ಕಾಂಗ್ರೆಸ್‌ದಿಂದ ಜನರಿಗೆ ಸಿಕ್ಕಿದ್ದು ಬರೀ ಮೋಸ: ಹರಿಪ್ರಕಾಶ

| Published : Jul 11 2024, 01:34 AM IST

ಕಾಂಗ್ರೆಸ್‌ದಿಂದ ಜನರಿಗೆ ಸಿಕ್ಕಿದ್ದು ಬರೀ ಮೋಸ: ಹರಿಪ್ರಕಾಶ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಜನರಿಗೆ ೩೬೦ ವಿವಿಧ ಯೋಜನೆಗಳನ್ನು ಕೊಟ್ಟರು. ಆದರೆ, ದೇಶದಲ್ಲಿ ೭೦ ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್‌ನಿಂದ ದೇಶದ ಜನರಿಗೆ ಸಿಕ್ಕಿದ್ದು ಕೇವಲ ಮೋಸ ಎಂದು ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಆರೋಪಿಸಿದರು.

ಯಲ್ಲಾಪುರ: ಕಾಂಗ್ರೇಸ್ಸೇತರ ಸರ್ಕಾರವಿದ್ದಾಗ ಮಾತ್ರ ದೇಶದಲ್ಲಿ ಅಭಿವೃದ್ಧಿಯ ಕ್ರಾಂತಿ ಆಗಿದೆ. ಇದನ್ನು ದೇಶದ ಕಟ್ಟಕಡೆಯ ವ್ಯಕ್ತಿಗಳಿಗೂ ಮನವರಿಕೆ ಮಾಡಿಕೊಡಬೇಕಾಗಿದ್ದು, ಕಾಂಗ್ರೆಸ್‌ನ ಮೋಸದ ತಂತ್ರಕ್ಕೆ ಜನ ಬಲಿಯಾಗಿ ಪಶ್ಚಾತ್ತಾಪ ಪಡುವಂತಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ತಿಳಿಸಿದರು.

ಪಟ್ಟಣದ ಹುಲ್ಲೋರಮನೆ ದೇವಸ್ಥಾನದಲ್ಲಿ ಜು. ೯ರಂದು ಚಂದಗುಳಿ ಮತ್ತು ನಂದೊಳ್ಳಿ ಬಿಜೆಪಿ ಶಕ್ತಿ ಕೇಂದ್ರಗಳು ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕರ್ತರ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಜನರಿಗೆ ೩೬೦ ವಿವಿಧ ಯೋಜನೆಗಳನ್ನು ಕೊಟ್ಟರು. ಆದರೆ, ದೇಶದಲ್ಲಿ ೭೦ ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್‌ನಿಂದ ದೇಶದ ಜನರಿಗೆ ಸಿಕ್ಕಿದ್ದು ಕೇವಲ ಮೋಸ. ಜನರನ್ನು ವಂಚಿಸಿ ಅಧಿಕಾರ ಲಾಭ ಪಡೆದಿದ್ದರು. ಇದರ ಪರಿಣಾಮ ದೇಶದ ಸ್ಥಿತಿ ಹೇಗಾಗಿತ್ತು ಎಂಬುದನ್ನು ನೋಡಿದ್ದೇವೆ. ಆದರೆ, ಬಿಜೆಪಿಯ ರಾಜಕೀಯವಲ್ಲದೇ, ಸಾಂಸ್ಕೃತಿಕ ಅಜೆಂಡಾವನ್ನೂ ನೀಡಿ ಅಧಿಕಾರಕ್ಕೆ ಬಂದಿದೆ. ಅಯೋಧ್ಯೆ ರಾಮಮಂದಿರ ನಿರ್ಮಾಣದ ಮೂಲಕ ದೇಶದ ಹಿಂದೂಗಳನ್ನು ಒಗ್ಗೂಡಿಸಿದೆ ಎಂದ ಅವರು, ರಾಹುಲ್ ಗಾಂಧಿ, ಸ್ಟಾಲಿನ್‌ನಂತಹ ವ್ಯಕ್ತಿಗಳ ಕುರಿತಾಗಿ ಅಪ್ಪಿತಪ್ಪಿ ನಾವು ಮೈಮರೆತು ಅಧಿಕಾರ ಕೊಟ್ಟರೆ ನಮ್ಮ ಭಾರತದ ಪರಂಪರೆಯನ್ನೇ ಸರ್ವನಾಶ ಮಾಡುತ್ತಾರೆಂಬುದನ್ನು ಗಮನಿಸಬೇಕು ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲು ಮಾಡುತ್ತಾರೆ ಮತ್ತು ಬಿಜೆಪಿ ಹಿಂದುಳಿದವರ, ದಲಿತರ ವಿರೋಧಿ ಎಂಬ ಅಪಪ್ರಚಾರದ ಹಿನ್ನೆಲೆಯಲ್ಲಿ ಬಿಜೆಪಿಗೆ ತುಸು ಹಿನ್ನಡೆಗೆ ಕಾರಣವಾಗಿದೆ. ಮತದಾರರು ಅಪಪ್ರಚಾರಕ್ಕೆ ಕಿವಿಗೊಟ್ಟಿದ್ದಾರೆ. ಆದರೆ ಬಿಜೆಪಿ ಎಲ್ಲಿಯೂ ಸಂವಿಧಾನದ ಬಗೆಗೆ ಚಕಾರವನ್ನೇ ಎತ್ತಿರಲಿಲ್ಲ. ಅಪಪ್ರಚಾರದ ಹಿಂದೆ ಬಿದ್ದು ಮೈಮರೆತು ಮತದಾರರು ಕೆಲ ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಆಶೀರ್ವದಿಸಿದರು ಎಂದ ಅವರು, ನಮ್ಮ ಕ್ಷೇತ್ರದಲ್ಲಿ ಪ್ರಜ್ಞಾವಂತ ಮತದಾರರು ಸೂಕ್ತ ನಿರ್ಣಯದೊಂದಿಗೆ ಹೆಜ್ಜೆ ಹಾಕಿದ ಫಲದಿಂದ ಟೀಕಾಕಾರರಿಗೆ ಸರಿ ಉತ್ತರ ನೀಡುವಂತಾಗಿದೆ ಎಂದರು.

