ಸಾರಾಂಶ
ಉಳ್ಳಾಲ : ಪಶ್ಚಿಮ ಬಂಗಾಳ ಮೂಲದ ಯುವತಿ ಮೇಲೆ ಆಟೋ ಚಾಲಕ ಸೇರಿ ಮೂವರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉಳ್ಳಾಲ ತಾಲೂಕಿನ ಮುನ್ನೂರು ಕೊಟ್ಟಾರಿಮೂಲೆ ಬಂಗುಲೆ ನೇತ್ರಾವತಿ ನದಿ ಬಳಿ ಬುಧವಾರ ತಡರಾತ್ರಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಮೂಲ್ಕಿ ನಿವಾಸಿ, ಆಟೋ ಚಾಲಕ ಪ್ರಭುರಾಜ್ (38), ಕುಂಪಲ ಮೂಲದ ಮಿಥುನ್ (30), ಮಣಿ (30) ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ?:
ಪಶ್ಚಿಮ ಬಂಗಾಳದ ಕುಚ್ ಬಿಹಾರ್ ಮೂಲದ 20 ವರ್ಷದ ಯುವತಿ ಕೆಲಸ ಅರಸಿ ತನ್ನ ಗೆಳೆಯನ ಜೊತೆ ಮಂಗಳೂರಿಗೆ ಬುಧವಾರ ಬಂದಿದ್ದಳು. ಗೆಳೆಯನ ಜೊತೆಗೆ ಜಗಳವಾಗಿದೆ. ಆತ ಈಕೆಯ ಮೊಬೈಲಿಗೆ ಹಾನಿ ಮಾಡಿದ್ದಾನೆ. ಆಗ ಮೊಬೈಲ್ ರಿಪೇರಿಗೆಂದು ಆಟೋ ಹಿಡಿದು ಮೊಬೈಲ್ ಅಂಗಡಿಗೆ ತೆರಳಿದ್ದಾಳೆ. 5-6 ಗಂಟೆಗಳ ಕಾಲ ಆಕೆ ಆಟೋ ಚಾಲಕನ ಜತೆ ಇದ್ದುದ್ದರಿಂದ ಚಾಲಕನ ಜತೆ ಯುವತಿಗೆ ಗೆಳೆತನವಾಗಿದೆ. ಮೊಬೈಲ್ ರಿಪೇರಿ ಹಣವನ್ನು ಚಾಲಕನೇ ಪಾವತಿಸಿದ್ದಾನೆ.
ಯುವತಿ ಆಟೋ ಚಾಲಕನ ಬಳಿ ರಾತ್ರಿ ಪಶ್ಚಿಮ ಬಂಗಾಳಕ್ಕೆ ಹೋಗಲು ರೈಲ್ವೇ ನಿಲ್ದಾಣಕ್ಕೆ ಬಿಡಲು ಹೇಳಿದ್ದಾಳೆ. ಆದರೆ ಆಟೋ ಚಾಲಕ ತನ್ನ ಇಬ್ಬರು ಗೆಳೆಯರನ್ನು ಕರೆಸಿ ಯುವತಿಯನ್ನು ಬೇರೆಡೆಗೆ ಕರೆದುಕೊಂಡು ಹೋಗಿ ಯುವತಿಗೆ ಮದ್ಯಪಾನ ಮಾಡಿಸಿದ್ದಾರೆ. ಆಗ ಯುವತಿ ಪ್ರಜ್ಞೆ ತಪ್ಪಿದ್ದಾಳೆ. ಪ್ರಜ್ಞೆ ಬಂದಾಗ ಅತ್ಯಾಚಾರ ನಡೆದಿರುವುದು ಆಕೆ ಗಮನಕ್ಕೆ ಬಂದಿದೆ. ಆಗ ಯುವತಿ ಸ್ಥಳೀಯರ ಸಹಾಯದದಿಂದ 112 ನಂಬರ್‌ಗೆ ಕರೆಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
ತಕ್ಷಣವೇ ಹೊಯ್ಸಳ ತಂಡ ಸ್ಥಳಕ್ಕೆ ತೆರಳಿ ಯುವತಿಯನ್ನು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಅವಳು ಮಾತನಾಡುವ ಸ್ಥಿತಿಯಲ್ಲಿರದ ಕಾರಣ ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್ ಮಾತನಾಡಿ, ಗುರುವಾರ ಬೆಳಗ್ಗೆ ಯುವತಿಯ ಹೇಳಿಕೆಯ ಪ್ರಕಾರ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.