ಪ್ರಧಾನಿ ಮೋದಿ ಹೇಳುತ್ತಿರುವುದು ಹಸಿ ಸುಳ್ಳು

| Published : Apr 29 2024, 01:36 AM IST

ಸಾರಾಂಶ

ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿ ಕಿತ್ತು ಮುಸ್ಲಿಂರಿಗೆ ನೀಡಲು ನೀಡಲು ಕಾಂಗ್ರೆಸ್ ಹೊರಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿರುವುದು ಹಸಿ ಸುಳ್ಳು, ಸೋಲಿನ ಭೀತಿಯಲ್ಲಿರುವ ಅವರ ಹತಾಶೆಯನ್ನು ಸೂಚಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಕಾಗವಾಡ ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿ ಕಿತ್ತು ಮುಸ್ಲಿಂರಿಗೆ ನೀಡಲು ನೀಡಲು ಕಾಂಗ್ರೆಸ್ ಹೊರಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿರುವುದು ಹಸಿ ಸುಳ್ಳು, ಸೋಲಿನ ಭೀತಿಯಲ್ಲಿರುವ ಅವರ ಹತಾಶೆಯನ್ನು ಸೂಚಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ಉಗಾರ ಪಟ್ಟಣದಲ್ಲಿ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇಲ್ಲಿಯವರೆಗಿನ ಯಾರೂ ಕೂಡ ಪ್ರಧಾನಮಂತ್ರಿ ಪಟ್ಟವನ್ನು ಇಷ್ಟು ಕೀಳು ಮಟ್ಟಕ್ಕೆ ಉಪಯೋಗಿಸಿಕೊಂಡಿರಲಿಲ್ಲ ಎಂದು ಕಿಡಿಕಾರಿದರು.

ಜವಾಬ್ದಾರಿ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಆರೋಪ ಮಾಡುವಾಗ ಸಾಕ್ಷಿ ಪುರಾವೆಗಳನ್ನಿಟ್ಟುಕೊಂಡು ಮಾತನಾಡಬೇಕು. ಅವರು ಮಾಡಿರುವ ಆರೋಪದ ಆಧಾರಗಳನ್ನು ಸಾಬೀತುಪಡಿಸಬೇಕು. ಇಲ್ಲವೇ ದೇಶದ ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಹಿಂದುಳಿದ ಜಾತಿ ಎಸ್ಸಿ, ಎಸ್ಟಿ ಮೀಸಲಾತಿ ಕಿತ್ತು ಮುಸ್ಲಿಮರಿಗೆ ನೀಡಿರುವುದಾಗಿ ಕಾಂಗ್ರೆಸ್ ಎಲ್ಲಿ ಹೇಳಿದೆ? ಯಾವ ರಾಜ್ಯದ ಕಾಂಗ್ರೆಸ್‌ ಸರ್ಕಾರ ಮಾಡಿದೆ? ಅದಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶ ಪತ್ರಗಳನ್ನು ತೋರಿಸಿ ನೋಡೋಣ? ಈ ಎಲ್ಲ ವಿವರಗಳನ್ನು ಪ್ರಧಾನಿಯವರು ದೇಶದ ಮುಂದೆ ಇಡಬೇಕು ಎಂದು ಒತ್ತಾಯಿಸಿದರು.

ಸಂವಿಧಾನದತ್ತವಾದ ಮೀಸಲಾತಿ ಮನಬಂದಂತೆ ಬದಲಾವಣೆ ಮಾಡಲು ಸಾಧ್ಯವಿಲ್ಲ. ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಆಧಾರದಲ್ಲಿ ಮಾತ್ರ ಮೀಸಲಾತಿ ಪರಿಷ್ಕರಣೆ ಸಾಧ್ಯ. ಪರಿಶಿಷ್ಟ ಜಾತಿ, ಪಂಗಡಗಳ ಮೀಸಲಾತಿ ಪರಿಸ್ಕರಿಸುವ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲಿಲ್ಲ. ಇದಕ್ಕಾಗಿ ಸಂಸತನ ಉಭಯ ಸದನಗಳ ಒಪ್ಪಿಗೆಯೊಂದಿಗೆ ಸಂವಿಧಾನ ತಿದ್ದುಪಡಿ ಮಾಡಬೇಕಾಗುತ್ತದೆ. ಇಂತಹದೊಂದು ಕನಿಷ್ಠ ಜ್ಞಾನ ಒಬ್ಬ ಪ್ರಧಾನಮಂತ್ರಿಗೆ ಇಲ್ಲದಿರುವುದು ಈ ದೇಶದ ದುರಂತ ಎಂದು ಲೇವಡಿ ಮಾಡಿದರು.