ಎಲ್ಎಸ್ಎಂಪಿ ಉಪಾಧ್ಯಕ್ಷ ಟಿ.ಆರ್. ಹೆಗಡೆ ಮಾತನಾಡಿ, ವಿಶೇಷವಾಗಿ ನಮ್ಮ ಪ್ರದೇಶದಲ್ಲಿ ಜನರು ಬಿಜೆಪಿಯತ್ತ ಮುಖ ಮಾಡುತ್ತಿರುವುದು ಕಂಡುಬಂದಿದೆ. ಸಿದ್ಧಾಂತದೊಂದಿಗೆ ವ್ಯವಸ್ಥಿತವಾಗಿ ಮುನ್ನಡೆಯಬೇಕಿದೆ. ಪಕ್ಷಾಂತರಿಗಳಿಗೆ ಮಣೆ ಹಾಕಬಾರದು. ಮುಂದೆ ಪಕ್ಷಾಂತರಿಗಳಗೆ ಜನ ಬುದ್ಧಿ ಕಲಿಸಲಿದ್ದಾರೆಂಬುದು ಲೋಕಸಭಾ ಚುನಾವಣೆಯಲ್ಲಿ ಕಂಡಿದ್ದೇವೆ. ಕಾರ್ಯಕರ್ತರೇ ನಾಯಕರಾಗಿ ಕೆಲಸ ಮಾಡಿ ಬಿಜೆಪಿಯ ಶಕ್ತಿ ಏನೆಂಬುದನ್ನು ತೋರಿಸಿದ್ದಾರೆ. ಕ್ಷೇತ್ರದಲ್ಲಿ ಕಾರ್ಯಕರ್ತರು ಗೆದ್ದಿದ್ದಾರೆ ಎಂದರು.

ಮುಖಂಡ ನರಸಿಂಹ ಕೋಣೆಮನೆ ಮಾತನಾಡಿ, ನಮ್ಮ ಈ ನಡೆ ಮುಂದಿನ ಸ್ಥಳಿಯ ಚುನಾವಣೆಯಲ್ಲೂ ಇರಬೇಕು ಎಂದರು.

ನಾಗರಾಜ ಕವಡೀಕೆರೆ ಮಾತನಾಡಿ, ಹಿರಿಯರ ಮೇಲ್ಪಂಕ್ತಿ ಬಿಜೆಪಿಗಿರುವ ಶಕ್ತಿ ಎಂದರು.

ಈ ಸಂದರ್ಭದಲ್ಲಿ ಪಕ್ಷದ ಹಿರಿಯರಾದ ಶಿವರಾಮ ಸುಬ್ರಾಯ ಭಟ್ಟ ಗಾಣದಮನೆ ತಗ್ಗು, ಸುಬ್ರಾಯ ಭಾಗ್ವತ, ಅಪ್ಪು ಆಚಾರಿ ಉಪಳೇಶ್ವರ, ಮಾದೇವ ನಾಯ್ಕ ಕೊಲ್ಲಕ್ಕಿಪಾಲ್ ಮತ್ತು ರಾಜ್ಯದ ರೈತಸಖಿಯಾಗಿ ಪ್ರಧಾನಿಯಿಂದ ಗೌರವಿಸಲ್ಪಟ್ಟ ಶ್ರೀಲತಾ ಹೆಗಡೆ ಜಂಬೆಸಾಲ್ ಅವರನ್ನು ಗೌರವಿಸಲಾಯಿತು.

ಹಿರಿಯರಾದ ರಮೇಶ್ವರ ಕೊಂಬೆ ಅಧ್ಯಕ್ಷತೆ ವಹಿಸಿದ್ದರು. ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ನಿಕಟಪೂರ್ವ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕಾರ್ ಮಾತನಾಡಿದರು. ಚಂದಗುಳಿ ಶಕ್ತಿ ಕೇಂದ್ರದ ಅಧ್ಯಕ್ಷ ಸುಬ್ವಣ್ಣ ಉದ್ದಾಬೈಲ್ ಸ್ವಾಗತಿಸಿದರು. ನಾಗರಾಜ ಕವಡೀಕೆರೆ ಪ್ರಾಸ್ತಾವಿಕ ಮಾತನಾಡಿದರು. ವೆಂಕಟ್ರಮಣ ಕಿರಕುಂಭತ್ತಿ ನಿರ್ವಹಿಸಿದರು. ಸುಬ್ರಾಯ ದಾನ್ಯಾನಕೊಪ್ಪ ವಂದಿಸಿದರು.