ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಾದ ಬೆಂಗಳೂರಿನ ಜಯದೇವ ಹೃದಯ ಆಸ್ಪತ್ರೆ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಹಾಗೂ ನಿಮಾನ್ಸ್ ಮಾನಸಿಕ ಆಸ್ಪತ್ರೆಯ ಪ್ರಾದೇಶಿಕ ಕೇಂದ್ರವನ್ನು ಮಂಗಳೂರಿನ ವೆನ್ಲಾಕ್‌ನಲ್ಲಿ ಸ್ಥಾಪನೆಗೆ ಮಹತ್ತರ ಯೋಜನೆ ರೂಪಿಸಲಾಗುವುದು ಎಂದು ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಹೇಳಿದರು.ಸ್ಮಾರ್ಟ್‌ಸಿಟಿ ಅನುದಾನದಲ್ಲಿ ನಿರ್ಮಾಣಗೊಂಡ ವೆನ್ಲಾಕ್ ಜಿಲ್ಲಾಸ್ಪತ್ರೆಯ ನೂತನ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ಬ್ಲಾಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಗುರುವಾರ ಅವರು ಮಾತನಾಡಿದರು.ವೆನ್ಲಾಕ್ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ಕಟ್ಟಡದಲ್ಲಿ ಪ್ರತಿಷ್ಠಿತ ಆಸ್ಪತ್ರೆಗಳ ಪ್ರಾದೇಶಿಕ ಕೇಂದ್ರ ಸ್ಥಾಪನೆಯಾದರೆ ಕ್ಯಾನ್ಸರ್, ಹೃದಯ ಆಸ್ಪತ್ರೆ, ಮಾನಸಿಕ ಚಿಕಿತ್ಸೆಗಳಿಗೆ ಬೆಂಗಳೂರಿನಂತಹ ದೂರಪ್ರದೇಶಕ್ಕೆ ಹೋಗುವುದು ತಪ್ಪಲಿದೆ. ಜತೆಗೆ ದ.ಕ. ಜಿಲ್ಲೆಯಲ್ಲೇ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆ ಲಭ್ಯವಾಗಲಿದೆ ಎಂದರು.ಸದ್ಯಕ್ಕೆ ಸುಸಜ್ಜಿತ ರೀತಿಯಲ್ಲಿ ವೆನ್ಲಾಕ್ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ಕಟ್ಟಡ ನಿರ್ಮಾಣಗೊಂಡಿದೆ. ಕಟ್ಟಡ ಇದ್ದ ಮಾತ್ರಕ್ಕೆ ಒಳ್ಳೆಯ ಆಸ್ಪತ್ರೆಯಾಗುವುದಿಲ್ಲ. ಇಲ್ಲಿನ ಕಾರ್ಯವೈಖರಿ, ಚಿಕಿತ್ಸೆ, ಸ್ಪಂದನೆ ಉತ್ತಮವಾಗಿದ್ದರೆ ಮಾತ್ರ ಸೂಪರ್ ಸ್ಪೆಷಾಲಿಟಿಯು ಎಲ್ಲರನ್ನೂ ತಲುಪಲು ಸಾಧ್ಯ. ಈ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಯ ಕೊರತೆ ಆಗಬಾರದು, ಸೇವೆಯಲ್ಲಿ ತೃಪ್ತಿಯಿದ್ದರೆ ಮಾತ್ರ ಇಲ್ಲಿನ ಸೌಲಭ್ಯಗಳು ಜನರಿಗೆ ತಲುಪಬಹುದು ಎಂದರು.