ಕನಾಟದಲ್ಲಿ ರಾಜ್ಯ ಸರ್ಕಾರ ಸ್ಥಾಪಿಸಿದ ಚಿನ್ನಪ್ಪ ರೆಡ್ಡಿ ಆಯೋಗದ ವರದಿ ಆಧಾರದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಗಮನಕ್ಕೆ ತೆಗೆದುಕೊಂಡು ಮುಸ್ಲಿಂರನ್ನು ಹಿಂದುಳಿದ ಜಾತಿಗಳ 2ಬಿ ವರ್ಗಕ್ಕೆ ಸೇರಿಸಲಾಗುವುದು ನಿಜ. ಕಳೆದ 3 ದಶಕಗಳಿಂದ ರಾಜ್ಯದಲ್ಲಿ ಮೀಸಲಾತಿ ಜಾರಿಯಲ್ಲಿದೆ. ಕೇಂದ್ರದಲ್ಲಿ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ 10 ವರ್ಷಗಳಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಲ್ಲಿಯವರೆಗೆ ಈ ಮೀಸಲಾತಿ ಪ್ರಶ್ನಿಸಿಲ್ಲ. ಬಿಜೆಪಿಯೂ ಸೇರಿದಂತೆ ಯಾರೂ ಕೂಡ ಇದನ್ನು ನ್ಯಾಯಾಲಯದಲ್ಲೂ ಪ್ರಶ್ನಿಸಿಲ್ಲ ಎಂದರು.

ಚಿನ್ನಪ್ಪ ರಡ್ಡಿ ಶಿಫಾರಸ್‌ನ ಮೇಲೆ 1994ನೇ ಇಸ್ವಿಯಲ್ಲಿ ವೀರಪ್ಪ ಮೊಯ್ಲಿಯವರು ಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಂರಿಗೆ ಶೇ.4 ರಷ್ಟು ಮೀಸಲಾತಿ ಕೋಡಬೇಕು ಅಂತಾ ತೀರ್ಮಾನ ಮಾಡಿದರು. ನಂತರ ದೇವೆಗೌಡರು ಮುಖ್ಯಮಂತ್ರಿಗಳಾಗಿದ್ದಾಗ ನಾನು ಹಣಕಾಸು ಸಚಿವನಾಗಿದ್ದಾಗ ಮುಸ್ಲಿಂರಿಗೆ ಮೀಸಲಾತಿ ಕೊಡಬೇಕು ಅಂತಾ ಆದೇಶವಾಯಿತು. 30 ವರ್ಷಗಳಿಂದ ಮುಸ್ಲಿಂರಿಗೆ ಮೀಸಲಾತಿ ಇದೆ. 2008 ರಿಂದ 2013 ರವರೆಗೆ ಯಡಿಯೂರಪ್ಪನವರು, ಜಗದೀಶ ಶೆಟ್ಟರ, ಸದಾನಂದಗೌಡರು ಇದ್ದಾಗ ಮುಸ್ಲಿಂರಿಗೆ ಮೀಸಲಾತಿ ಇತ್ತು. ಆ ನಂತರ ಸಿಎಂ ಬಸವರಾಜ ಬೊಮ್ಮಾಯಿಯವರು ರದ್ದು ಮಾಡಿದರು. ಲಿಂಗಾಯತ ಹಾಗೂ ಒಕ್ಕಲಿಗರು ಹೆಚ್ಚು ಮೀಸಲಾತಿಗಾಗಿ ಹೋರಾಟ ಮಾಡಿದಾಗ ಮುಸ್ಲಿಂರಿಗೆ ಕೊಟ್ಟಿರುವ ಶೇ.4 ರಷ್ಟು ಮೀಸಲಾತಿ ಕಿತ್ತು ಲಿಂಗಾಯತರಿಗೆ, ಒಕ್ಕಲಿಗರಿಗೆ ಹಂಚಿಕೆ ಮಾಡಿದರು. ಮುಸ್ಲಿಂ ಮುಖಂಡರು ಈ ಆದೇಶವನ್ನು ಚಾಲೆಂಜ್ ಮಾಡಿದಾಗ ಸುಪ್ರಿಂ ಕೋರ್ಟ್‌ ಮುಂದೆ ಯಥಾಸ್ಥಿತಿ ಕಾಯ್ದುಕೊಳ್ಳುವುದಾಗಿ ಮುಚ್ಚಳಿಕೆ ಬರೆದುಕೊಟ್ಟವರೇ ಬಸವರಾಜ ಬೊಮ್ಮಾಯಿ ಎಂದು ತಿಳಿಸಿದರು.

