ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ವಾಹಗಳು ಹೊರ ಬರಲು ಸಾಧ್ಯವಾಗದಷ್ಟರ ಮಟ್ಟಿಗೆ ಖಾಸಗಿ ಬಸ್ಸುಗಳು ಅಡ್ಡಿ ನಿಂತಿರುವುದು.
ಜಡೇಕುಂಟೆ ಮಂಜುನಾಥ್
ಕನ್ನಡಪ್ರಭ ವಾರ್ತೆ ಚಳ್ಳಕೆರೆಚಳ್ಳಕೆರೆ ನಗರದ ಹೃದಯ ಭಾಗದಲ್ಲಿರುವ ತಾಲೂಕು ಆಸ್ಪತ್ರೆಗೆ ತುರ್ತು ಚಿಕಿತ್ಸಾ ವಾಹನಗಳು ಹೋಗಲು ಮತ್ತು ಬರಲು ದಾರಿ ಯಾವುದಯ್ಯ ಎಂದು ಹುಡುಕಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿರುವ ಎರಡು ಮುಖ್ಯ ದ್ವಾರಗಳಲ್ಲಿ ಒಂದು ಗೇಟಿಗೆ ಕಬ್ಬಿಣದ ರಾಡಿನಿಂದ ಅಡ್ಡಹಾಕಿ ವಾಹನಗಳಿಗೆ ನಿರ್ಬಂಧ ಏರಲಾಗಿದೆ. ಇನ್ನೊಂದು ದ್ವಾರದಲ್ಲಿ ಹೋಗಿ ಬರಲು ದುಸ್ಸಾಹಸವೇ ಪಡಬೇಕಾಗಿದೆ. ಇಂತಹ ಇಕ್ಕಟ್ಟಿನ ದ್ವಾರದಲ್ಲೇ ತುರ್ತು ವಾಹನ ಅಂಬ್ಯುಲೆನ್ಸ್ ಗಳು ಒಳಗೆ ಹೋಗಲು ಹರ ಸಾಹಸ ಪಡುವಂತಹ ಪರಿಸ್ಥಿತಿ ಎದುರಾಗಿದೆ.ಸುಮಾರು 130 ಹಾಸಿಗೆಯುಳ್ಳ ತಾಯಿ ಮಕ್ಕಳ ಆಸ್ಪತ್ರೆಗೆ ದಿನನಿತ್ಯ ಏನಿಲ್ಲವೆಂದರೂ ಆಂಬ್ಯುಲೆನ್ಸ್ ನಲ್ಲಿ ತುರ್ತು ಚಿಕಿತ್ಸೆಗೆಂದು ಹತ್ತಾರು ರೋಗಿಗಳು ಬಂದು ಹೋಗುತ್ತಾರೆ. ಆಂಧ್ರದ ಗಡಿಯಂಚಿನ ಗ್ರಾಮಗಳಿಂದಲೂ ರೋಗಿಗಳು ಚಳ್ಳಕೆರೆ ಆಸ್ಪತ್ರೆಗೆ ಬರುವುದು ಮಾಮೂಲಿಯಾಗಿದೆ. ಇಂತಹ ತಾಯಿಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆ ಸೇರಿದಂತೆ ಮಕ್ಕಳ ಅನಾರೋಗ್ಯದಿಂದ ದಾಖಲಾಗುವವರ ಸಂಖ್ಯೆ ದಿನಾಲು ಇದ್ದೇ ಇರುತ್ತದೆ. ಸರ್ಕಾರಿ ಆರ್ಯವೇದ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ ಸೇರಿದರೆ ಇಲ್ಲಿ ದಿನನಿತ್ಯ ನೂರಾರು ರೋಗಿಗಳು ಬಂದು ಹೋಗುತ್ತಾರೆ. ಇಂತಹ ಆಸ್ಪತ್ರೆಯ ಒಳಗೆ ಹೋಗಲು ಖಾಸಗಿ ಬಸ್‌ಗಳದ್ದೇ ದೊಡ್ಡ ಅಡಚಣೆಯಾಗಿದೆ.
