ಸಾರಾಂಶ
ಬೆಳಗಾವಿ: ಬೆಳಗಾವಿ ನನ್ನ ಕರ್ಮಭೂಮಿ ಎನ್ನುವ ಜಗದೀಶ ಶೆಟ್ಟರ್ ಅವರು ಮೊದಲು ತಮ್ಮ ಮನೆಯ ಅಡ್ರೆಸ್ ಹೇಳಲಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸವಾಲು ಹಾಕಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿ, ಜಗದೀಶ ಶೆಟ್ಟರ್ ಅವರು 6 ಬಾರಿ ಹುಬ್ಬಳ್ಳಿ ಸೆಂಟ್ರಲ್ ನಿಂದ ಗೆದ್ದು ಬಂದಿದ್ದಾರೆ. ಅಲ್ಲಿಂದ ಬಂದು ಈಗ ಬೆಳಗಾವಿ ಕರ್ಮ ಭೂಮಿ ಅಂದರೆ ನಂಬಲು ಬೆಳಗಾವಿಯ ಜನರು ಮುಗ್ಧರಲ್ಲ. ಬೆಳಗಾವಿ ನನ್ನ ಕರ್ಮಭೂಮಿ ಎನ್ನುವ ಶೆಟ್ಟರ್ ಮೊದಲು ಅವರ ಮನೆಯ ಅಡ್ರೆಸ್ ಹೇಳಲಿ. ಮೊದಲು ಮನೆಯ ವಿಳಾಸ ಹೇಳಿ, ನಂತರ ಕರ್ಮ ಭೂಮಿ ಯಾವುದೆಂದು ಹೇಳುವಿರಿ ಎಂದು ಶೆಟ್ಟರ್ ಗೆ ಟಾಂಗ್ ನೀಡಿದರು. ಈ ಹಿಂದೆ ಪಂಚಮಸಾಲಿ ಮೀಸಲಾತಿಗೆ ಜಗದೀಶ್ ಶೆಟ್ಟರ್ ವಿರೋಧ ಮಾಡಿದ್ದರು ಎಂದು ಇದೇ ವೇಳೆ ಅವರು ಆರೋಪಿಸಿದರು.ಬೆಳಗಾವಿ ಕರ್ಮಭೂಮಿ, ಅಲ್ಲೇ ಮನೆ ಮಾಡ್ತಿನಿ: ಜಗದೀಶ್ ಶೆಟ್ಟರ್‌ಬೆಳಗಾವಿ: ಮುಂದೆ ನಾನು ಬೆಳಗಾವಿಯಲ್ಲೇ ಮನೆ ಮಾಡ್ತಿನಿ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ. ಶೆಟ್ಟರ್ ಅಡ್ರೆಸ್ ಯಾವುದು ಎಂಬ ಲಕ್ಷ್ಮೀ ಹೆಬ್ಬಾಳಕರ ಆರೋಪಕ್ಕೆ ಪ್ರತಿಕ್ರಿಯಿಸಿ, ಹುಬ್ಬಳ್ಳಿ ನನ್ನ ಜನ್ಮ ಭೂಮಿ, ಆದರೆ, ಬೆಳಗಾವಿ ನನ್ನ ಕರ್ಮ ಭೂಮಿ. ಬೆಳಗಾವಿ ಜಿಲ್ಲೆ ನನಗೆ ಹೊಸದೆನಲ್ಲ, ಎರಡು ಸಲ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿರುವೆ. ಮುಂದೆ ಬೆಳಗಾವಿಯಲ್ಲೇ ನಾನು ಮನೆ ಮಾಡ್ತಿನಿ ಎಂದು ಹೇಳಿದರು. ಪಂಚಮಸಾಲಿ ಮೀಸಲಾತಿಗೆ ಜಗದೀಶ್ ಶೆಟ್ಟರ್‌ರಿಂದ ವಿರೋಧ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಮೀಸಲಾತಿಗೆ ಯಾವುದೇ ವಿರೋಧ ಮಾಡಿಲ್ಲ. ವಿರೋಧ ಮಾಡುವ ಪ್ರಶ್ನೆಯೇ ಉದ್ಭವಿಸಲ್ಲ. ಚುನಾವಣೆ ಸಂದರ್ಭದಲ್ಲಿ ಈ ರೀತಿಯ ಅಪಪ್ರಚಾರ ನಡೆಯುತ್ತದೆ. ಇದಕ್ಕೆ ಯಾವುದೇ ಆಧಾರ ಇಲ್ಲ ಎಂದರು.