ನಾಡಿನ ಎಲ್ಲ ಸಮುದಾಯಗಳನ್ನು ತುದಿಗಾಲ ಮೇಲೆ ನಿಲ್ಲಿಸಿರುವ ಜಾತಿ ಗಣತಿ ಇಂದು ಏನಾಗ್ತೈತಿ?

| N/A | Published : Apr 17 2025, 12:48 AM IST / Updated: Apr 17 2025, 06:42 AM IST

ನಾಡಿನ ಎಲ್ಲ ಸಮುದಾಯಗಳನ್ನು ತುದಿಗಾಲ ಮೇಲೆ ನಿಲ್ಲಿಸಿರುವ ಜಾತಿ ಗಣತಿ ಇಂದು ಏನಾಗ್ತೈತಿ?
Share this Article
  • FB
  • TW
  • Linkdin
  • Email

ಸಾರಾಂಶ

  ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷಾ (ಜಾತಿ ಆಧಾರಿತ ಜನಗಣತಿ) ವರದಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿರುವ ವಿಶೇಷ ಸಚಿವ ಸಂಪುಟ ಸಭೆ ಗುರುವಾರ ಸಂಜೆ 4ಕ್ಕೆ ನಡೆಯಲಿದ್ದು, ಯಾವ ತೀರ್ಮಾನ ಹೊರ ಬೀಳಬಹುದು ಎಂಬ ಕುರಿತು ಇದೀಗ ತೀವ್ರ ಕುತೂಹಲ ನಿರ್ಮಾಣವಾಗಿದೆ.

 ಬೆಂಗಳೂರು : ನಾಡಿನ ಎಲ್ಲ ಸಮುದಾಯಗಳನ್ನು ತುದಿಗಾಲ ಮೇಲೆ ನಿಲ್ಲಿಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷಾ (ಜಾತಿ ಆಧಾರಿತ ಜನಗಣತಿ) ವರದಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿರುವ ವಿಶೇಷ ಸಚಿವ ಸಂಪುಟ ಸಭೆ ಗುರುವಾರ ಸಂಜೆ 4ಕ್ಕೆ ನಡೆಯಲಿದ್ದು, ಯಾವ ತೀರ್ಮಾನ ಹೊರ ಬೀಳಬಹುದು ಎಂಬ ಕುರಿತು ಇದೀಗ ತೀವ್ರ ಕುತೂಹಲ ನಿರ್ಮಾಣವಾಗಿದೆ.

ಜಾತಿ ಗಣತಿ ವರದಿಯ ಮುಖ್ಯಾಂಶಗಳ ಸಂಕ್ಷಿಪ್ತ ವರದಿ ಕಳೆದ ವಾರವೇ ಸಚಿವರ ಕೈ ಸೇರಿದ್ದು, ವರದಿ ಅಧ್ಯಯನ ನಡೆಸಿ ಗುರುವಾರದ ಸಂಪುಟ ಸಭೆಯಲ್ಲಿ ಅಭಿಪ್ರಾಯ ಮಂಡಿಸುವಂತೆ ಸೂಚಿಸಲಾಗಿತ್ತು. ಇದರ ಬೆನ್ನಲ್ಲೇ ವರದಿಯ ಮುಖ್ಯಾಂಶಗಳು ಬಹಿರಂಗಗೊಂಡು ಸಮುದಾಯಗಳ ಮುಖಂಡರ ಅವಗಾಹನೆಗೂ ಲಭ್ಯವಾದವು.

ಇಷ್ಟಾಗುತ್ತಿದ್ದಂತೆಯೇ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರೆ, ಹಿಂದುಳಿದ ವರ್ಗಗಳು ಈ ವರದಿ ಪರ ಪ್ರಬಲ ಬೆಂಬಲ ವ್ಯಕ್ತಪಡಿಸಿವೆ. ಇದೇ ವೇಳೆ ಸಮುದಾಯದ ಮುಖಂಡರು ಹಾಗೂ ಶಾಸಕರು ತಮ್ಮ ಸಮುದಾಯದ ಸಚಿವರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿ ಸಮುದಾಯದ ಹಿತ ಕಾಪಾಡಲು ಸಚಿವ ಸಂಪುಟ ಸಭೆಯಲ್ಲಿ ಯಾವ ರೀತಿ ವಾದ ಮಂಡಿಸಬೇಕು ಎಂಬ ಮಾಹಿತಿಯನ್ನು ಈಗಾಗಲೇ ಸಚಿವರಿಗೆ ನೀಡಿದ್ದಾರೆ. ಜತೆಗೆ, ಇದಕ್ಕೆ ಬೇಕಾದ ಪೂರಕ ದಾಖಲೆಗಳನ್ನು ಸಹ ಸಚಿವರಿಗೆ ಒದಗಿಸಿದ್ದಾರೆ.

ಇದಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರ ಅಭಿಪ್ರಾಯ ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಈಗಾಗಲೇ ಸ್ಪಷ್ಟಪಡಿಸಿರುವುದರಿಂದ ಎಲ್ಲ ಸಮುದಾಯಗಳ ಸಚಿವರು ಸಜ್ಜಾಗಿ ಸಚಿವ ಸಂಪುಟಕ್ಕೆ ತೆರಳಲಿದ್ದು, ಗಹನ ಚರ್ಚೆ ನಡೆಯುವ ಸಾಧ್ಯತೆಯಿದೆ.

ಮುಂದೇನು?:

50 ಸಂಪುಟಗಳ ವಿಸ್ತೃತ ವರದಿ ಬಗ್ಗೆ ಒಂದೇ ಕ್ಯಾಬಿನೆಟ್‌ ಸಭೆಯಲ್ಲಿ ಪರ-ವಿರೋಧ ಚರ್ಚೆ ನಡೆಸಿ ಅಂತಿಮ ನಿರ್ಣಯ ಕೈಗೊಳ್ಳುವುದು ಕಷ್ಟ ಸಾಧ್ಯ. ಅಲ್ಲದೆ, ಪ್ರಮುಖ ಸಮುದಾಯಗಳು ಜಾತಿ ಗಣತಿ ಬಗ್ಗೆ ಹಲವು ಸಂಶಯಗಳನ್ನು ವ್ಯಕ್ತಪಡಿಸುವ ಸಾಧ್ಯತೆಯಿರುವುದರಿಂದ ಅವುಗಳನ್ನು ನಿರ್ಲಕ್ಷಿಸಿ ನಿರ್ಧಾರ ಕೈಗೊಳ್ಳುವುದು ಸುಲಭವಲ್ಲ.

ಈ ಹಿನ್ನೆಲೆಯಲ್ಲಿ ವರದಿ ಬಗ್ಗೆ ಕೂಲಂಕಷವಾಗಿ ಅಧ್ಯಯನ ನಡೆಸಿ ವರದಿ ನೀಡಲು ಸಚಿವ ಸಂಪುಟ ಉಪಸಮಿತಿ ರಚನೆ ಮಾಡುವ ಅಥವಾ ರಾಜಕೀಯೇತರವಾಗಿ ಅಧ್ಯಯನ ನಡೆಸಬೇಕೆಂಬ ಅಭಿಪ್ರಾಯ ವ್ಯಕ್ತವಾದರೆ ಹಿರಿಯ ಅಧಿಕಾರಿಗಳು ಅಥವಾ ವಿಷಯ ತಜ್ಞರ ನೇತೃತ್ವದ ತಜ್ಞರ ಸಮಿತಿ ರಚಿಸಿ ವರದಿ ಸಲ್ಲಿಕೆಗೆ 3 ರಿಂದ 6 ತಿಂಗಳ ಕಾಲಾವಕಾಶ ನೀಡಬಹುದು ಎಂದು ಹೇಳಲಾಗುತ್ತಿದೆ.

ಮತ್ತೊಂದು ಮೂಲದ ಪ್ರಕಾರ, ಸಚಿವರ ಜತೆಗೆ ಜನಪ್ರತಿನಿಧಿಗಳ ಅಭಿಪ್ರಾಯವನ್ನೂ ಪಡೆಯಬೇಕೆಂಬ ಒತ್ತಾಯ ಇರುವ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನ ಕರೆಯುವ ಸಾಧ್ಯತೆಯೂ ಇದೆ.

ಅಲ್ಲದೆ, ಲಿಂಗಾಯತ, ಒಕ್ಕಲಿಗ ಸೇರಿದಂತೆ ಕೆಲ ಸಮುದಾಯಗಳಿಂದ ಇದು 10 ವರ್ಷಗಳ ಹಿಂದಿನ ವರದಿ ಎಂಬ ಆಕ್ಷೇಪ ವ್ಯಕ್ತವಾಗಿದೆ. ಹೀಗಾಗಿ ವರದಿಯನ್ನು ಇಂದೀಕರಣ (ಅಪ್ಡೇಟ್‌) ಮಾಡಲು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಹಾಲಿ ಅಧ್ಯಕ್ಷ ಮಧುಸೂದನ್‌ ಆರ್‌. ನಾಯ್ಕ್‌ ಅವರಿಗೆ ಜವಾಬ್ದಾರಿ ನೀಡಬಹುದು. ಜತೆಗೆ ವರದಿಯಲ್ಲಿನ ವಿವಿಧ ಅಂಶಗಳ ಬಗ್ಗೆ ಜಾತಿವಾರು ಇರುವ ಆಕ್ಷೇಪಣೆಗಳನ್ನು ಆಲಿಸಿ ಬಗೆಹರಿಸುವಂತೆ ಸೂಚಿಸಬಹುದು ಎನ್ನಲಾಗಿದೆ.

