ಹುಬ್ಬಳ್ಳಿ:

ಪಶ್ಚಿಮ ಪದವೀಧರ ಚುನಾವಣೆಯಲ್ಲಿ ಮತದಾರರ ನೋಂದಣಿಯೇ ದೊಡ್ಡ ಸವಾಲು. ನೋಂದಣಿ ಮಾಡಿಸುವ ಜತೆಗೆ ಮತ ಹಾಕಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಈ ನಿಟ್ಟಿನಲ್ಲಿ ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಬಿಜೆಪಿ ಧಾರವಾಡ ಜಿಲ್ಲಾ ಗ್ರಾಮಾಂತರ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಡಾ. ಶ್ಯಾಮ ಪ್ರಸಾದ ಮುಖರ್ಜಿ ಸ್ಮರಣ ಪಾಕ್ಷಿಕ ಜಿಲ್ಲಾ ಸಮ್ಮೇಳನ ಹಾಗೂ ಪಶ್ಚಿಮ ಪದವೀಧರ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಯಾವುದೇ ಚುನಾವಣೆಯಲ್ಲೂ ಪ್ರತಿ ಮತವೂ ಮುಖ್ಯವಾಗುತ್ತದೆ. ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ. ಪ್ರತಿ ಮತದಾರನ ಮನವೊಲಿಸುವ ಕೆಲಸ ಮಾಡಬೇಕು ಎಂದರು. ಜತೆ-ಜತೆಗೆ ಪ್ರತಿ ಪದವೀಧರರ ನೋಂದಣಿ ಮಾಡಿಸುವಂತಾಗಬೇಕು ಎಂದರು.

ಭಾರತೀಯ ಸಂಸ್ಕೃತಿ, ಭಾಷೆಯನ್ನು ಶಿಕ್ಷಣದೊಂದಿಗೆ ಜೋಡಿಸಿದ ಕೀರ್ತಿ ಡಾ. ಶ್ಯಾಮಪ್ರಸಾದ ಮುಖರ್ಜಿ ಹಾಗೂ ರವೀಂದ್ರನಾಥ ಟ್ಯಾಗೋರ್ ಅವರಿಗೆ ಸಲ್ಲುತ್ತದೆ. ಇಂತಹ ಮಹಾನ್‌ ಚೇತನಗಳ ಬಗ್ಗೆ ಎಲ್ಲರೂ ಅಧ್ಯಯನ ಮಾಡಬೇಕು ಎಂದು ಹೇಳಿದರು.


ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಪಶ್ಚಿಮ ಪದವೀಧರ ಚುನಾವಣೆಗೆ ಸಂಬಂಧಿಸಿದಂತೆ ಧಾರವಾಡ ಗ್ರಾಮಾಂತರಕ್ಕೆ 12 ಮತಗಟ್ಟೆ ಬರುತ್ತವೆ. ಪ್ರತಿ 25 ಮತದಾರರಿಗೆ ಒಬ್ಬ ಘಟಕ ನಾಯಕರನ್ನು ನೇಮಿಸಲಾಗುವುದು. ಎಲ್ಲರೂ ಸಂಘಟಿತರಾಗಿ ಪಕ್ಷದ ಅಭ್ಯರ್ಥಿ ಸಂಕನೂರು ಅವರು ಗೆಲ್ಲುವಂತೆ ಮಾಡಬೇಕು ಎಂದರು.

ಶಾಸಕ ಎಂ.ಆರ್‌. ಪಾಟೀಲ, ರಾಜ್ಯಸಭೆ ಸದಸ್ಯ ಎಂ. ನಾಗರಾಜ, ವಿಧಾನ ಪರಿಷತ್‌ ಸದಸ್ಯರಾದ ಲಿಂಗರಾಜ ಪಾಟೀಲ, ಎಸ್‌.ವಿ. ಸಂಕನೂರು, ಪ್ರಮುಖರಾದ ನಿಂಗಪ್ಪ ಸುತಗಟ್ಟಿ, ಅಮೃತ ದೇಸಾಯಿ, ನಾಗರಾಜ ಛಬ್ಬಿ, ಜಯತೀರ್ಥ ಕಟ್ಟಿ, ಬಸವರಾಜ ಕುಂದಗೋಳಮಠ, ಚೈತ್ರಾ ಶಿರೂರು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.