯ

| Published : Aug 30 2025, 01:00 AM IST

ಮೂಢನಂಬಿಕೆ ತೊಡೆದಾಗ ಕಲ್ಯಾಣ ಕಾರ್ಯ ಸಾಧ್ಯ: ಡಾ.ಪ್ರಿಯದರ್ಶಿನಿ ಅಭಿಪ್ರಾಯ
Share this Article
  • FB
  • TW
  • Linkdin
  • Email

ಸಾರಾಂಶ

ಮರಣದ ನಂತರ ನಮ್ಮ ಕಣ್ಣು ಮಣ್ಣಿನೊಂದಿಗೆ ಮಣ್ಣಾಗುತ್ತದೆ. ಆದರೆ, ಕಣ್ಣುಗಳನ್ನು ದಾನ ಮಾಡಿದರೆ ಈ ಕಣ್ಣುಗಳು ಇಬ್ಬರು ಅಂಧರ ಬಾಳಿಗೆ ಬೆಳಕಾಗುತ್ತವೆ. ನೇತ್ರದಾನದಂತಹ ಮಹತ್ಕಾರ್ಯದಲ್ಲಿ ನಾವೆಲ್ಲರೂ ಪಾಲ್ಗೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ನೇತ್ರದಾನದ ಬಗ್ಗೆ ಇರುವ ಮೂಢನಂಬಿಕೆಯನ್ನು ಯುವ ಸಮೂಹ ನಾಶ ಮಾಡಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮನುಷ್ಯ ತನ್ನಲಿರುವ ಮೂಢನಂಬಿಕೆ ತೊಡೆದು ಹಾಕಿದಾಗ ಮಾತ್ರ ಕಲ್ಯಾಣ ಕಾರ್ಯಗಳನ್ನು ಮಾಡಲು ಸಾಧ್ಯ ಎಂದು ತಾಲೂಕಿನ ಚಿನಕುರಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ಆರೋಗ್ಯಾಧಿಕಾರಿ ಡಾ.ಪ್ರಿಯದರ್ಶಿನಿ ತಿಳಿಸಿದರು.

ಗ್ರಾಮದ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನ ರೆಡ್‌ಕ್ರಾಸ್ ಘಟಕ, ಎನ್‌ಎಸ್‌ಎಸ್ ಘಟಕದ ಐಕ್ಯೂಎಸಿ, ಐಐಸಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಕ್ಷಮ ಮೈಸೂರು ಜಿಲ್ಲಾ ಘಟಕ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ನೇತ್ರದಾನ ಅರಿವು ಹಾಗೂ ರಕ್ಷಾಬಂಧನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮರಣದ ನಂತರ ನಮ್ಮ ಕಣ್ಣು ಮಣ್ಣಿನೊಂದಿಗೆ ಮಣ್ಣಾಗುತ್ತದೆ. ಆದರೆ, ಕಣ್ಣುಗಳನ್ನು ದಾನ ಮಾಡಿದರೆ ಈ ಕಣ್ಣುಗಳು ಇಬ್ಬರು ಅಂಧರ ಬಾಳಿಗೆ ಬೆಳಕಾಗುತ್ತವೆ. ನೇತ್ರದಾನದಂತಹ ಮಹತ್ಕಾರ್ಯದಲ್ಲಿ ನಾವೆಲ್ಲರೂ ಪಾಲ್ಗೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ನೇತ್ರದಾನದ ಬಗ್ಗೆ ಇರುವ ಮೂಢನಂಬಿಕೆಯನ್ನು ಯುವ ಸಮೂಹ ನಾಶ ಮಾಡಬೇಕು ಎಂದರು.

ಮೈಸೂರು ಜಿಲ್ಲಾ ಸಕ್ಷಮದ ಅಧ್ಯಕ್ಷ ಜಯರಾಮು ಮಾತನಾಡಿ, ರಕ್ಷಾಬಂಧನವು ಪ್ರೀತಿ, ಬಾಂಧವ್ಯ ಮತ್ತು ಪರಸ್ಪರ ರಕ್ಷಣೆಯ ಸಂಕೇತ. ನಾವೆಲ್ಲರೂ ದೇಶದ ಸಮೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ.ನಿಶಾಂತ್ ಎ.ನಾಯ್ಡು ಮಾತನಾಡಿ, ಅಂಧತ್ವ ಅನುಭವಿಸುತ್ತಿರುವ ವ್ಯಕ್ತಿ ಹಾಗೂ ಆತನ ಕುಟುಂಬದ ಸದಸ್ಯರಿಗೆ ಮಾತ್ರ ಅದರ ಪರಿಣಾಮ ಮತ್ತು ಪ್ರಭಾವದ ಅರಿವಾಗಿರುತ್ತದೆ. ಅವರ ಬಗ್ಗೆ ಕಾಳಜಿಯುಳ್ಳ ನಾವು ಅವರಿಗೆ ಯಾವ ರೀತಿ ನೆರವಾಗಬಹುದು ಎಂಬುದನ್ನು ಕ್ಷಣಮಾತ್ರ ಮನನ ಮಾಡಿಕೊಂಡಾಗ ನಿಜಕ್ಕೂ ಸಾರ್ಥಕ ಬದುಕು ನಮ್ಮದಾಗುತ್ತದೆ ಎಂದು ತಿಳಿಸಿದರು.

ನೇತ್ರದಾನದ ಮೂಲಕ ಒಬ್ಬ ವ್ಯಕ್ತಿ ಇಬ್ಬರು ಅಂಧರಿಗೆ ಪ್ರಪಂಚವನ್ನು ನೋಡುವಂತೆ ಮಾಡಬಹುದು. ಅದು ನಿಮ್ಮಂಥ ವಿದ್ಯಾರ್ಥಿ ಸಮೂಹದಿಂದ ಮಾತ್ರ ಸಾಧ್ಯ. ಎಸ್‌ಟಿಜಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಿ.ಎಸ್.ಪುಟ್ಟರಾಜು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಪಿ.ಶಿವರಾಜು ಅವರು ಹಲವು ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ, ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಇದೇ ವೇಳೆ ನೇತ್ರತಜ್ಞ ಜ್ಞಾನಾನಂದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಯುವರೆಡ್ ಕ್ರಾಸ್ ಘಟಕದ ಸಂಯೋಜಕರಾದ ಎಂ.ರಂಜಿತ್, ಎನ್‌ಎಸ್‌ಎಸ್ ಘಟಕದ ಸಂಯೋಜಕ ಬಿ.ಎಸ್.ಕುಮಾರ, ಐಕ್ಯೂಎಸಿ ಸಂಯೋಜಕ ಡಿ.ರಘುನಂದನ್, ನ್ಯಾಕ್ ಸಂಯೋಜಕ ಚರಣ್‌ರಾಜ್ ಇತರರು ಇದ್ದರು.