ಪಶ್ಚಿಮಘಟ್ಟ ಪರಿಸರ ಪೂರ್ವಿಕರ ಉಡುಗೊರೆ: ಶಾಸಕ ಎಚ್.ಡಿ.ತಮ್ಮಯ್ಯ

| Published : Oct 09 2025, 02:00 AM IST

ಸಾರಾಂಶ

ಪೂರ್ವಿಕರು ನಮ್ಮ ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿರುವ ಸುಂದರವಾದ ಪರಿಸರವನ್ನು ನಮಗೆ ಉಡುಗೊರೆಯಾಗಿ ಉಳಿಸಿಕೊಟ್ಟಿದ್ದಾರೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಪೂರ್ವಿಕರು ನಮ್ಮ ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿರುವ ಸುಂದರವಾದ ಪರಿಸರವನ್ನು ನಮಗೆ ಉಡುಗೊರೆಯಾಗಿ ಉಳಿಸಿಕೊಟ್ಟಿದ್ದಾರೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಪಟ್ಟರು.

ಕರ್ನಾಟಕ ಅರಣ್ಯ ಇಲಾಖೆ, ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ವತಿಯಿಂದ ವನ್ಯಜೀವಿ ಸಪ್ತಾಹ -2025ರ ಅಂಗವಾಗಿ ಬುಧವಾರ ನಗರದ ತಾಲೂಕು ಕಚೇರಿಯಿಂದ ಟೌನ್ ಮಹಿಳಾ ಸಮಾಜದ ವರೆಗೆ ನಡೆದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾವು ಪರಿಸರವನ್ನು ಅಳಿಸಿದ್ದೇಯಾದರೆ ಖಂಡಿತ ಮುಂದಿನ ಯುವ ಪೀಳಿಗೆ, ಜನಾಂಗಕ್ಕೆ ಅಪಾರವಾದ ಹಾನಿಯಾಗುವ ಸಾಧ್ಯತೆಯಿದೆ ಎಚ್ಚರಿಸಿದರು.

ಉಸಿರಾಟಕ್ಕೆ ಬೇಕಾದ ಒಳ್ಳೆಯ ಮರ ಹಾಗೂ ಗಿಡಗಳನ್ನು ಬೆಳೆಸಿದರೆ ನಮಗೆ ಉತ್ತಮ ಆಮ್ಲಜನಕ ದೊರೆತು ಆರೋಗ್ಯವಂತರಾಗಿ ಬದುಕಲು ಸಾಧ್ಯವಾಗುತ್ತದೆ. ಜೊತೆಗೆ ಪ್ರಾಣಿ, ಪಕ್ಷಿಗಳಿಗೂ ಸಹಾಯವಾಗುತ್ತದೆ. ಅರಣ್ಯ, ಪರಿಸರ ಉತ್ತಮವಾಗಿ ಉಳಿಸಿದರೆ ಊಹೆಗೂ ಮೀರಿದ ಮಳೆಯಾಗುತ್ತದೆ. ದಟ್ಟವಾದ ಅರಣ್ಯವಿರುವುದರಿಂದಲೇ ಆಗುಂಬೆ, ದೇವವೃಂದದಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದೆ. ಹಾಗಾಗಿ ದಟ್ಟವಾದ ಅರಣ್ಯ ಉಳಿಸಿ ಬೆಳೆಸಿ, ಪರಿಸರ ಉಳಿಸುವಂತಹ ಕೆಲಸವನ್ನ ಜಿಲ್ಲಾಡಳಿತ, ಅರಣ್ಯ ಇಲಾಖೆ, ಸರ್ಕಾರ, ಎಲ್ಲ ಸಂಘ-ಸಂಸ್ಥೆಗಳ ಜವಾಬ್ದಾರಿ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಅರಣ್ಯವನ್ನು ಉಳಿಸಿ ಬೆಳೆಸುವುದರ ಜೊತೆಗೆ ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ. ಯುವ ಪೀಳಿಗೆಗೆ ಪರಿಸರದ ಮಹತ್ವವನ್ನು ತಿಳಿಸಿಕೊಡಬೇಕಾಗುತ್ತದೆ. ಆಗಿನ ಕಾಲದಲ್ಲಿ ನೆರಳಿಗಾಗಿ, ಹಣ್ಣು ಹಂಪಲುಗಳಿಗಾಗಿ ಮರಗಳನ್ನು ಬೆಳೆಸುತ್ತಿದ್ದರು. ಆದರೆ ಈಗ ಆ ರೀತಿ ಒಂದೇ ಒಂದು ಹಣ್ಣಿನ ಮರಗಳಿಲ್ಲ ಎಂದು ಹೇಳಿದರು.

