ಸಾರಾಂಶ
ಪಾದಯಾತ್ರೆ ಶುರುವಾದ ನಂತರ ಹಳಿಯಾಳ ಸಮೀಪ ರಾತ್ರಿ ಎರಡು ಗಂಟೆ ವಿಶ್ರಾಂತಿ ಪಡೆದಿದ್ದು ಬಿಟ್ಟರೆ ಬೇರೆ ಎಲ್ಲಿಯೂ ನಿಂತಿಲ್ಲ.
ದಾಂಡೇಲಿ: ಮಳೆ ಚೆನ್ನಾಗಿ ಆಗಲಿ, ಬೆಳೆ ಚೆನ್ನಾಗಿ ಬರಲಿ, ದೇಶ ಸುಭಿಕ್ಷವಾಗಲಿ ಎಂದು ಹರಕೆ ಹೊತ್ತ ಶ್ರೀ ಚೆನ್ನಬಸವೇಶ್ವರರ ಭಕ್ತರೊಬ್ಬರು 120 ಕಿಮೀ ದೂರ ಚಕ್ಕಡಿ ಗಾಡಿಯನ್ನು ತಾವೇ ಸ್ವತಃ ಎಳೆದುಕೊಂಡು ಶ್ರೀಕ್ಷೇತ್ರ ಉಳವಿಗೆ ಬಂದಿದ್ದಾರೆ.
ಧಾರವಾಡ ಜಿಲ್ಲೆಯ ಚಿಕ್ಕಮಲ್ಲಿಗವಾಡದ ಗ್ರಾಮದ ಶಂಕಪ್ಪ ಧಾರವಾಡದ ಎನ್ನುವವರು ಚಕ್ಕಡಿಯೊಂದಿಗೆ ಪಾದಯಾತ್ರೆ ಕೈಗೊಂಡವರು. ಅವರು ಭಾನುವಾರ ನಗರದ ದಾಂಡೇಲಿ-ಹಳಿಯಾಳ ರಸ್ತೆಯಲ್ಲಿ ಚಕ್ಕಡಿ ಎಳೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.ಶಂಕಪ್ಪ ಧಾರವಾಡ ಅವರ ಸಹಾಯಕರಾಗಿ ಬಸವರಾಜ ಕೊಣ್ಣನ್ನವರ, ನಾಗರಾಜ ಕಮತಿ ಎಂಬವರು ಇದ್ದಾರೆ. ಫೆ. ೨೪ರಂದು ನಡೆಯುವ ಶ್ರೀ ಕ್ಷೇತ್ರ ಉಳವಿಯ ಶ್ರೀ ಚನ್ನಬಸವೇಶ್ವರರ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತೇವೆ. ಫೆ. 17ರಂದು ಧಾರವಾಡದ ಚಿಕ್ಕಮಲ್ಲಿಗವಾಡದ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಿದ್ದೇವೆ. ಚಕ್ಕಡಿಯೊಂದಿಗೆ ಒಂದೇ ದಿನದಲ್ಲಿ ೯೦ ಕಿಲೋಮೀಟರ್ ಕ್ರಮಿಸಿ ಫೆ. 18ರಂದು ದಾಂಡೇಲಿ ತಲುಪಿದ್ದೇವೆ. ಇನ್ನುಳಿದ ಸುಮಾರು 3೦ ಕಿಲೋಮೀಟರ್ ಮಾರ್ಗ ಕ್ರಮಿಸಿ ಸೋಮವಾರ ಉಳವಿ ತಲುಪಿದೆವು ಎಂದು ನಾಗರಾಜ ಕಮತಿ ಹೇಳಿದರು.
ಪಾದಯಾತ್ರೆ ಶುರುವಾದ ನಂತರ ಹಳಿಯಾಳ ಸಮೀಪ ರಾತ್ರಿ ಎರಡು ಗಂಟೆ ವಿಶ್ರಾಂತಿ ಪಡೆದಿದ್ದು ಬಿಟ್ಟರೆ ಬೇರೆ ಎಲ್ಲಿಯೂ ನಿಂತಿಲ್ಲ. ದೇವರ ಹರಿಕೆ ತೀರಿಸಿ ದೇವರ ಕೃಪೆಗೆ ಪಾತ್ರರಾಗುತ್ತೇವೆ. ನಾವು ರೈತಾಪಿ ಜನರು, ನಮ್ಮ ಮನೆಯ ದೇವರಾದ ಎತ್ತು, ಆಡು, ಎಮ್ಮೆ ಇತರ ಜಾನುವಾರು ಸುಖವಾಗಿರಲಿ ಹಾಗೂ ಮಳೆ ಚೆನ್ನಾಗಿ ಆಗಲಿ, ಚೆನ್ನಾಗಿ ಬೆಳೆ ಬರಲಿ, ದೇಶ ಸುಭಿಕ್ಷವಾಗಿರಲಿ ಎನ್ನುವ ಕಾರಣಕ್ಕೆ ಈ ಹರಕೆ ಹೊತ್ತಿದ್ದೇವೆ. ಮನಃಪೂರ್ವಕವಾಗಿ ಶ್ರದ್ಧಾ-ಭಕ್ತಿಯಿಂದ ಪಾದಯಾತ್ರೆ ಮಾಡಿದ್ದೇವೆ ಎನ್ನುತ್ತಾರೆ.