ದೇಶಪಾಂಡೆ ಉಸ್ತುವಾರಿ ಸಚಿವರಾಗಿದ್ದಾಗ ಹಾಗೂ ಸಣ್ಣ ಕೈಗಾರಿಕಾ ಸಚಿವರಾಗಿದ್ದಾಗ ಏನು ಮಾಡಿದ್ದಾರೆ? ಜಿಲ್ಲೆಗೆ ಒಂದೇ ಒಂದು ಕೈಗಾರಿಕೆ ತಂದಿಲ್ಲ ಎಂದು ಸಿದ್ದಾಪುರ ತಾಲೂಕು ಬಿಜೆಪಿ ಅಧ್ಯಕ್ಷ ತಿಮ್ಮಪ್ಪ ಎಂ.ಕೆ. ಹೇಳಿದ್ದಾರೆ.
ಸಿದ್ದಾಪುರ: ಜಿಲ್ಲೆಯ ಅಭಿವೃದ್ಧಿಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದು, ಅವರು ಏನೂ ಕೆಲಸ ಮಾಡಿಲ್ಲ ಎಂದು ಹೇಳಿರುವ ರಾಜ್ಯ ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಅವರ ಹೇಳಿಕೆ ಖಂಡಿಸುತ್ತೇವೆ. ಆರ್.ವಿ. ದೇಶಪಾಂಡೆ ಅವರು ಜಿಲ್ಲೆಯ ಅಭಿವೃದ್ಧಿಗೆ ಏನು ಕೊಡುಗೆ ನೀಡಿದ್ದಾರೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ತಿಮ್ಮಪ್ಪ ಎಂ.ಕೆ. ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರಾಜ್ಯ ಸರ್ಕಾರದ ಸಾವಿರ ದಿನಗಳ ಸಮಾವೇಶವನ್ನು ಯಾವ ಪುರುಷಾರ್ಥಕ್ಕಾಗಿ ನಡೆಸುತಿದ್ದೀರಿ? ಈ ಸಾವಿರ ದಿನದಲ್ಲಿ ಸಾವಿರ ಸಮಸ್ಯೆ, ಹಗರಣಗಳನ್ನು ಸೃಷ್ಟಿಸಿದ ಸರ್ಕಾರ ಎಂದು ಅಂಕಿ-ಅಂಶ ಸಮೇತ ತಿಳಿಸಿದ್ದಾರೆ. ಆದರೆ ಆರ್.ವಿ. ದೇಶಪಾಂಡೆ ಅವರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಕಾಗೇರಿ ಅವರು ಶಾಸಕರಾಗಿದ್ದಾಗ, ಶಿಕ್ಷಣ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದಾಗ ಶಿರಸಿ -ಸಿದ್ದಾಪುರ ಕ್ಷೇತ್ರ ಮಾತ್ರ ಅಲ್ಲ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಶಿರಸಿ ಶೈಕ್ಷಣಿಕ ಜಿಲ್ಲೆ, ಸಿದ್ದಾಪುರ ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ದೇಶಪಾಂಡೆ ಉಸ್ತುವಾರಿ ಸಚಿವರಾಗಿದ್ದಾಗ ಹಾಗೂ ಸಣ್ಣ ಕೈಗಾರಿಕಾ ಸಚಿವರಾಗಿದ್ದಾಗ ಏನು ಮಾಡಿದ್ದಾರೆ? ಜಿಲ್ಲೆಗೆ ಒಂದೇ ಒಂದು ಕೈಗಾರಿಕೆ ತಂದಿಲ್ಲ. ಕವಂಚೂರಿನಲ್ಲಿದ್ದ ಫ್ಯಾಕ್ಟರಿ ಮುಚ್ಚಿಸಿದ್ದಾರೆ ಎಂದು ಟೀಕಿಸಿದರು.ಪ್ರಮುಖರಾದ ಮಾರುತಿ ನಾಯ್ಕ ಹೊಸೂರು, ನಂದನ ಬೋರ್ಕರ್, ಎಸ್.ಕೆ. ಮೆಸ್ತಾ, ಸುಮನಾ ಕಾಮತ್, ಗುರುರಾಜ ಶಾನಭಾಗ, ತೋಟಪ್ಪ ನಾಯ್ಕ, ವಿಜೇತ್ ಗೌಡರ್, ಸುರೇಶ ಬಾಲಿಕೊಪ್ಪ, ಶ್ರೀಧರ ನಾಯ್ಕ, ಮಂಜುನಾಥ ಭಟ್ಟ, ಚಂದ್ರಶೇಖರ, ವಿಶ್ವ ಹುಲಿಮನೆ ಇತರರಿದ್ದರು.