ಸಾರಾಂಶ
ದೇವೇಗೌಡರು ರಾಷ್ಟ್ರದ ಪ್ರಧಾನ ಮಂತ್ರಿಯಾಗಿದ್ದರು. ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದರು. ಆ ಸಮಯದಲ್ಲೇ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸಲಾಗಲಿಲ್ಲ. ಈಗ ಸಂಸದರಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸುವರು ಎಂದರೆ ನಂಬಲು ಸಾಧ್ಯವೇ. ಚುನಾವಣೆಯಲ್ಲಿ ಜನರಿಗೆ ಮಂಕುಬೂದಿ ಎರಚಲು ಹಸಿಸುಳ್ಳು ಹೇಳುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮದ್ದೂರು
ಎಚ್.ಡಿ.ಕುಮಾರಸ್ವಾಮಿ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಯಾವ ನೀರಾವರಿ ಯೋಜನೆಗಳನ್ನು ಜಿಲ್ಲೆಗೆ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಪ್ರಶ್ನಿಸಿದರು.ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇವೇಗೌಡರು ರಾಷ್ಟ್ರದ ಪ್ರಧಾನ ಮಂತ್ರಿಯಾಗಿದ್ದರು. ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದರು. ಆ ಸಮಯದಲ್ಲೇ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸಲಾಗಲಿಲ್ಲ. ಈಗ ಸಂಸದರಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸುವರು ಎಂದರೆ ನಂಬಲು ಸಾಧ್ಯವೇ. ಚುನಾವಣೆಯಲ್ಲಿ ಜನರಿಗೆ ಮಂಕುಬೂದಿ ಎರಚಲು ಹಸಿಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
೨೦೧೮ರಲ್ಲಿ ಮುಖ್ಯಮಂತ್ರಿಯಾಗಿ ಜಿಲ್ಲೆಗೆ ೮ ಸಾವಿರ ರು. ಘೋಷಣೆ ಮಾಡಿ ೮ ರು. ಕೊಡಲಿಲ್ಲ. ಒಂದು ಸಕ್ಕರೆ ಕಾರ್ಖಾನೆಯನ್ನು ಉಳಿಸಿಕೊಡುವುದಕ್ಕೆ ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ನಂತರದಲ್ಲಿ ಹೊಸ ಸಕ್ಕರೆ ಕಾರ್ಖಾನೆ, ಕೃಷಿ ವಿಶ್ವವಿದ್ಯಾಲಯ, ವಿ.ಸಿ..ನಾಲೆಗಳ ಆಧುನೀಕರಣ ಮಾಡುತ್ತಿರುವುದಾಗಿ ಹೇಳಿದರು.ಲೂಟಿ ಮಾಡಿದ ಹಣದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಸರ್ಕಾರಿ ಅಧಿಕಾರಿ ಅಲ್ಲ. ಕಷ್ಟಪಟ್ಟು ದುಡಿದು ಗಳಿಸಿದ ಹಣದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ರಾಜಕಾರಣ ಪ್ರವೇಶ ಮಾಡುವುದರೊಂದಿಗೆ ಜನಸೇವೆ ಮಾಡುತ್ತಿದ್ದೇನೆ ಎಂದು ಶಾಸಕ ಕೆ,ಎಂ, ಉದಯ್ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.
ಮಾಜಿ ಸಚಿವ ಡಿಸಿ ತಮ್ಮಣ್ಣ ಅವರಿಗೆ ನನ್ನ ತಾತನಷ್ಟು ವಯಸ್ಸಾಗಿದೆ. ಆದರೂ ಆತನಿಗೆ ಸ್ವಲ್ಪವೂ ನಾಚಿಕೆ ಇಲ್ಲ. ಬೇರೆಯವರ ಬಗ್ಗೆ ಟೀಕೆ ಮಾಡುವಾಗ ಪರಿಜ್ಞಾನ ಇಲ್ಲದಂತೆ ಮಾತನಾಡುವರು. ಎಲ್ಲಿಂದಲೋ ಹಣ ಲೂಟಿ ಮಾಡಿಕೊಂಡು ಬಂದು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ನನ್ನ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ವಿರುದ್ಧ ತಮ್ಮಣ್ಣ ಆರೋಪ ಮಾಡುತ್ತಿದ್ದಾರೆ. ಆದರೆ, ಇವರು ಸತ್ಯವಂತರಾ ಅಥವಾ ಇವರ ಕುಟುಂಬ ರಾಜವಂಶಕ್ಕೆ ಸೇರಿದ್ದಾ ಎನ್ನುವ ಮೂಲಕ ಮಾಜಿ ಸಚಿವ ತಮ್ಮಣ್ಣನವರ ಆಸ್ತಿ ವಿಚಾರ ಕೆದಕಿದರು. ಬೆಂಗಳೂರಿನ ಮಾದನಾಯಕನಹಳ್ಳಿ, ಬಿಡದಿ, ಮೈಸೂರು ಹಾಗೂ ನೆಲಮಂಗಲದಲ್ಲಿ ನೂರಾರು ಕೋಟಿಗೂ ಮೀರಿ ಆಸ್ತಿ ಗಳಿಸಿರುವ ಡಿ.ಸಿ.ತಮ್ಮಣ್ಣ ತಮ್ಮ ಮಕ್ಕಳು. ಮೊಮ್ಮಕ್ಕಳು ಹಾಗೂ ಮರಿ ಮಕ್ಕಳಿಗೂ ಸಾಕಾಗುವಷ್ಟು ಆಸ್ತಿ ಮಾಡಿದ್ದಾರೆ. ಸರ್ಕಾರಿ ಅಧಿಕಾರಿ ಆಗಿ ಇಷ್ಟೊಂದು ಆಸ್ತಿ ಮತ್ತು ಹಣ ಸಂಪಾದಿಸಲು ಹೇಗೆ ಸಾಧ್ಯ. ನಾಲ್ಕಾರು ಮಂದಿ ಬಡವರಿಗೆ ಸಹಾಯ ಮಾಡಲು ಇವರಿಂದ ಸಾಧ್ಯವಾಗಿಲ್ಲ ಎಂದು ಲೇವಡಿ ಮಾಡಿದರು.