ಕ್ರಿಟಿಕಲ್ ಕೇರ್ ಬ್ಲಾಕ್ ಮಂಜೂರು: ಆರೋಗ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆಸ್ಪತ್ರೆ ಬ್ಲಾಕ್ ಲೋಕಾರ್ಪಣೆಗೊಳಿಸಿ ಮಾತನಾಡಿ, ವೆನ್ಲಾಕ್ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ಕಟ್ಟಡದ ಮೂಲಕ ದ.ಕ ಜಿಲ್ಲೆಯ ಹಲವು ದಶಕಗಳ ಆರೋಗ್ಯ ಸೇವೆಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಇನ್ನು ಎರಡು ತಿಂಗಳಲ್ಲಿ 17 ಕೋಟಿ ರು. ವೆಚ್ಚದಲ್ಲಿ ಕ್ರಿಟಿಕಲ್ ಕೇರ್ ಬ್ಲಾಕ್ ಮಂಜೂರಾಗಲಿದೆ ಎಂದರು.ವೆನ್ಲಾಕ್ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಮಾರ್ಟ್‌ಸಿಟಿ ಅಲ್ಲದೆ, ಕೆಎಂಸಿ ವತಿಯಿಂದ 4 ಕೋ.ರು. ವೆಚ್ಚದ ಆರೋಗ್ಯ ಉಪಕರಣಗಳನ್ನು ನೀಡಿದ್ದಾರೆ. ಸರ್ಕಾರ ಹಾಗೂ ಕೆಎಂಸಿ ಜತೆಗಿನ ಸಹಭಾಗಿತ್ವದಿಂದಾಗಿ ವೆನ್ಲಾಕ್ ಆಸ್ಪತ್ರೆ ಇಂದು ಉತ್ತಮ ಆರೋಗ್ಯ ಸೇವೆ ನೀಡಲು ಸಾಧ್ಯವಾಗಿದೆ. ಮುಂದಿನ 2 ತಿಂಗಳಲ್ಲಿ ಕ್ಯಾಥ್‌ಲ್ಯಾಬ್ ಲೋಕಾರ್ಪಣೆಗೊಳ್ಳಲಿದೆ ಎಂದರು.
ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಬೇಕು:ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಪ್ರಾದೇಶಿಕ ಆಸ್ಪತ್ರೆಯಾಗಿ ಇದನ್ನು ಮೇಲ್ದರ್ಜೆಗೆ ಏರಿಸಬೇಕು. ಸುಸಜ್ಜಿತ ಅಂಕಾಲಜಿ ವಿಭಾಗ ಮಂಜೂರಿಗೆ ಕೆಎಂಸಿ ಹಾಗೂ ಸರ್ಕಾರ ಪ್ರಯತ್ನಿಸಬೇಕು. ಆಯುಷ್ಮಾನ್ ಯೋಜನೆಯನ್ನು ಸರಿಯಾಗಿ ಕಾರ್ಯಗತಗೊಳಿಸಬೇಕು ಎಂದರು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಆಧುನಿಕ ಖಾಸಗಿ ಆಸ್ಪತ್ರೆಗಳಿಗೆ ಸರಿಸಾಟಿಯಾಗಿ ಈ ಸರ್ಕಾರಿ ಆಸ್ಪತ್ರೆ ರೂಪುಗೊಂಡಿದೆ. ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಬೇಡಿಕೆ ಇರುವುದಾಗಿ ಹೇಳಿದರು.