6 ಬಾರಿ ಶಾಸಕರಾಗಿದ್ದ ಕಾಗೇರಿ ಕೊಡುಗೆ ಏನು?: ಡಾ. ಅಂಜಲಿ ನಿಂಬಾಳ್ಕರ್

| Published : Apr 26 2024, 12:49 AM IST

6 ಬಾರಿ ಶಾಸಕರಾಗಿದ್ದ ಕಾಗೇರಿ ಕೊಡುಗೆ ಏನು?: ಡಾ. ಅಂಜಲಿ ನಿಂಬಾಳ್ಕರ್
Share this Article
  • FB
  • TW
  • Linkdin
  • Email

ಸಾರಾಂಶ

ಆರು ಬಾರಿ ಶಾಸಕರಾಗಿದ್ದರೂ ಕ್ಷೇತ್ರದ ಜನಕ್ಕಾಗಿ ಅವರು ಏನು ಮಾಡಿದರು? ಶಿಕ್ಷಣ ಮಂತ್ರಿಯಾಗಿದ್ದಾಗ ಒಂದೇ ಒಂದು ಬಾರಿ ಜೋಯಿಡಾಕ್ಕೆ ಬಂದಿದ್ದಾರೆಯೇ ಎಂದು ಡಾ. ಅಂಜಲಿ ನಿಂಬಾಳ್ಕರ್ ಪ್ರಶ್ನಿಸಿದರು.

ಜೋಯಿಡಾ: ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಚುನಾವಣೆಯಲ್ಲ, ಕುಣಬಿ ಸಮಾಜಕ್ಕೆ ಅನ್ಯಾಯ ಮಾಡುತ್ತಿರುವ, ದಶಕಗಳಿಂದ ಅರಣ್ಯ ಹಕ್ಕು ನೀಡದ ಕೇಂದ್ರ ಸರ್ಕಾರದ ವಿರುದ್ಧದ ಚುನಾವಣೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ವಾಗ್ದಾಳಿ ನಡೆಸಿದರು.

ಕುಂಬಾರವಾಡದ ಕ್ಷೇತ್ರಪಾಲ ಸಭಾಭವನದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿ, ೩೦ ವರ್ಷ ಕ್ಷೇತ್ರವನ್ನು ಬಿಜೆಪಿಗೆ ಕೊಟ್ಟಿದ್ದೀರಿ. ಐದು ವರ್ಷಕ್ಕಾಗಿ ಒಂದು ಅವಕಾಶ ನನಗೆ ಕೊಡಿ. ‌ನಂತರ ಬದಲಾವಣೆ ನೀವೇ ನೋಡಿ. ನಿಮ್ಮ ಕಷ್ಟಗಳನ್ನು ದೆಹಲಿಯವರೆಗೆ ಕೊಂಡೊಯ್ಯಲು, ನಿಮ್ಮನ್ನು ಪ್ರತಿನಿಧಿಸಲು ಅವಕಾಶ ನೀಡುವ ಚುನಾವಣೆ ಇದು. ಬಿಜೆಪಿ ಅಭ್ಯರ್ಥಿ ಕಾಗೇರಿಯವರು ನನಗಿಂತ ಹಿರಿಯರು. ವೈಯಕ್ತಿಕವಾಗಿ ಯಾರನ್ನೂ ಟೀಕೆ ಮಾಡಬಾರದು. ಆದರೆ ಆರು ಬಾರಿ ಶಾಸಕರಾಗಿದ್ದರೂ ಕ್ಷೇತ್ರದ ಜನಕ್ಕಾಗಿ ಅವರು ಏನು ಮಾಡಿದರು? ಶಿಕ್ಷಣ ಮಂತ್ರಿಯಾಗಿದ್ದಾಗ ಒಂದೇ ಒಂದು ಬಾರಿ ಜೋಯಿಡಾಕ್ಕೆ ಬಂದಿದ್ದಾರೆಯೇ ಎಂದು ಪ್ರಶ್ನಿಸಿದರು.

ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮಾತನಾಡಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಾಷ್ಟ್ರಕ್ಕೆ ಸಂವಿಧಾನ ಎಂಬ ಗ್ರಂಥ ನೀಡಿದ್ದಾರೆ. ಆ ಮೂಲಕ ಪವಿತ್ರವಾದ ಮತದಾನ ಎಂಬ ಹಕ್ಕು ನೀಡಿದ್ದಾರೆ. ಆ ಮತ ಚಲಾಯಿಸುವ ಪೂರ್ವ ಯೋಚಿಸಿ. ಬಡವರ ಕಲ್ಯಾಣ, ಕ್ಷೇತ್ರದ ಅಭಿವೃದ್ಧಿ, ಮಹಿಳೆಯರ ಕಲ್ಯಾಣ ಮಾಡುವವರಿಗೆ ಮತ ನೀಡಿ ಎಂದರು.

ರಾಜ್ಯ ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿ ರೇಡ್ಕರ್, ಡಾ. ಅಂಜಲಿ ನಿಂಬಾಳ್ಕರ್‌ ಅವರು ಜಿಲ್ಲೆಯ ಸಮಸ್ಯೆಗಳಿಗೆ ಸಂಸತ್‌ನಲ್ಲಿ ಧ್ವನಿಯಾಗಲಿದ್ದಾರೆ ಎಂಬ ವಿಶ್ವಾಸವಿದೆ. ಬಿಜೆಪಿಯವರಿಗೆ ಪ್ರಚಾರಕ್ಕೆ ಹೋಗಲು ವಿಷಯಗಳೇ ಇಲ್ಲ. ನಮ್ಮ ಬಳಿ ಐದು ಗ್ಯಾರಂಟಿ ಯೋಜನೆ ಇದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ್ ದೇಸಾಯಿ, ಕೆಪಿಸಿಸಿ ಸದಸ್ಯ ಸದಾನಂದ ದಬ್ಗಾರ್, ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಮಂಗೇಶ್ ಕಾಮತ್, ವಿವಿಧ ಗ್ರಾಪಂ ಪ್ರತಿನಿಧಿಗಳಾದ ಚೆನ್ನಮ್ಮ ಡೊಂಬಾರ್, ದತ್ತಾ, ಮಂಜುನಾಥ ಮೊಕಾಶಿ, ಪುಷ್ಪಾ ಗೌಡ, ಅರುಣ್ ದೇಸಾಯಿ, ದಿವ್ಯಾ ಮುಂತಾದವರಿದ್ದರು.