----

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ: ಸಿಎಂ ಸಿದ್ದರಾಮಯ್ಯದೇಶದಲ್ಲಿ ಈ ಬಾರಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೇ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರೈತರ ಹಿತವನ್ನು ಕಡೆಗಣಿಸುವ ಮೂಲಕ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಹೀಗಾಗಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬರಬೇಕಾಗಿದೆ. ತಾವೆಲ್ಲರೂ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ 10 ವರ್ಷದ ಆಡಳಿತಾವಧಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಜನತೆಯ ಮುಂದಿಟ್ಟು ₹72 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದರು. ₹8,165 ಹಣವನ್ನು ಸಹಕಾರಿ ಬ್ಯಾಂಕ್ಗಳಲ್ಲಿದ್ದ ಸಾಲವನ್ನು ನಾನು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದೇನೆ. ಯಡಿಯೂರಪ್ಪನವರು ಮುಖ್ಯಂಂತ್ರಿಗಳಾಗಿದ್ದಾಗ ಸಾಲಮನ್ನಾ ಮಾಡುವಂತೆ ಒತ್ತಾಯಿಸಿದಾಗ ನಮ್ಮಲ್ಲಿ ನೋಟ ಪ್ರಿಂಟಿಂಗ್ ಮಿಶಿನ್ ಇಲ್ಲ ಎಂದು ರೈತ ವಿರೋಧಿ ಧೋರಣೆ ತಾಳಿದ್ದರು ಎಂದು ದೂರಿದರು.