ಮೇಯರ್ ಸುಧೀರ್ ಶೆಟ್ಟಿ ಮಾತನಾಡಿ, ಮಿಲಾಗ್ರಿಸ್ ಚರ್ಚ್‌ನಿಂದ ರೈಲ್ವೆ ನಿಲ್ದಾಣಕ್ಕೆ ಸಾಗುವ ಈ ರಸ್ತೆಯನ್ನು ಐಎಂಎ ರಸ್ತೆಯಾಗಿ ನಾಮಕರಣ ಮಾಡಲು ಮುಂದಿನ ಪಾಲಿಕೆ ಸಭೆಯಲ್ಲಿ ಅಜೆಂಡಾ ಮಂಡಿಸಿ ಸರ್ಕಾರಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿ, ವೆನ್ಲಾಕ್ ಆಸ್ಪತ್ರೆ ಇನ್ನಷ್ಟು ಮೇಲ್ದರ್ಜೆಗೇರಬೇಕು. ಹಳೆ ಕಟ್ಟಡದ ಬಳಕೆಯಲ್ಲಿ ಮಹತ್ತರ ಬದಲಾವಣೆ ತರಲಾಗುವುದು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ವಹಣೆಗೆ ಪ್ರತ್ಯೇಕ ಆ್ಯಪ್ ರಚಿಸುವ ಅಗತ್ಯವಿದೆ. 55 ಸೆಂಟ್ಸ್ ಜಾಗದಲ್ಲಿ ಆಸ್ಪತ್ರೆಯ ಹಳೆ ಮತ್ತು ಹೊಸ ಕಟ್ಟಡ ನಡುವೆ ಅಭಿವೃದ್ಧಿ ಕಾರ್ಯ ನಡೆಸಬೇಕು ಎಂದರು. ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಕರ್ನಾಟಕ ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ತಾರನಾಥ್ ಕಾಪಿಕಾಡ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟಾನಿ ಅಲ್ವಾರಿಸ್, ಪ್ರತಿಪಕ್ಷ ನಾಯಕ ಪ್ರವೀನ್ ಚಂದ್ರ ಆಳ್ವಾ, ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಸಿಇಒ ಡಾ.ಆನಂದ್, ಎಂಸಿಸಿ ಕಮೀಷನರ್ ಆನಂದ್, ಸ್ಮಾರ್ಟ್‌ಸಿಟಿ ಎಂಡಿ ರಾಜು,, ಡಿಎಚ್‌ಒ ಡಾ. ತಿಮ್ಮಯ್ಯ ಮತ್ತಿತರರಿದ್ದರು.
ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ಡಾ.ಜೆಸಿಂತಾ ಡಿಸೋಜಾ ಸ್ವಾಗತಿಸಿದರು.-----------------ಸೂಪರ್ ಸ್ಪೆಷಾಲಿಟಿ ಸರ್ಜಿಕಲ್‌ನ ವಿಶೇಷತೆನೂತನ ಮಾದರಿಯ 1,65,000 ಚದರ ಅಡಿ ವಿಸ್ತೀರ್ಣದ ಸೂಪರ್ ಸ್ಪೆಷಾಲಿಟಿ ಸರ್ಜಿಕಲ್ ಕಟ್ಟಡದ ತಳ ಅಂತಸ್ತು, ನೆಲ ಅಂತಸ್ತು ಒಳಗೊಂಡಂತೆ ಒಟ್ಟು 7 ಅಂತಸ್ತುಗಳನ್ನು ಕಟ್ಟಡವು ಹೊಂದಿದ್ದು, 250 ಹಾಸಿಗೆಗಳ ಸೌಲಭ್ಯ ಹೊಂದಿದೆ. 4ನೇ ಅಂತಸ್ತಿನವರೆಗೆ ಕಾಮಗಾರಿ ಪೂರ್ಣಗೊಂಡಿದೆ. ಕಟ್ಟಡದ ತಳ ಅಂತಸ್ತಿನಲ್ಲಿ ಕ್ಯಾಥ್ ಲ್ಯಾಬ್ ಮತ್ತು ರೇಡಿಯಾಲಜಿ ವಿಭಾಗಗಳಿವೆ. ನೆಲ ಅಂತಸ್ತಿನಲ್ಲಿ 15 ಹಾಸಿಗೆಗಳ ತುರ್ತು ಚಿಕಿತ್ಸಾ ವಿಭಾಗ, 8 ಹಾಸಿಗೆಗಳ ತುರ್ತು ಚಿಕಿತ್ಸಾ ಐಸಿಯು, ಎಂಡೋಸ್ಕೋಪಿ ಮತ್ತು ತುರ್ತು ಶಸ್ತ್ರ ಚಿಕಿತ್ಸಾ ಕೊಠಡಿಗಳಿವೆ.