ಜ್ಞಾನದೇಗುಲ ವಾಕ್ಯ ಬದಲಾವಣೆ ಮಾಡಿರುವುದರಲ್ಲಿ ತಪ್ಪು ಅರ್ಥ ಏನಿದೆ: ಲಾಡ್‌

| Published : Feb 20 2024, 01:45 AM IST

ಜ್ಞಾನದೇಗುಲ ವಾಕ್ಯ ಬದಲಾವಣೆ ಮಾಡಿರುವುದರಲ್ಲಿ ತಪ್ಪು ಅರ್ಥ ಏನಿದೆ: ಲಾಡ್‌
Share this Article
  • FB
  • TW
  • Linkdin
  • Email

ಸಾರಾಂಶ

ಕುವೆಂಪು ಅವರಿಗೆ ಮಾತ್ರವಲ್ಲ ಯಾರಿಗೂ ಕೂಡ ಅವಮಾನ ಮಾಡುವ ಕೆಲಸವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಿಲ್ಲ ಮಾಡುವುದೂ ಇಲ್ಲ

ಹುಬ್ಬಳ್ಳಿ: ಜ್ಞಾನದೇಗುಲ ವಾಕ್ಯ ಬದಲಾವಣೆ ಮಾಡಿರುವುದರಲ್ಲಿ ತಪ್ಪು ಅರ್ಥ ಏನಿದೆ ಎಂದು ಪ್ರಶ್ನಿಸಿರುವ ಕಾರ್ಮಿಕ ಸಚಿವ ಸಂತೋಷ ಲಾಡ್, ಬಿಜೆಪಿಯವರು ಕೇವಲ‌ ಇಂತಹ ವಿಚಾರಗಳ ಬಗ್ಗೆ ಮಾತನಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು‌ ಕಿಡಿಕಾರಿದರು.‌

ಈ ಮೂಲಕ ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ತಿರುಗೇಟು ನೀಡಿದರು.

ಸೋಮವಾರ ರಾತ್ರಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಅಭಿವೃದ್ಧಿ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದರು.

ಕುವೆಂಪು ಅವರಿಗೆ ಮಾತ್ರವಲ್ಲ ಯಾರಿಗೂ ಕೂಡ ಅವಮಾನ ಮಾಡುವ ಕೆಲಸವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಿಲ್ಲ ಮಾಡುವುದೂ ಇಲ್ಲ ಎಂದರು.

ಬಿಜೆಪಿಯವರು ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರ ಮುಂದೆ ಚರ್ಚೆಗೆ ಬರಲಿ.ಅದನ್ನು ಬಿಟ್ಟು ಕುವೆಂಪು ಅವರಿಗೆ ಅವಮಾನ ಮಾಡಲಾಗಿದೆ. ವಾಕ್ಯ ಬದಲಾವಣೆಯಿಂದ ಅವಮಾನವಾಗಿದೆ ಎನ್ನುವ ಆರೋಪ ಮಾಡುವುದನ್ನು ಕೈಬಿಡಲಿ ಎಂದರು.

ರಾಹುಲ್ ಗಾಂಧಿಯಂತೆ ಲಾಡ್ ಮಾತನಾಡುತ್ತಾರೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು,ನಿಜಕ್ಕೂ ದೊಡ್ಡ ಮಾತು. ಇದರಿಂದ ನಾನು ಮೇಲಕ್ಕೆ ಹೋದಂತಾಗುತ್ತದೆ. ಆದರೆ ಬಿಜೆಪಿಯವರು ರಾಹುಲ್ ಗಾಂಧಿಯವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಪ್ರಶ್ನಿಸಿದರು.

ರಾಹುಲ್ ಗಾಂಧಿ ಅವರ ಸಂಸತ್ತಿನ ಸದಸ್ಯತ್ವವನ್ನು ರದ್ದು ಮಾಡಿದ್ದು,ಯಾಕೆ..? ಅವರ ಪ್ರಭುತ್ವದಿಂದ ಬಿಜೆಪಿ ಮರ್ಯಾದೆ ಹೋಗುತ್ತದೆ ಎಂಬ ಕಾರಣಕ್ಕೆ ಹೀಗೆ ಮಾಡಿದ್ದಾರೆ. ರಾಹುಲ್‌ ಗಾಂಧಿ ಸಮರ್ಥ ನಾಯಕ ಎಂದರು.

ಮೋದಿ ಅವರು ಹತ್ತು ವರ್ಷದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ.? ಡಾಲರ್ ಮುಂದೆ ರೂಪಾಯಿ ಮೌಲ್ಯ ಎಲ್ಲಿ ಹೋಗಿದೆ..? ಬಿಜೆಪಿ ಸರ್ಕಾರ ಏನು ಮಾಡಿದೆ ಎನ್ನುವ ವಿಷಯದ ಬಗ್ಗೆ ಚರ್ಚೆ ಮಾಡಲಿ ಎಂದರು.