ಖಾಸಗಿ ಬಸ್‌ಗಳು ಚಿತ್ರದುರ್ಗದ ಕಡೆಗೆ ಹೋಗುವಾಗ ಆಸ್ಪತ್ರೆಯ 2ನೇ ದ್ವಾರಕ್ಕೆ ಅಡ್ಡಲಾಗಿ ನಿಲ್ಲಿಸುವುದರಿಂದ ತುರ್ತಾಗಿ ಒಳ ಹೋಗುವ ವಾಹನಗಳಿಗೆ ತೊಂದರೆಯಾಗುತ್ತಿದೆ ಎಂದು ಇಲ್ಲಿನ ರೋಗಿಗಳು ತಮ್ಮ ಗೋಳು ತೋಡಿಕೊಳ್ಳುತ್ತಾರೆ. ಇನ್ನೊಂದು ದ್ವಾರಕ್ಕೆ ಅಡ್ಡಲಾಗಿ ಕಬ್ಬಿಣದ ರಾಡ್ ಹಾಕಲಾಗಿದೆ. ಇದಲ್ಲದೇ ಆಸ್ಪತ್ರೆಯ ಒಳಭಾಗದಲ್ಲಿ ಖಾಸಗಿ ದ್ವಿಚಕ್ರ ವಾಹನಗಳ ನಿಲುಗಡೆಯಿಂದಾಗಿ ರೋಗಿಗಳಿಗೂ ಮತ್ತು ಆಸ್ಪತ್ರೆಗೆ ಬಂದು ಹೋಗುವವರಿಗೂ ತೊಂದರೆಯಾಗುವುದನ್ನು ತಪ್ಪಿಸಲು ಈ ದ್ವಾರದಿಂದ ವಾಹನಗಳ ಓಡಾಟ ನಿರ್ಬಂಧಿಸಲಾಗಿದೆ.ತಾಲೂಕು ಕೇಂದ್ರದಲ್ಲಿ ನೆಲೆಸಿರುವ ನೌಕರರು ಗ್ರಾಮೀಣ ಭಾಗಗಳಿಗೆ ನೌಕರಿಗೆ ತೆರಳುವಾಗ ತಮ್ಮ ದ್ವಿಚಕ್ರ ವಾಹನಗಳನ್ನು ಇಲ್ಲಿಯೇ ನಿಲ್ಲಿಸಿ ಹೋಗುತ್ತಿದ್ದುದು ಸಮಸ್ಯೆ ಆಗಿದ್ದರಿಂದ ಮೊದಲನೆಯ ದ್ವಾರವನ್ನು ವಾಹನಗಳಿಂದ ಮುಕ್ತಿ ಸಿಗುವಂತೆ ಮಾಡಲಾಯಿತು ಎನ್ನುತ್ತಾರೆ ಇಲ್ಲಿನ ಕೆಲ ಸಿಬ್ಬಂದಿ.
ಎರಡನೆಯ ದ್ವಾರ ಎಸ್.ಆರ್ ಕಾಂಪ್ಲೆಕ್ಸ್ ಗೆ ಹೊಂದಿಕೊಂಡಿರುವುದರಿಂದ ಇಲ್ಲಿಯೇ ಖಾಸಗಿ ಬಸ್‌ಗಳ ಹಾವಳಿಯಿಂದಾಗಿ ಸಂಚಾರಿ ವ್ಯವಸ್ಥೆ ದಿಕ್ಕಾಪಾಲಾಗುವಂತೆ ಮಾಡಿದೆ. ಈ ಬಸ್‌ಗಳು ಆಸ್ಪತ್ರೆಯ ದ್ವಾರ ಕಾಣದಂತೆ ಅಡ್ಡಲಾಗಿ ನಿಲ್ಲಿಸಿರುವ ಸಂದರ್ಭದಲ್ಲಿ ತುರ್ತಾಗಿ ಚಿಕಿತ್ಸೆಗೆ ಹೋಗುವ ವಾಹನಗಳು ಪರದಾಡುವಂತಾಗಿದೆ. ಈಚೆಗೆ ಬೀದರ್ ಶ್ರೀರಂಗಪಟ್ಟಣ ಹೆದ್ದಾರಿ ಹಾದು ಹೋಗುವ ಹೆಗ್ಗೆರೆ ಸಮೀಪ ಕಾರು ಲಾರಿಗೆ ಡಿಕ್ಕಿಹೊಡೆದು ಸ್ಥಳದಲ್ಲೇ ಮೂವರು ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ ದಿನ ಅಂಬ್ಯುಲೆನ್ಸ್‌ಗಳು ಒಳಹೋಗಲೂ ಸಹ ಆಗದಷ್ಟು ಸಂಚಾರ ದಟ್ಟಣೆ, ಖಾಸಗಿ ಬಸ್‌ಗಳ ನಿಲುಗಡೆ ತುಂಬಾ ಕಿರಿಕಿರಿನ್ನುಂಟು ಮಾಡಿತ್ತು ಎನ್ನುತ್ತಾರೆ ಪ್ರತ್ಯಕ್ಷ್ಯ ದರ್ಶಿಗಳು. ಹೇಗೋ ಮಾಡಿ ದಾರಿ ಮಾಡಿಕೊಂಡು ಒಳ ಹೋದರೆ ಇಲ್ಲಿಯೂ ಕೂಡ ಪಾರ್ಕಿಂಗ್‌ನಿಂದ ವಾಹನಗಳ ದಟ್ಟಣೆ. ಇನ್ನು ಆಸ್ಪತ್ರೆಯ ಒಳ ಭಾಗದಲ್ಲೂ ಎಲ್ಲೆಂದರಲ್ಲಿ ದ್ವಿಚಕ್ರ ವಾಹನ ಹಾಗೂ ಲಘು ವಾಹನಗಳನ್ನೂ ನಿಲ್ಲಿಸಿರುತ್ತಾರೆ. ಶವಾಗಾರಕ್ಕೆ ಹೋಗಿಬರುವ ವಾಹನಗಳಿಗೆ ಇಕ್ಕಟ್ಟಿನ ದಾರಿ ಕಿರಿಕಿರಿಯುಂಟು ಮಾಡದೇ ಇರಲಾರದು. ಇನ್ನು ಇಲ್ಲಿನ ನೈರ್ಮಲ್ಯ ಸುಧಾರಣೆಯನ್ನು ಕಂಡಿಲ್ಲ.