ಆಕೇಶಿಯಾ ಮತ್ತು ನೀಲಗಿರಿ ಮರವನ್ನು ಸಂಪೂರ್ಣವಾಗಿ ಇಡೀ ರಾಜ್ಯದಲ್ಲಿ ಬೆಳೆಯಬಾರದು ಎಂದು ಸರ್ಕಾರ ಆದೇಶ ನೀಡಿತ್ತು. ಇದುವರೆಗೂ ಇದು ಕಾರ್ಯರೂಪಕ್ಕೆ ಬಂದಿಲ್ಲ. ಆಗುಂಬೆ ಘಾಟ್, ಶಿರಾಡಿ ಘಾಟ್‌ನಲ್ಲಿ ಯಾವುದೇ ಹಣ್ಣಿನ ಮರಗಳು ಇಲ್ಲದಿರುವುದರಿಂದ ಪ್ರಯಾಣಿಕರು ಎಸೆಯುವ ಹಣ್ಣುಗಳನ್ನು ತಿನ್ನಲು ಪ್ರಾಣಿಗಳು ಕಾದು ಕುಳಿತಿರುವುದನ್ನು ನಾವು ಗಮನಿಸಬಹುದು. ಹೀಗಾಗಿ ನಾವು ಪರಿಸರ ಸಂರಕ್ಷಣೆ ಮಾಡುವ ಸಂದರ್ಭದಲ್ಲಿ ಪ್ರಾಣಿ ಸಂಕುಲವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಈ ಜಗತ್ತು, ಭೂಮಿ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ಪ್ರಾಣಿ, ಪಕ್ಷಿಗಳು, ಸೂಕ್ಷ್ಮ ಜೀವಿಗಳಿಗೂ ದೇವರು ತಮ್ಮದೇ ಆದ ಸ್ಥಾನವನ್ನು ಕಲ್ಪಿಸಿದ್ದಾನೆ, ಅವು ಒಂದಕ್ಕೊಂದು ಪೂರಕವಾಗಿದ್ದು, ಯಾವುದೇ ಒಂದನ್ನು ನಾಶ ಮಾಡಿದರೂ ಮತ್ತೊಂದು ಬದುಕಲು ಸಾಧ್ಯವಿಲ್ಲ. ಇದು ನಮ್ಮ ಕಣ್ಣಿಗೆ ಕಾಣುವ ಸತ್ಯ, ಇಂತಹ ಸಮತೋಲನವಾದ ಪ್ರಕೃತಿಯನ್ನು ನಾವು ಉಳಿಸಬೇಕು ಎಂದು ಹೇಳಿದರು.

ಗಾಂಧೀಜಿ ಮಾತಿನಂತೆ ಈ ಭೂಮಿಗೆ ಮನುಷ್ಯನ ಆಸೆಯನ್ನು ಈಡೇರಿಸುವ ಶಕ್ತಿ ಖಂಡಿತವಾಗಿ ಇದೆ; ಆದರೆ, ದುರಾಸೆಯನ್ನಲ್ಲ, ನಾವು ದುರಾಸೆಗೆ ಒಳಗಾಗಿ ಪರಿಸರ ನಾಶ ಮಾಡಿದರೆ ಮುಂದೊಂದು ದಿನ ನಮ್ಮ ನಾಶಕ್ಕೆ ನಾವೇ ಕಾರಣರಾಗುತ್ತೇವೆ ಎಂದರು.

ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌ ಬಾಬು ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಜಾಥಾದಲ್ಲಿ ಭಾಗವಹಿಸಿದ್ದರು.