ವಿಷಯ ಮಂಡನೆಗೆ ಸಚಿವರು ಸಜ್ಜು:

ಒಕ್ಕಲಿಗ ಸಂಘದ ಪ್ರತಿನಿಧಿಗಳು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿ ಐದು ಮಂದಿ ಒಕ್ಕಲಿಗ ಸಚಿವರನ್ನು ಭೇಟಿ ಮಾಡಿ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಬೇಕಾದ ಅಂಶಗಳ ಪಟ್ಟಿ ನೀಡಿದ್ದಾರೆ. ಮತ್ತೊಂದೆಡೆ ಲಿಂಗಾಯತ ನಾಯಕರು ಸಚಿವ ಈಶ್ವರ್‌ ಖಂಡ್ರೆ ಹಾಗೂ ಎಂ.ಬಿ. ಪಾಟೀಲ್‌ ಅವರಿಗೆ ಮನವಿ ಮಾಡಿದ್ದಾರೆ. ಜತೆಗೆ ಮುಸ್ಲಿಂ ಹಾಗೂ ಪರಿಶಿಷ್ಟ ಜಾತಿ, ಪಂಗಡದ ಸಚಿವರು ಸಹ ವಿವಿಧ ಅಂಶಗಳನ್ನು ಪ್ರಸ್ತಾಪಿಸಲು ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಸಂಪುಟ ಸಭೆಯಲ್ಲಿ ತೀವ್ರ ಚರ್ಚೆ ನಿರೀಕ್ಷಿಸಲಾಗಿದೆ.

ಸಚಿವರಿಗೆ ಸ್ಪಷ್ಟ ಸೂಚನೆ ಸಾಧ್ಯತೆ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿಯ ಸೂಕ್ಷ್ಮತೆ ಬಗ್ಗೆ ಸದಸ್ಯರಿಗೆ ತಿಳಿಹೇಳುವ ಸಾಧ್ಯತೆಯಿದ್ದು, ವರದಿ ಜಾರಿಗೆ ಹೈಕಮಾಂಡ್‌ ಒಪ್ಪಿಗೆ ನೀಡಿದೆ. ಜತೆಗೆ ವಿಧಾನಸಭೆ, ಲೋಕಸಭೆ ಚುನಾವಣಾ ಪ್ರಣಾಳಿಕೆಯಲ್ಲೂ ಘೋಷಿಸಿದ್ದೆವು. ಹೀಗಾಗಿ ಇದು ಪಕ್ಷದ ಕಾರ್ಯಕ್ರಮ ಎಂಬುದನ್ನು ಅರಿಯಬೇಕು. ಆಯಾ ಸಮುದಾಯಗಳಲ್ಲಿನ ಜನರಿಗೆ ವಾಸ್ತವಾಂಶಗಳನ್ನು ವಿವರಿಸಿ ಆಕ್ಷೇಪಗಳು ವ್ಯಕ್ತವಾಗದಂತೆ ನೋಡಿಕೊಳ್ಳಬೇಕು. ಸಮುದಾಯದ ಸಂಘ ಸಂಸ್ಥೆಗಳ ಜತೆಗೂಡಿ ಸರ್ಕಾರದ ವಿರುದ್ಧ ಹೇಳಿಕೆಗಳನ್ನು ನೀಡಬಾರದು ಎಂದು ಸ್ಪಷ್ಟ ಸೂಚನೆ ನೀಡುವ ಸಾಧ್ಯತೆಯಿದೆ.