ಆಸ್ಪತ್ರೆಯ ಬಲಭಾಗದಲ್ಲಿರುವ ಕಣಿವೆ ಮಾರಮ್ಮನ ದೇವಸ್ಥಾನಕ್ಕೆ ಬರುವ ಭಕ್ತರದು ಮತ್ತೊಂದು ರೀತಿಯ ಸಮಸ್ಯೆ. ಮಂಗಳವಾರ, ಶುಕ್ರವಾರ ಬಂತೆಂದರೆ ಸಾಕು ಇಲ್ಲಿ ಜನಜಂಗುಳಿಯೇ ನೆರೆದಿರುತ್ತದೆ. ಇವೆಲ್ಲಾ ಸಮಸ್ಯೆಗಳು ಹೊರಗಿನವೇ ಆದರೂ ಒಳ ಹೊಕ್ಕರೆ ರೋಗಿಗಳಿಗೆ ರೋಗವೇ ಸುಧಾರಿಸಿದಷ್ಟು ಅನುಭವವಾಗದೇ ಇರದು. ಆದಷ್ಟು ಬೇಗ ಇಲ್ಲಿನ ಎರಡೂ ದ್ವಾರಗಳು ವಾಹನಗಳ ಮುಕ್ತ ಓಡಾಟಕ್ಕೆ ವ್ಯವಸ್ಥೆ ಮಾಡಬೇಕು. ಖಾಸಗಿ ಬಸ್ ಗಳ ನಿಲುಗಡೆ ಆಸ್ಪತ್ರೆಗೆ ಹೋಗುವ ದಾರಿಯಿಂದ ಮುಕ್ತಗೊಳಿಸಬೇಕು. ಖಾಸಗಿ ದ್ವಿಚಕ್ರ ವಾಹನಗಳನ್ನು ಆಸ್ಪತ್ರೆ ವರಾಂಡದಲ್ಲಿ ನಿಲ್ಲಿಸಿ ಹೋಗುವುದನ್ನು ತಡೆಯಬೇಕು. ಇದೆಲ್ಲಾವೂ ಇಲ್ಲಿ ಕಾರ್ಯಗತವಾಗಬೇಕಾದರೆ ಪೋಲೀಸರ ನಿಯೋಜನೆ ಖಾಯಂ ಆಗಿ ಇರಬೇಕು. ಆಸ್ಪತ್ರೆ ಆವರಣದಲ್ಲಿ ಪೋಲೀಸ್ ಚೌಕಿ ಆರಂಭಿಸಿ ಅಲ್ಲಿಬ್ಬರು ಪೋಲಿಸರನ್ನು ಹಾಕಿದರೆ ಇಲ್ಲಿನ ಸಮಸ್ಯೆಗಳು ತಹಬದಿಗೆ ಬರಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.ದಿನದಿಂದ ದಿನಕ್ಕೆ ರೋಗಿಗಳು ಬಂದು ಹೋಗುವುದರಿಂದ ಇಲ್ಲಿನ ಆಸ್ಪತ್ರೆ ಸದಾ ಗಿಜಿಗಿಜಿ ಎನ್ನುವಂತೆ ಕಂಡುಬರುತ್ತದೆ. ಗ್ರಾಮೀಣ ಭಾಗದಿಂದ ಇಲ್ಲಿಗೆ ಬರುವವರ ಸಂಖ್ಯೆ ದೊಡ್ಡದಿದೆ. ತಾಯಿ ಮಕ್ಕಳ ಆಸ್ಪತ್ರೆ ಸುಸಜ್ಜಿತವಾಗಿದೆ. ಸಾರ್ವಜನಿಕ ಆಸ್ಪತ್ರೆಗೂ ಬಂದು ಹೋಗುವವರ ಸಂಖ್ಯೆ ಹೆಚ್ಚಿದೆ. ಆದ್ದರಿಂದ ಒಳ ಹೋಗಿ ಬರಲು ಗೇಟ್‌ನಲ್ಲಿ ಸಮಸ್ಯೆ ಆಗುತ್ತಿರುವುದು ನಿಜ. ಎರಡೂ ಗೇಟ್ ಗಳನ್ನು ಮುಕ್ತವಾಗಿಸಿದರೆ ವಾಹನಗಳ ದಟ್ಟಣೆ ಕಡಿಮೆ ಆಗಬಹುದು. ಒಂದು ದ್ವಾರದಿಂದ ಒಳಗೆ ಹೋಗಲು, ಮತ್ತೊಂದು ದ್ವಾರದಿಂದ ಹೊರಗೆ ಬರುವ ವ್ಯವಸ್ಥೆ ಮಾಡಬೇಕಿದೆ.
-ಶಿವುಸ್ವಾಮಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಚಳ್ಳಕೆರೆ