ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ನಿಲುವೇನು?: ಶಾಸಕ ಎಂ.ಟಿ.ಕೃಷ್ಣಪ್ಪ

| Published : Mar 23 2024, 01:01 AM IST

ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ನಿಲುವೇನು?: ಶಾಸಕ ಎಂ.ಟಿ.ಕೃಷ್ಣಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಪಕ್ಷ ಮೇಕೆದಾಟು ಯೋಜನೆಯನ್ನು ಕಾರ್ಯಗತಗೊಳಿಸುವುದಾಗಿ ಘೋಷಿಸಿತ್ತು. ಆದರೆ ಈಗ ಕಾಂಗ್ರೆಸ್ ನ ಮೈತ್ರಿ ಪಕ್ಷವಾಗಿರುವ ತಮಿಳುನಾಡಿನ ಡಿಎಂಕೆ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಮೇಕೆದಾಟು ಯೋಜನೆ ಮಾಡಲು ಬಿಡುವುದಿಲ್ಲ ಎಂದು ತಿಳಿಸಿದೆ. ಹಾಗಾದರೆ ಮೇಕೆದಾಟು ಯೋಜನೆಯ ಬಗ್ಗೆ ರಾಜ್ಯ ಕಾಂಗ್ರೆಸ್ ನಿಲುವೇನು ಎಂಬುದನ್ನು ಬಹಿರಂಗಪಡಿಸಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಪಕ್ಷ ಮೇಕೆದಾಟು ಯೋಜನೆಯನ್ನು ಕಾರ್ಯಗತಗೊಳಿಸುವುದಾಗಿ ಘೋಷಿಸಿತ್ತು. ಆದರೆ ಈಗ ಕಾಂಗ್ರೆಸ್ ನ ಮೈತ್ರಿ ಪಕ್ಷವಾಗಿರುವ ತಮಿಳುನಾಡಿನ ಡಿಎಂಕೆ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಮೇಕೆದಾಟು ಯೋಜನೆ ಮಾಡಲು ಬಿಡುವುದಿಲ್ಲ ಎಂದು ತಿಳಿಸಿದೆ. ಹಾಗಾದರೆ ಮೇಕೆದಾಟು ಯೋಜನೆಯ ಬಗ್ಗೆ ರಾಜ್ಯ ಕಾಂಗ್ರೆಸ್ ನಿಲುವೇನು ಎಂಬುದನ್ನು ಬಹಿರಂಗಪಡಿಸಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಒತ್ತಾಯಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇಂಡಿಯಾ ಒಕ್ಕೂಟದ ಸಹ ಪಕ್ಷದವರಾಗಿರುವ ತಮಿಳುನಾಡಿನ ಡಿಎಂಕೆ ಪಕ್ಷವನ್ನು ಸಂತುಷ್ಟಪಡಿಸಲು ತಮಿಳುನಾಡಿಗೆ ನೀರು ಹರಿಸಲಾಯಿತು. ಆದರೆ ಈಗ ರಾಜ್ಯದಲ್ಲಿ ನೀರಿಗೆ ಹಾಹಾಕಾರವಿದೆ. ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು ಅಧಿಕಾರದ ಲಾಲಸೆಗಾಗಿ ದಡ್ಡ ಕೆಲಸ ಮಾಡಿದ್ದಾರೆಂದು ಕೃಷ್ಣಪ್ಪ ದೂರಿದರು.

