ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಮುಸ್ಲಿಮರು ಈ ನಾಡಿನವರು. ಅವರಿಗೂ ನಮ್ಮಷ್ಟೇ ಹಕ್ಕಿದೆ. ನಾಡಿನ ಸಂಪತ್ತನ್ನು ಮುಸ್ಲಿಮರಿಗೆ ಕೊಡುವುದರಲ್ಲಿ ತಪ್ಪೇನು? ಎಂದು ಸಚಿವ ಆರ್.ಬಿ. ತಿಮ್ಮಾಪುರ ಪ್ರಶ್ನಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿರುವ ಮುಸ್ಲಿಮರು ನಮ್ಮವರಲ್ಲವಾ?. ಅವರನ್ನ ಪಾಕಿಸ್ತಾನಕ್ಕೆ ಕಳುಹಿಸಬೇಕಾ? ಬೆಳಗ್ಗೆ ಎದ್ದರೆ ಹಿಂದು- ಮುಸ್ಲಿಂ ಗಲಾಟೆ, ಗದ್ದಲ ಮಾಡಿಸುವುದು ಈ ದೇಶದ ಸಂಸ್ಕೃತಿಯಲ್ಲ. ಅವರಿಗೂ ಈ ನಾಡಿನ ಮೇಲೆ ಹಕ್ಕಿದೆ. ಎಲ್ಲ ಸಮಾಜಕ್ಕೆ ನೀಡುವಂತೆ ಮುಸ್ಲಿಮರಿಗೂ ಹಕ್ಕು ನೀಡುತ್ತೇವೆ. ಇದರಲ್ಲಿ ತಪ್ಪೇನು? ಎಂದರು.
ಮುಸ್ಲಿಂ ಸಮುದಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಓಲೈಕೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ತಿಮ್ಮಾಪುರ, ಮತ್ತೆ ಬಿಜೆಪಿಯವರು ಏನು ಮಾಡುತ್ತಿದ್ದಾರೆ? ಅವರು ಹಿಂದುಗಳನ್ನು ಓಲೈಕೆ ಮಾಡುತ್ತಿಲ್ಲವಾ? ಎಲ್ಲೆಂದರಲ್ಲಿ ಮುಸ್ಲಿಮರ ಮೇಲೆ ಗಲಾಟೆ ಮಾಡಿಸುತ್ತಿದ್ದಾರೆ. ನಾವೇನು ಹಿಂದೂಗಳಲ್ಲವಾ? ಮುಖ್ಯಮಂತ್ರಿಗಳು ಹಿಂದೂಗಳಲ್ಲವಾ? ಬಿಜೆಪಿಯವರು ಹಿಂದೂ ಇವರ ಮನೆಯ ಆಸ್ತಿಯಂತೆ ಮಾತನಾಡುತ್ತಿದ್ದಾರೆ. ಅಸಹಾಯಕರಿಗೆ ಸಹಾಯ ಮಾಡುತ್ತಿರುವಾಗ ಈ ರೀತಿಯ ಹಿಂದುತ್ವ ಪದ ತರುವುದು ಸರಿಯಲ್ಲ. ಇದು ಈ ದೇಶದ ಸಂಸ್ಕೃತಿಯಲ್ಲ. ಎಲ್ಲರನ್ನೂ ಸಮಾನವಾಗಿ ದೇಶದ ಅಭಿವೃದ್ಧಿಯ ಕಡೆ ಒಯ್ಯುವ ಭಾವನೆ ಒಬ್ಬ ರಾಜಕಾರಣಿಗೆ ಬರಬೇಕು ಎಂದು ಪ್ರತಿಪಾದಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಮರಿಗೆ ಈ ದೇಶದ ಸಂಪತ್ತು ಹಂಚುತ್ತೇವೆ ಎಂದು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ. ಎಲ್ಲರಂತೆ ಮುಸ್ಲಿಮರಿಗೂ ಈ ನೆಲದ ಮೇಲೆ ಹಕ್ಕಿದೆ. ಅವರಿಗಿರುವ ಹಕ್ಕು ಕೊಡುವುದರಲ್ಲಿ ತಪ್ಪೇನಿದೆ? ಎಂದರು.
ಚರ್ಚಿಸುವಂತೆ ಮನವಿ:ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ನಾನು ವಿರೋಧ ಪಕ್ಷದ ನಾಯಕರಿಗೆ ಮನವಿ ಮಾಡುವೆ. ಬೇರೆ ಬೇರೆ ವಿಷಯಗಳ ಬಗ್ಗೆ ಚರ್ಚೆ ಮಾಡದೇ ಈ ಭಾಗದ ವಿಷಯಗಳ ಚರ್ಚೆಗೆ ಅವಕಾಶ ನೀಡಿದರೆ, ಅದಕ್ಕೆ ಸಮರ್ಪಕ ಉತ್ತರ ನೀಡಲು ಸರ್ಕಾರ ಸಿದ್ಧವಿದೆ. ಅಭಿವೃದ್ಧಿ ಕೆಲಸ ಮಾಡಲು ಸಿದ್ಧರಿದ್ದೇವೆ. ಆ ಬಗ್ಗೆ ಚರ್ಚಿಸಿ ಎಂದು ಮನವಿ ಮಾಡಿದರು.
ಕುಡಿಯುವ ನೀರಿನ ಸಮಸ್ಯೆ, ಬರಗಾಲ, ಕೃಷ್ಣಾ ಬಲ್ದಂಡೆ ಯೋಜನೆ ಸಮಸ್ಯೆ ಇಂತಹ ಎಲ್ಲ ಸಮಸ್ಯೆ ಪರಿಹರಿಸುವ ಕುರಿತು ಚರ್ಚೆ ನಡೆಸಿದರೆ ಅದಕ್ಕೆ ಉತ್ತರ ಕೊಡಲು ನಾವು ಸಿದ್ಧರಾಗಿದ್ದೇವೆ. ಆದರೆ, ಅವರು ಇದನ್ನೆಲ್ಲ ಬಿಟ್ಟು ಬೇರೆ ಬೇರೆ ವಿಷಯಗಳ ಕುರಿತು ಮಾತನಾಡುತ್ತಾರೆ. ಗಲಾಟೆಯಲ್ಲಿಯೇ ಅಧಿವೇಶನ ಮುಗಿಸುವಂತೆ ಕಾಣುತ್ತಿದೆ. ಈ ಭಾಗದ ಸಮಸ್ಯೆಗಳ ಚರ್ಚೆಯಾಗಿ ಸಮಸ್ಯೆ ಪರಿಹಾರ ಸಿಗಬೇಕು ಎಂಬುದು ನನ್ನ ಆಸೆ. ಆದರೆ, ಇಲ್ಲಿನ ಸಮಸ್ಯೆ ಪರಿಹರಿಸುವ ಕುರಿತು ಚರ್ಚೆ ನಡೆಸುವ ಆಸಕ್ತಿ ವಿಪಕ್ಷ ನಾಯಕರಿಗಿಲ್ಲ ಎಂದರು.