ದೇಶದ ವಿಚಾರದ ಮೇಲೆ ಚುನಾವಣೆ ನಡೆಯಲಿದೆ. ದೇಶದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಮಾಡಲು ಚುನಾವಣೆ ನಡೆಯುತ್ತಿದೆ. ಜನರೇ ಸ್ವಯಂ ಪ್ರೇರಿತರಾಗಿ ಮೋದಿ ಪ್ರಧಾನಿ ಆಗಲಿ ಎಂದು ಹಾರೈಸುತ್ತಿದ್ದಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್‌ನವರಿಗೆ ಚರ್ಚೆ ಮಾಡಲು ಯಾವುದೇ ವಿಷಯಗಳು ಇಲ್ಲ. ಕೆಳ ಹಂತಕ್ಕೆ ಹೋಗಿ ನಾನು ಟೀಕೆ ಮಾಡಲ್ಲ. ವರಿಷ್ಠರು, ಜನರ ತೀರ್ಮಾನದಂತೆ ಸ್ಪರ್ಧೆ ಮಾಡಿದ್ದೇನೆ. ಮೋದಿಯವರ ಪ್ರತಿನಿಧಿಯಾಗಿ ನಾನು ಇಲ್ಲಿ ಸ್ಪರ್ಧೆ ಮಾಡಿದ್ದೇನೆ. ಬೆಳಗಾವಿ ಅಭಿವೃದ್ಧಿಗೆ ನಾನು ಶ್ರಮಿಸುತ್ತೇನೆ. ಯತ್ನಾಳ್, ನಿರಾಣಿ ಸೇರಿ ಎಲ್ಲರೂ ಪ್ರಚಾರಕ್ಕೆ ಬರ್ತಾರೆ ಎಂದರು.ಅಡ್ರೆಸ್ ಕೇಳೋರು ಮುಂದೆ ಅವರನ್ನು ಹುಡುಕಿಕೊಂಡು ಹೋಗ್ಬೇಕಾಗುತ್ತೆ: ಬಾಲಚಂದ್ರಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಲೋಕಲ್ ಅಡ್ರೆಸ್ ಕೇಳುವವರು ಮುಂದೆ ಅವರು ಕೇಂದ್ರ ಸಚಿವರಾದ ಬಳಿಕ ಅಡ್ರೆಸ್ ಹುಡುಕಿಕೊಂಡು ಹೋಗುವ ಪ್ರಸಂಗ ಬರುತ್ತದೆ ಎಂದು ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಈ ಮೂಲಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ತಿರುಗೇಟು ನೀಡಿದ್ದಾರೆ. ಬೆಳಗಾವಿಯನ್ನು ತಮ್ಮ ಕರ್ಮಭೂಮಿ, ಇಲ್ಲೇ ಮನೆ ಮಾಡ್ತೇನೆ ಎನ್ನುವ ಶೆಟ್ಟರ್ ಅವರು ಮೊದಲು ಮನೆ ಅಡ್ರೆಸ್ ತೋರಿಸಲಿ ಎಂದು ಹೆಬ್ಬಾಳ್ಕರ್ ನೀಡಿದ ಹೇಳಿಕೆಗೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಶೆಟ್ಟರ್ ಅವರು ಬಿಜೆಪಿ ಹಿರಿಯ ನಾಯಕ. ಮಾಜಿ ಮುಖ್ಯಮಂತ್ರಿ. ಅವರ ಬಗ್ಗೆ ಯಾರೂ ಹಗುರವಾಗಿ ಮಾತನಾಡಬಾರದು ಎಂದರು.