ಈಗಾಗಲೇ ಅಪ್ಡೇಟ್‌ ಆಗಿದೆ:  ಒಬಿಸಿ ಸಚಿವರಿಂದ ವಾದ ನಿರೀಕ್ಷೆ

ಸಚಿವ ಸಂಪುಟ ಸಭೆಯಲ್ಲಿ ವರದಿಯ ವಸ್ತುನಿಷ್ಠತೆ ಬಗ್ಗೆ ಆಕ್ಷೇಪ ವ್ಯಕ್ತವಾದರೆ, ಒಬಿಸಿ ಸಚಿವರು ವರದಿಯನ್ನು ಸಮರ್ಥಿಸಿಕೊಳ್ಳುವ ಸಾಧ್ಯತೆಯಿದೆ. ಮನೆ-ಮನೆಗೂ ತೆರಳಿ 1.60 ಲಕ್ಷ ಸಿಬ್ಬಂದಿ ಕೆಲಸ ಮಾಡಿ ಸಮೀಕ್ಷೆ ನಡೆಸಿದ್ದಾರೆ. ವರದಿಯನ್ನು ಅನಗತ್ಯ ಟೀಕೆ ಮಾಡಬಾರದು. ಇನ್ನು ವರದಿ 2015ರ ಶಿಫಾರಸುಗಳನ್ನು ಮಾತ್ರ ಒಳಗೊಂಡಿಲ್ಲ. ಕಾಂತರಾಜು ಆಯೋಗದ ವರದಿಯನ್ನು ಜಯಪ್ರಕಾಶ್‌ ಹೆಗ್ಡೆ ಆಯೋಗವು ಪರಿಷ್ಕರಣೆ ಮಾಡಿ 2024ರಲ್ಲಿ ವರದಿ ಸಲ್ಲಿಸಿದೆ. ಹೀಗಾಗಿ ಮತ್ತೊಮ್ಮೆ ಇಂದೀಕರಣ (ಅಪ್ಡೇಟ್‌) ಅಗತ್ಯವಿಲ್ಲ ಎಂದು ಅಭಿಪ್ರಾಯ ಮಂಡಿಸುವ ಸಾಧ್ಯತೆಯಿದೆ.

ಏನಾಗಬಹುದು?

- ವರದಿ ಬಗ್ಗೆ ಕೂಲಂಕಷವಾಗಿ ಅಧ್ಯಯನ ನಡೆಸಿ ವರದಿ ನೀಡಲು ಸಚಿವ ಸಂಪುಟ ಉಪಸಮಿತಿ ರಚನೆ ಮಾಡಬಹುದು

- ರಾಜಕೀಯೇತರ ಅಧ್ಯಯನ ನಡೆಸಬೇಕೆಂದಾದರೆ ಹಿರಿಯ ಅಧಿಕಾರಿಗಳು/ವಿಷಯ ತಜ್ಞರ ಸಮಿತಿ ರಚಿಸಬಹುದು

- ಈ ಪೈಕಿ ಯಾವುದೇ ಸಮಿತಿ ರಚನೆಯಾದರೂ ಅಂತಿಮ ವರದಿ ನೀಡಲು 3 ರಿಂದ 6 ತಿಂಗಳ ಅವಕಾಶ ನೀಡಬಹುದು- ಜನಪ್ರತಿನಿಧಿಗಳ ಅಭಿಪ್ರಾಯ ಪಡೆಯಬೇಕೆಂಬ ಒತ್ತಾಯ ಹೆಚ್ಚಾದರೆ ವಿಶೇಷ ಅಧಿವೇಶನ ಕರೆಯುವ ಬಗ್ಗೆ ನಿರ್ಧರಿಸಬಹುದು

- ವರದಿಯನ್ನು ಇಂದೀಕರಣ (ಅಪ್ಡೇಟ್‌) ಮಾಡಲು ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಶಿಫಾರಸು ಮಾಡಬಹುದು

- ವರದಿ ಬಗ್ಗೆ ಜಾತಿವಾರು ಇರುವ ಆಕ್ಷೇಪಣೆ ಆಲಿಸಲು ಹಿಂದುಳಿದ ವರ್ಗಗಳ ಆಯೋಗದ ಹಾಲಿ ಅಧ್ಯಕ್ಷರಿಗೆ ಸೂಚಿಸಬಹುದು

ಯಾರಿಗೂ ಅನ್ಯಾಯ

ಆಗಲು ಬಿಡೋದಿಲ್ಲಇದು ಜಾತಿಗಣತಿ ಅಲ್ಲ. ಸಾಮಾಜಿಕ- ಆರ್ಥಿಕ ಸಮೀಕ್ಷೆ. ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಈ ವರದಿ ಬಗ್ಗೆ ಚರ್ಚೆ ನಡೆಸುತ್ತೇವೆ. ವರದಿ ಜಾರಿಯಿಂದ ಯಾರಿಗೂ, ಯಾವ ಸಮುದಾಯಕ್ಕೂ ಅನ್ಯಾಯ ಆಗಲ್ಲ. ಅನ್ಯಾಯ ಆಗಲು ನಾವು ಬಿಡುವುದೂ ಇಲ್ಲ

.- ಸಿದ್ದರಾಮಯ್ಯ, ಮುಖ್ಯಮಂತ್ರಿ.