ಹಿಂದೆ ಇಂದಿರಾ ಗಾಂಧಿ ಅವರ ಕಾಲದಲ್ಲಿ ಬಡವರಿಗೆ ಆಶ್ರಯ ನಿವೇಶನಗಳ ಕಾಲೋನಿ ನಿರ್ಮಿಸಿದ ಮಾದರಿಯಲ್ಲೇ, ಮುಂದಿನ 6 ತಿಂಗಳಲ್ಲಿ ರಾಜ್ಯಾದ್ಯಂತ ಬಡವರಿಗೆ 5 ಲಕ್ಷ ನಿವೇಶನಗಳನ್ನು ನೀಡಲು ಸರ್ಕಾರ ತೀರ್ಮಾನಿಸಿದೆ. ಈಗಾಗಲೇ ಜಾಗ ಗುರುತಿಸಿ ಮೂಲಸೌಕರ್ಯಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಡಿಸೆಂಬರ್ 31 ರೊಳಗೆ 8 ಲಕ್ಷ ಗ್ರಾಮ ಠಾಣಾ ಆಸ್ತಿಗಳಿಗೆ ಇ-ಸ್ವತ್ತು ನೀಡಲಾಗುವುದು. ನಗರ ಪ್ರದೇಶಗಳಲ್ಲೂ ಬಿ ಖಾತೆ ನಿವೇಶನಗಳನ್ನು ಎ ಖಾತೆಗೆ ಪರಿವರ್ತಿಸಿ ಬ್ಯಾಂಕ್ ಸಾಲ ಹಾಗೂ ವಹಿವಾಟಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ಕನ್ನಡಪ್ರಭ ವಾರ್ತೆ ಮಾಗಡಿ

ದೊಡ್ಡ ರೈತರಿಗೆ ಸಾಲ ನೀಡುವ ಅವಕಾಶವಿರುವುದು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್‌ಡಿ) ಬ್ಯಾಂಕ್‌ನಲ್ಲಿ ಮಾತ್ರ. ಮುಚ್ಚುವ ಹಂತದಲ್ಲಿದ್ದ ಬ್ಯಾಂಕನ್ನು ವಿಶೇಷ ಪ್ರಯತ್ನದಿಂದ ಉಳಿಸಿಕೊಂಡಿದ್ದು, ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ₹1 ಕೋಟಿ ಅನುದಾನ ಒದಗಿಸಲಾಗುವುದು ಎಂದು ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ತಿಳಿಸಿದರು.

ಪಟ್ಟಣದ ಬಿ.ಕೆ. ರಸ್ತೆಯಲ್ಲಿ ಪಿಎಲ್‌ಡಿ ಬ್ಯಾಂಕ್‌ನ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬಸ್ ನಿಲ್ದಾಣದ ಪಕ್ಕದಲ್ಲಿದ್ದ ಹಳೆಯ ಪಿಎಲ್‌ಡಿ ಬ್ಯಾಂಕ್ ಜಾಗವನ್ನು ಮಾರುಕಟ್ಟೆ ನಿರ್ಮಾಣಕ್ಕಾಗಿ ಪುರಸಭೆಗೆ ಹಸ್ತಾಂತರಿಸಲಾಗಿದ್ದು, ಬದಲಾಗಿ ಪುರಸಭೆಯ ಈ ನಿವೇಶನವನ್ನು ಬ್ಯಾಂಕ್‌ಗೆ ನೀಡಲಾಗಿದೆ. ಅಧ್ಯಕ್ಷ ರವಿ ಅವರ ನೇತೃತ್ವದಲ್ಲಿ ಬ್ಯಾಂಕ್ ಉತ್ತಮವಾಗಿ ನಡೆಯುತ್ತಿದೆ. ಕಟ್ಟಡದ ಅಡಿಪಾಯಕ್ಕೆ ಈಗಾಗಲೇ ₹10 ಲಕ್ಷ ನೀಡಲಾಗಿದ್ದು, ಉಳಿದ ₹90 ಲಕ್ಷವನ್ನು ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಬಿಡುಗಡೆ ಮಾಡಿಸಲಾಗುವುದು. ಕಟ್ಟಡದ ಕೆಳಭಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ, ಮೇಲ್ಭಾಗದಲ್ಲಿ ಸಭಾಂಗಣ ಹಾಗೂ ಬ್ಯಾಂಕ್ ಕಚೇರಿ ಮಾಡುವುದರಿಂದ ಬಾಡಿಗೆ ಆದಾಯ ಬಂದು ಬ್ಯಾಂಕ್ ನಿರ್ವಹಣೆ ಸುಲಭವಾಗಲಿದೆ ಎಂದು ವಿವರಿಸಿದರು.

ಬರ ಪರಿಹಾರಕ್ಕಾಗಿ ಸುಪ್ರೀಂ ಮೊರೆ:

ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಾದ ₹22,000 ಕೋಟಿ ಬರ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗುವುದು. ನನಗೆ ಬಾಲ ಇಲ್ಲ ಎಂದು ಟೀಕಿಸಿರುವ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಹಿರಿಯರಿದ್ದಾರೆ. ಅವರು ತಮ್ಮ ಪ್ರಭಾವ ಬಳಸಿ ರಾಜ್ಯಕ್ಕೆ ಬರ ಪರಿಹಾರ ಕೊಡಿಸಲಿ ಎಂದು ಬಾಲಕೃಷ್ಣ ಮನವಿ ಮಾಡಿದರು.