ಬಡವರ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಆರ್ಥಿಕವಾಗಿ ಬಡವರನ್ನು ಸಬಲರನ್ನಾಗಿ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರವಾಗಿದೆ. ನಾವು ಕರ್ನಾಟಕದ ಮಾದರಿಯಲ್ಲೇ ಲೋಕಸಭಾ ಚುನಾವಣೆಯಲ್ಲಿ 25 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೇವೆ. ಬಡ ಮಹಿಳೆಯರಿಗೆ ₹1 ಲಕ್ಷ ನೀಡುತ್ತೇವೆ ಎಂದು ಭರವಸೆ ನೀಡಿದರು.ರಾಜ್ಯದಲ್ಲಿ 45 ಲಕ್ಷ ಹೆಕ್ಟೇರ್ ಬೆಳೆನಾಶವಾಗಿದೆ. ನಾವು ಕೇಳಿದ್ದು ₹18,172 ಕೋಟಿ. ಕೇಂದ್ರ ಬಿಡುಗಡೆ ಮಾಡಿದ್ದು ಕೇವಲ ₹3450 ಕೋಟಿ. ಬಿಜೆಪಿಯಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ರಾಜ್ಯಕ್ಕೆ ಬರಬೇಕಾದ ಬರ ಪರಿಹಾರದ ಹಣವನ್ನು ನೀಡಲು ಕೇಂದ್ರ ಸರ್ಕಾರ ಮೀನಾಮೇಶ ಎನಿಸುತ್ತಿದೆ. ಅದನ್ನು ಸಹ ನ್ಯಾಯಾಲಯಕ್ಕೆ ಹೋಗಿ ಪಡೆಯಬೇಕಾದ ಪರಿಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸ್ಥಳೀಯ ಶಾಸಕ ರಾಜು ಕಾಗೆ ಹೇಳಿದಂತೆ ಈ ಭಾಗದ ಮಹತ್ವಾಕಾಂಕ್ಷಿ ಬಸವೇಶ್ವರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದು ನಾನೇ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಒದಗಿಸುವುದು ನಾನೇ. ಮಹಾರಾಷ್ಟ್ರದ ಸರ್ಕಾರದ ಜೊತೆಗೆ ಮಾತನಾಡಿ ಭೀಮಾ ನದಿಯಿಂದ ಮಹಾರಾಷ್ಟ್ರದ ಅಕ್ಕಲಕೊಟ ಭಾಗಕ್ಕೆ ಬೇಸಿಗೆಯ ಕಾಲಕ್ಕೆ 2 ಟಿಎಂಸಿ ನೀರು ಕೊಟ್ಟು ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 2 ಟಿಎಂಸಿ ನೀರು ಬಿಡಿಸುವ ಬಗ್ಗೆ ಚುನಾವಣೆಯಾದ ನಂತರ ಮಾತುಕತೆ ನಡೆಸುವುದಾಗಿ ತಿಳಿಸಿದರು.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮಾತನಾಡಿ, ರಾಜ್ಯದಲ್ಲಿ 27 ಎಂಪಿಗಳು 5 ವರ್ಷದಲ್ಲಿ ಕರ್ನಾಟಕದ ಸಮಸ್ಯೆಗಳ ಬಗ್ಗೆ ಒಂದು ದಿನವೂ ಧ್ವನಿ ಎತ್ತಲಿಲ್ಲ. ಅಂಥವರನ್ನು ಸೋಲಿಸಿ ಕರ್ನಾಟಕಕ್ಕೆ ಆದ ಅನ್ಯಾಯವನ್ನು ಸರಿ ಪಡಿಸಲು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಬಿಜೆಪಿಯವರು ಸೋಲಿನ ಭೀತಿಯಿಂದ 14 ಜನ ಎಂಪಿ ಟಿಕೆಟ್ಗಳನ್ನು ಬದಲಾಯಿಸಿದ್ದಾರೆ. ಅಂದರೆ ಅವರಿಗೆ ಸೋಲುವ ಭೀತಿ ಇದೆ ಎಂದಾಯಿತು. ನಮ್ಮ ಸರ್ಕಾರ ಪಂಚ ಗ್ಯಾರಂಟಿಗಳನ್ನು ಕೊಟ್ಟು ಜನರ ಬದುಕಿಗೆ ಭರವಸೆ ನೀಡಿದೆ ಎಂದರು.ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಈ ದೇಶದಲ್ಲಿ ಇಂಡಿಯಾ ಘಟಬಂಧನ ಅಧಿಕಾರಕ್ಕೆ ಬರುವುದು ಅತ್ಯವಶ್ಯವಾಗಿದೆ. ತಾವೆಲ್ಲರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಪ್ರಮಾಣದಲ್ಲಿ ಮತಗಳನ್ನು ನೀಡಿ ಆಶೀರ್ವದಿಸಿ ಎಂದು ಕೋರಿದರು.ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ, ಹಿಂದೆ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ₹1,330 ಕೋಟಿ ವೆಚ್ಚದ ಬಸವೇಶ್ವರ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಇನ್ನು ₹280 ಕೋಟಿ ಅನುದಾನ ಬೇಕಾಗಿದೆ. ಚುನಾವಣೆ ಮುಗಿದ ನಂತರ ಅನುದಾನ ತಂದು ಜುಲೈ ತಿಂಗಳಲ್ಲಿ ಅವರಿಂದಲೇ ನೀಡು ಒದಗಿಸಲಾಗುವುದು. ₹280 ಕೋಟಿ ವೆಚ್ಚದ 23 ಕೆರೆಗಳಿಗೆ ಶೀಘ್ರವೇ ನೀರು ತುಂಬಿಸಲಾಗುವುದು. ನಮ್ಮದೇನೆಯಿದ್ದರೂ ಅಭಿವೃದ್ಧಿ ಮಾಡಿ ಮತ ಕೇಳುತ್ತೇವೆ ಎಂದು ತಿಳಿಸಿದರು.ಅಥಣಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೇ ಗಂಗಾ ನದಿಯನ್ನು ಕಾವೇರಿಗೆ ಹಾಗೂ ಕೃಷ್ಣೆಗೆ ಜೋಡಣೆ ಮಾಡುತ್ತೇವೆ. ರೈತರ ಆದಾಯವನ್ನು ದ್ವಿಗುಣ ಮಾಡುತ್ತೇವೆ ಎಂದು ಹುಸಿ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಕೆಲಸ ಮಾಡಲಿಲ್ಲ. ಇವರಿಗೆ ಜನತೆಯ ಬಳಿ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದರು.ಈ ವೇಳೆ ಸಚಿವ ಬೈರತಿ ಬಸವರಾಜ, ಶಾಸಕರಾದ ವಿನಯ ಕುಲಕರ್ಣಿ, ಗಣೇಶ ಹುಕ್ಕೇರಿ, ಮಹೇಶ ತಮ್ಮಣ್ಣವರ, ಮಾಜಿ ಶಾಶಕರಾದ ಮೋಹನರಾವ್ ಶಹಾ, ವೀರಕುಮಾರ ಪಾಟೀಲ, ಎ.ಬಿ.ಪಾಟೀಲ, ಕಾಕಾ ಪಾಟೀಲ, ಶಾಮ್ ಘಾಟಗೆ, ಕಾಕಾ ಪಾಟೀಲ, ಮುಖಂಡರಾದ ಲಕ್ಷ್ಮಣರಾವ್ ಚಿಂಗಳೆ, ವಿಜಯ ಅಕಿವಾಟೆ, ಸಿದ್ದಾರ್ಥ ಶಿಂಗೆ, ಮಹಾವೀರ ಮೊಹಿತೆ, ದಿಗ್ವಿಜಯ ಪವಾರ, ಚಂದ್ರಕಾಂತ ಇಮ್ಮಡಿ, ಡಾ.ಶಿದ್ದಗೌಡ ಕಾಗೆ, ಅರುಣಕುಮಾರ ಯಲಗುದ್ರಿ, ಗಜಾನನ ಮಂಗಸೂಳಿ, ವಿನಾಯಕ ಬಾಗಡಿ, ರಮೇಶ ಸಿಂದಗಿ, ರಾವಸಾಬ ಐಹೊಳಿ, ಶಿವು ಗುಡ್ಡಾಪುರ, ರಾಜು ಮದನೆ, ರಮೇಶ ಚೌಗುಲಾ ಸೇರಿದಂತೆ ಅನೇಕರು ಇದ್ದರು.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹವಾ ಇಲ್ಲ. ಏನಿದ್ದರೂ ಕಾಂಗ್ರೆಸ್ ಪಕ್ಷದ ಗ್ಯಾರಂಟ ಹವಾ ಇದೆ. ಚಿಕ್ಕೋಡಿ ಹಾಗೂ ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಮೃಣಾಲ ಹೆಬ್ಬಾಳಕರ ಹಾಗೂ ಪ್ರಿಯಾಂಕಾ ಜಾರಕಿಹೊಳಿ ಗೆಲ್ಲುತ್ತಾರೆ. ಬೊಮ್ಮಾಯಿ, ಜಗದೀಶ ಶೆಟ್ಟರ, ಪ್ರಲ್ಹಾದ ಜೋಶಿ ಸೋಲು ಖಚಿತ.

