ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ನರೇಂದ್ರ ಮೋದಿ ಕಲಬುರಗಿಗೆ, ಕಲ್ಯಾಣ ನಾಡಿಗೆ, ಕರ್ನಾಟಕಕ್ಕೆ ತಮ್ಮ ಹತ್ತು ವರ್ಷಗಳ ಅವಧಿಯಲ್ಲಿ ಏನು ಅಭಿವೃದ್ಧಿ ಕೊಟ್ಟಿದ್ದಾರೆ ಹೇಳಲಿ ಎಂದು ರಾಜ್ಯ ಸಭೆ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ನಾಮಪತ್ರ ಸಲ್ಲಿಕೆ ನಂತರ ಎನ್ ವಿ ಕಾಲೇಜು ಮೈದಾನದಲ್ಲಿ ನಡೆದ ಸಾರ್ವಜನಿಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಲಬುರಗಿಯಲ್ಲಿ ಇಎಸ್ಐ ಆಸ್ಪತ್ರೆ ಕಟ್ಟಿದ್ದೇವೆ. ಅಲ್ಲಿ ಏಮ್ಸ್ ನಿರ್ಮಾಣ ಮಾಡಲು ಮೋದಿಗೆ ಮನವಿ ಮಾಡಿದ್ದೆ. ಆದರೆ ನನ್ನ ಮೇಲೆ ಏನು ಸಿಟ್ಟು ಗೊತ್ತಿಲ್ಲ ನಮ್ಮ ಮನವಿ ಪುರಸ್ಕರಿಸಲಿಲ್ಲ. ನನ್ನ ಅವಧಿಯಲ್ಲಿ ಮಂಜೂರಾಗಿದ್ದ ರೇಲ್ವೆ ವಲಯ ಯೋಜನೆ ವಾಪಸ್ ಹೋಗಿದೆ. 2 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುವ ಯಾದಗಿರಿ ರೇಲ್ವೆ ಕೋಚ್ ಫ್ಯಾಕ್ಟರಿಗೂ ಕೊಕ್ಕೆ ಹಾಕಿದ್ದಾರೆ. ನನ್ನ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳಲ್ಲಿ ಶೇ.10 ರಷ್ಟು ಮೋದಿಯವರು ಅಭಿವೃದ್ಧಿ ಮಾಡಿದ್ದರೆ ತೋರಿಸಲಿ ಆಗ ನಾನು ಶಹಬ್ಬಾಶ್ ಎನ್ನುತ್ತೇನೆ ಎಂದು ಸವಾಲು ಹಾಕಿದರು.ತಮ್ಮ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳ ಪಟ್ಟಿ ನೀಡಿದ ಖರ್ಗೆ, ರಾಷ್ಟ್ರೀಯ ಹೆದ್ದಾರಿ, ಕೇಂದ್ರಿಯ ವಿಶ್ವವಿದ್ಯಾಲಯ ಸ್ಥಾಪಿಸಿದ್ದೇನೆ. 37 ಹೊಸ ರೈಲು ಓಡಿಸಿದ್ದೇನೆ. ಜವಳಿ ಪಾರ್ಕ್ ಮಂಜೂರು ಮಾಡಿಸಿದ್ದೇನೆ. ಹೀಗೆ ಕಲಬುರಗಿ ಅಭಿವೃದ್ಧಿ ಆಗಬೇಕೆಂದರೆ ಕಾಂಗ್ರೆಸ್ ಗೆ ಮತ ನೀಡಿ ಎಂದು ಮನವಿ ಮಾಡಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯುವಕ, ಯುವತಿಯರಿಗೆ ಉದ್ಯೋಗ ನೀಡಲಾಗುವುದು. ರೈತರ ಸಾಲ ಮನ್ನಾ ಮಾಡಲಾಗುವುದು. ಮಹಿಳೆಯರಿಗೆ ಪ್ರತಿ ವರ್ಷ ಒಂದು ಲಕ್ಷ ನೀಡಲಾಗುವುದು. ಒಟ್ಟಾರೆ ೨೫ ಗ್ಯಾರಂಟಿಗಳನ್ನು ಜಾರಿಗೆ ತರಲಾಗುವುದು ಎಂದರು.ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣಗೆ ಮತ ನೀಡಿ ಗೆಲ್ಲಿಸಿ, ಮುಂದಿನ ಐದು ವರ್ಷದಲ್ಲಿ ಏನು ಬದಲಾವಣೆ ಮಾಡುತ್ತೇನೆ ನೋಡಿ. ಈ ಭಾಗವನ್ನು ನಿಜವಾದ ಕಲ್ಯಾಣ ಕರ್ನಾಟಕವನ್ನಾಗಿ ಮಾಡಿ ತೋರಿಸುತ್ತೇನೆ ಎಂದು ವಾಗ್ದಾನ ಮಾಡಿದರು.
ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿ, ಮೋದಿ ಕಲಬುರಗಿಗೆ ಬಂದು ಹೋಗಿ ದ್ವೇಷದ ರಾಜಕಾರಣ ಮಾಡಿದ್ದಾರೆ. ನೀವು ಕಾಂಗ್ರೆಸ್ಗೆ ಮತ ಹಾಕಿ ಗೆಲ್ಲಿಸಿ ಮೋದಿಗೆ ಉತ್ತರಿಸಿರಿ. ಕಾಂಗ್ರೆಸ್ ಕಲಬುರಗಿ ಸೇರಿದಂತೆ 20 ಸ್ಥಾನದಲ್ಲಿ ಗೆಲ್ಲಲಿದೆ ಎಂದರು.ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರನ್ನು ಕನಿಷ್ಠ ೫ ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿರೆಂದು ಕೋರಿದರು.
ಎಂಎಲ್ಸಿ ತಿಪ್ಪಣ್ಣ ಕಮಕನೂರ್, ಮಾಜಿ ಎಂಲ್ಸಿ ಬಾಬೂರಾವ ಚಿಂಚನಸೂರ್, ಕಲಬುರಗಿ ಶಾಸಕ ಅಲ್ಲಂಪ್ರಭು ಪಾಟೀಲ್ ಮಾತನಾಡಿದರು.ವೇದಿಕೆಯ ಮೇಲೆ ಎಐಸಿಸಿ ಕಾರ್ಯದರ್ಶಿ ರಂದೀಪ್ ಸುರ್ಜೆವಾಲಾ, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಸಚಿವರಾದ ಶರಣಪ್ರಕಾಶ ಪಾಟೀಲ್, ಪ್ರಿಯಾಂಕ್ ಖರ್ಗೆ, ಶರಣಬಸಪ್ಪ ದರ್ಶನಾಪುರ, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ, ಸಿಎಂ ಸಲಹೆಗಾರರಾದ ಬಿ. ಆರ್. ಪಾಟೀಲ, ಕೆಕೆಆರ್ಡಿಬಿ ಅಧ್ಯಕ್ಷ ಅಜಯ್ ಸಿಂಗ್, ಶಾಸಕರಾದ ಎಂವೈ ಪಾಟೀಲ, ಕನೀಜ್ ಫಾತಿಮಾ, ಯುಬಿ ವೆಂಕಟೇಶ, ಚೆನ್ನಾರೆಡ್ಡಿ ಪಾಟೀಲ ತುನ್ನೂರು, ಬಸನಗೌಡ ತುರ್ವಿಹಾಳ, ಮಾಜಿ ಸಚಿವರಾದ ರಾಜಶೇಖರ್ ಪಾಟೀಲ ಹುಮನಾಬಾದ್, ಎಚ್ ಎಂ ರೇವಣ್ಣ, ಮಾಜಿ ಲೋಕಸಭಾ ಸದಸ್ಯರಾದ ವಿ.ಎಸ್ ಉಗ್ರಪ್ಪ, ವಿ.ವಸಂತಕುಮಾರ, ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಬಸರೆಡ್ಡಿ ಪಾಟೀಲ ಅನಪೂರ, ಭಾಗನಗೌಡ ಸಂಕನೂರು, ಶ್ರೇಣಿಕ ಕುಮಾರ , ಶಿವಾನಂದ ಪಾಟೀಲ, ಡೇವಿಡ್ ಸಿಮೆಯೋನ, ಶರಣುಮೋದಿ, ಮಹಜರ್ ಖಾನ್, ಕಿರಣ್ ದೇಶಮುಖ, ಪ್ರವೀಣ ಹರವಾಳ, ರಾಜೀವ್ ಜಾನೆ, ನಾಗರೆಡ್ಡಿ ಪಾಟೀಲ ಕರದಾಳ, ನೀಲಕಂಠ ಮೂಲಗೆ, ಡಿ.ಜಿ.ಸಾಗರ, ಇದ್ದರು.