ವಿಪಕ್ಷಗಳಿಗೆ ಬಹಿರಂಗ ಚರ್ಚೆಗೆ ಸವಾಲು:

ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ಸರ್ಕಾರ ದಿವಾಳಿಯಾಗಿದ್ದರೆ ನೌಕರರಿಗೆ ಸಂಬಳ, ಕ್ಷೇತ್ರಗಳಿಗೆ ನೂರಾರು ಕೋಟಿ ಅನುದಾನ ಹೇಗೆ ಬರುತ್ತಿತ್ತು? ಮಾಗಡಿ ಪಟ್ಟಣದ ಅಭಿವೃದ್ಧಿಗೇ ₹50 ಕೋಟಿ ನೀಡಿದ್ದೇನೆ. ಪ್ರತಿ ವಾರ್ಡ್‌ಗೆ ₹2 ರಿಂದ ₹3 ಕೋಟಿ ಅನುದಾನ ಸಿಗುತ್ತಿದ್ದು, ಅಂಗನವಾಡಿ ಕಟ್ಟಡ ಸೇರಿ ಅಗತ್ಯ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಪ್ರತಿ ಪಂಚಾಯಿತಿಗೆ ₹1 ಕೋಟಿ ಅನುದಾನ ನೀಡಿದ್ದು, ಇದರಲ್ಲಿ ₹25 ಲಕ್ಷ ಬೇಸಿಗೆಯ ಕುಡಿಯುವ ನೀರಿನ ಕಾಮಗಾರಿಗೆ ಮೀಸಲಿಡಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ₹100 ಕೋಟಿ , ಆರ್‌ಡಿಪಿಆರ್‌ನಿಂದ ₹70- ₹80 ಕೋಟಿ ಹಾಗೂ ನನ್ನ ಇಲಾಖೆಯಿಂದ ₹50 ಕೋಟಿ ಅನುದಾನ ಕ್ಷೇತ್ರಕ್ಕೆ ತಂದಿದ್ದೇನೆ. ಬಿಜೆಪಿ ಆಡಳಿತದಲ್ಲಿ ಎಷ್ಟು ಅನುದಾನ ಬಂದಿತ್ತು ಎಂಬ ಬಗ್ಗೆ ಆರ್. ಅಶೋಕ್ ಅಥವಾ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಬಹಿರಂಗ ಚರ್ಚೆಗೆ ಬರಲಿ ಎಂದು ಎಚ್.ಸಿ. ಬಾಲಕೃಷ್ಣ ಸವಾಲು ಹಾಕಿದರು.

5 ಲಕ್ಷ ನಿವೇಶನ, 8 ಲಕ್ಷ ಇ- ಸ್ವತ್ತು ಗುರಿ:

ಹಿಂದೆ ಇಂದಿರಾ ಗಾಂಧಿ ಅವರ ಕಾಲದಲ್ಲಿ ಬಡವರಿಗೆ ಆಶ್ರಯ ನಿವೇಶನಗಳ ಕಾಲೋನಿ ನಿರ್ಮಿಸಿದ ಮಾದರಿಯಲ್ಲೇ, ಮುಂದಿನ 6 ತಿಂಗಳಲ್ಲಿ ರಾಜ್ಯಾದ್ಯಂತ ಬಡವರಿಗೆ 5 ಲಕ್ಷ ನಿವೇಶನಗಳನ್ನು ನೀಡಲು ಸರ್ಕಾರ ತೀರ್ಮಾನಿಸಿದೆ. ಈಗಾಗಲೇ ಜಾಗ ಗುರುತಿಸಿ ಮೂಲಸೌಕರ್ಯಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಡಿಸೆಂಬರ್ 31 ರೊಳಗೆ 8 ಲಕ್ಷ ಗ್ರಾಮ ಠಾಣಾ ಆಸ್ತಿಗಳಿಗೆ ಇ-ಸ್ವತ್ತು ನೀಡಲಾಗುವುದು. ನಗರ ಪ್ರದೇಶಗಳಲ್ಲೂ ಬಿ ಖಾತೆ ನಿವೇಶನಗಳನ್ನು ಎ ಖಾತೆಗೆ ಪರಿವರ್ತಿಸಿ ಬ್ಯಾಂಕ್ ಸಾಲ ಹಾಗೂ ವಹಿವಾಟಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರವೀಶ್, ಉಪಾಧ್ಯಕ್ಷ ಹನುಮಯ್ಯ, ನಿರ್ದೇಶಕರಾದ ವೇಣುಗೋಪಾಲ್, ಚನ್ನಗಂಗಯ್ಯ, ಸಿದ್ದೇಗೌಡ, ಚಂದ್ರೇಗೌಡ, ಶಶಾಂಕ್ ನಾಗರಾಜು, ಭವ್ಯ ದೇವೇಂದ್ರ, ನಿರ್ಮಲ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಬೆಳ್ಳಿಯಪ್ಪ, ಮಾಜಿ ಅಧ್ಯಕ್ಷ ಕಲ್ಕೆರೆ ಶಿವಣ್ಣ, ಮುಖಂಡರಾದ ಜೆ.ಪಿ. ಚಂದ್ರೇಗೌಡ, ಬಮೂಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಮೂರ್ತಿ, ಟಿ.ಜಿ. ವೆಂಕಟೇಶ್, ಶಿವಪ್ರಸಾದ್, ಯೋಗನರಸಿಂಹಯ್ಯ, ಚಕ್ರಬಾವಿ ನಾರಾಯಣ್, ಪಾಪಣ್ಣಗೌಡ, ಹರಿಣಿ ಜಯಶಂಕರ್, ಬ್ಯಾಂಕ್ ವ್ಯವಸ್ಥಾಪಕ ಚಿಕ್ಕಸಿದ್ದೇಗೌಡ, ಶಿವಕುಮಾರ್, ಸಂತೋಷ್, ಅನಸೂಯಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.