ಸಾರಾಂಶ
ಮುಂಡಗೋಡ: ೭೦ ವರ್ಷದಿಂದ ಕಾಂಗ್ರೆಸ್ ಏನು ಮಾಡಿದೆ ಎಂದು ಬಿಜೆಪಿಗರು ಕೇಳುತ್ತಾರೆ. ೧೦ ವರ್ಷ ಇವರು ಏನು ಮಾಡಿದರೆಂದು ಮೊದಲು ಹೇಳಲಿ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಸವಾಲು ಹಾಕಿದರು.
ಬುಧವಾರ ಸಂಜೆ ತಾಲೂಕಿನ ಕಾತೂರ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿ, ರೈತರು ವರ್ಷಗಟ್ಟಲೆ ಪ್ರತಿಭಟನೆ ಮಾಡಿದರೂ ಎಸಿ ರೂಮಿಂದ ಪ್ರಧಾನಿ ಹೊರಗೆ ಬಂದಿಲ್ಲ. ಅವರೆಲ್ಲ ಖಲಿಸ್ತಾನಿ ಭಯೋತ್ಪಾದಕರು ಎಂದು ಕೇಂದ್ರ ಸರ್ಕಾರವೇ ಘೋಷಿಸಿ ಬಿಟ್ಟಿತು. ಇಂಥ ನಾಯಕರಿಗೆ ಮತ ಹಾಕಬೇಕಾ ಎಂದು ಪ್ರಶ್ನಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಾತನಾಡಿ, ಮಠ- ಮಂದಿರ ಕಟ್ಟಿ ಹಿಂದುತ್ವ ಉಳಿಸಿದ್ದು ನಾವು. ಬಿಜೆಪಿಗರದ್ದು ಕೇವಲ ಬಾಯಿ ಮಾತಿನ ಹಿಂದುತ್ವ. ಅವರು ಬೇಕಿದ್ದರೆ ಹಿಂದುತ್ವದ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದರು.
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮಾತನಾಡಿ, ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಮಾಡಿದ ಆದೇಶದಿಂದಾಗಿ ಇಂದಿಗೂ ಅತಿಕ್ರಮಣದಾರರು ಸುರಕ್ಷತೆಯಿಂದ ಇದ್ದಾರೆ. ಅಂಜಲಿ ನಿಂಬಾಳ್ಕರ್ ಅವರು ಆಯ್ಕೆಯಾದರೆ ನಾವೆಲ್ಲರೂ ಸೇರಿ ಅರಣ್ಯ ಅತಿಕ್ರಮಣ ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತೇವೆಂದರು.ಈ ಸಂದರ್ಭದಲ್ಲಿ ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಾಯಿ ಗಾಂವ್ಕರ್, ಮಾಜಿ ಶಾಸಕ ವಿ.ಎಸ್. ಪಾಟೀಲ್, ಮುಂಡಗೋಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನೇಶ್ವರ ಗುಡಿಯಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎನ್. ದುಂಡಸಿ, ಗ್ಯಾರಂಟಿ ಪ್ರಾಧಿಕಾರದ ತಾಲೂಕಾಧ್ಯಕ್ಷ ರಾಜಶೇಖರ ಹಿರೇಮಠ್, ಕೃಷ್ಣ ಹಿರೇಹಳ್ಳಿ, ಯುವ ಧುರೀಣ ವಿವೇಕ್ ಹೆಬ್ಬಾರ್, ಸುನೀಲ್ ನಾಯ್ಕ ಮಳಲ್ಗಾಂವ್, ಕೆಪಿಸಿಸಿ ಕಾರ್ಯದರ್ಶಿ ಕಾರ್ನಲಿನ್ ಫರ್ನಾಂಡಿಸ್, ರಾಮಕೃ ಮೂಲಿಮನಿ, ನಾಗನೂರು ಗ್ರಾಪಂ ಅಧ್ಯಕ್ಷೆ ಯಶೋಧ ಪಾಟೀಲ್, ಗೋಪಾಲ್ ಪಾಟೀಲ್, ಎಚ್.ಎಂ. ನಾಯಕ, ಕಾತೂರ ಸಹಕಾರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶಿವಾಜಿ ಶಿಂದೆ, ಅಜ್ಜಪ್ಪ ಕಾತೂರ, ಆಲೆಹಸನ ಬೆಂಡಿಗೇರಿ, ಅಲ್ಲಾವುದ್ದಿನ ಕಮಡೊಳ್ಳಿ, ಇರ್ಪಾನ ಸವಣೂರ, ಆಸಿಪ್ ಮಖಾನದಾರ, ನಾಗರಾಜ ಹಂಚಿನಮನಿ ಮುಂತಾದವರು ಉಪಸ್ಥಿತರಿದ್ದರು.
ಕಾತೂರ, ಮಳಗಿ, ಪಾಳಾ, ಸಾಲಗಾಂವ, ಇಂದೂರ ಹಾಗೂ ಮುಂಡಗೋಡ ಪಟ್ಟಣದಲ್ಲಿ ಕೂಡ ಕಾಂಗ್ರೆಸ್ ಪ್ರಚಾರ ಸಭೆ ನಡೆಯಿತು.