ಅಹೋರಾತ್ರಿ ಧರಣಿ -

ಹೇಮಾವತಿ ನೀರನ್ನು ತುಮಕೂರು ನಾಲೆಗೆ ಬಿಡಲಾಗಿದೆ. ಆದರೆ ನಾಗಮಂಗಲ ನಾಲೆಗೆ ನೀರನ್ನು ಹಾಯಿಸದೇ ಸರ್ಕಾರ ಮಲತಾಯಿ ಧೋರಣೆ ತಳೆದಿದೆ. ಈ ಕ್ಷೇತ್ರ ವ್ಯಾಪ್ತಿಗೆ ಬರುವ ತಾಲೂಕಿನ ದಬ್ಬೇಘಟ್ಟ ಮತ್ತು ಮಾಯಸಂದ್ರ ಹೋಬಳಿಯ ರೈತಾಪಿಗಳು ಬರದ ಬವಣೆಯಲ್ಲಿ ಬೆಂಡಾಗಿ ಹೋಗಿದ್ದಾರೆ. ಕೂಡಲೇ ನಾಗಮಂಗಲ ನಾಲೆಗೆ ನೀರು ಹರಿಸದಿದ್ದಲ್ಲಿ ಸೋಮವಾರ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಮತ್ತು ಲೋಕಸಭಾ ಅಭ್ಯರ್ಥಿಯಾಗಿರುವ ಸೋಮಣ್ಣನವರೊಂ ದಿಗೆ ತಾವು ಹೇಮಾವತಿ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದು ಡಿಎಂಕೆ ಹೇಳಿರುವ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮುದ್ದಹನುಮೇಗೌಡರು ಈ ಕುರಿತು ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಬೇಕೆಂದೂ ಸಹ ಎಂ.ಟಿ.ಕೃಷ್ಣಪ್ಪ ಆಗ್ರಹಿಸಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿರುವ ವಿ.ಸೋಮಣ್ಣನವರ ಪರ ಪ್ರಚಾರ ಮಾಡುವ ಸಲುವಾಗಿ ಪ್ರಥಮ ಬಾರಿಗೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಕಾರ್ಯಕರ್ತರ ಸಮನ್ವಯ ಸಭೆಯನ್ನು ಸೋಮವಾರ ಪಟ್ಟಣದ ಹೊರಪೇಟೆಯಲ್ಲಿರುವ ವಿರಕ್ತ ಮಠದಲ್ಲಿ ಏರ್ಪಡಿಸಲಾಗಿದೆ. ಈ ಸಭೆಗೆ ಜೆಡಿಎಸ್ ನ ಮುಖಂಡರು, ಕಾರ್ಯಕರ್ತರು ಮತ್ತು ಬಿಜೆಪಿಯ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಆಗಮಿಸಬೇಕೆಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮನವಿ ಮಾಡಿಕೊಂಡಿದ್ದಾರೆ.

ಮಾ.೨೫ ರಂದು ನಡೆಯಲಿರುವ ಕಾರ್ಯಕರ್ತರ ಸಮನ್ವಯ ಸಭೆಗೆ ಜೆಡಿಎಸ್ ಕಚೇರಿಯ ಮುಂಭಾಗದಿಂದ ವಿರಕ್ತಮಠ ವರೆಗೂ ಪಾದಯಾತ್ರೆಯಲ್ಲಿ ಸಹಸ್ರಾರು ಕಾರ್ಯಕರ್ತರೊಂದಿಗೆ ತೆರಳಲಾಗುವುದು. ಸಭೆಯ ನಂತರ ಹೇಮಾವತಿ ಕಚೇರಿಯವರೆಗೂ ಪಾದಯಾತ್ರೆಯಲ್ಲಿ ತೆರಳಿ ಅಲ್ಲಿ ನಾಗಮಂಗಲ ನಾಲೆಗೆ ನೀರು ಹರಿಸದಿರುವ ಬಗ್ಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಂ.ಟಿ.ಕೃಷ್ಣಪ್ಪ ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ವಕ್ತಾರರಾದ ವೆಂಕಟಾಪುರ ಯೋಗೀಶ್, ದಲಿತ ಮುಖಂಡರಾದ ಮುನಿಯೂರು ರಂಗಸ್ವಾಮಿ, ಹೊನ್ನೇನಹಳ್ಳಿ ಕೃಷ್ಣ ಉಪಸ್ಥಿತರಿದ್ದರು.