-ಸಿದ್ದರಾಮಯ್ಯ, ಸಿಎಂ.ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಚಿಕ್ಕೋಡಿ ಮತ್ತು ಬೆಳಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳು 2 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ.

-ಡಿ.ಕೆ.ಶಿವಕುಮಾರ, ಡಿಸಿಎಂ.ನಾವು ಅಭಿವೃದ್ಧಿ ಮುಂದಿಟ್ಟುಕೊಂಡು ಮತಗಳನ್ನು ಕೇಳುತ್ತೇವೆ. ಕೋಮುವಾದಿ ಪಕ್ಷವನ್ನು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಬೆಳಬಲಿಸಬೇಕು.

-ಸತೀಶ ಜಾರಕೊಹೊಳಿ, ಸಚಿವ.

ನಮಗೆ ಮಠ-ಮಂದಿರಗಳ ಅವಶ್ಯಕತೆ ಇಲ್ಲ. ಯುವಕರಿಗೆ ಉದ್ಯೋಗ, ರೈತರಿಗೆ ಗುಣಮಟ್ಟದ ವಿದ್ಯುತ್, ರೈತರ ಬೆಳೆಗಳಿಗೆ ಬೆಂಬಲ ಬೆಲೆ ಬೇಕಾಗಿದೆ. ನಾವು ಜಾತಿ, ಧರ್ಮದ ಆಧಾರದ ಮೇಲೆ ಮತ ಕೇಳುತ್ತಿಲ್ಲ. ಕಳೆದ ಒಂದು ವರ್ಷದಲ್ಲಿ ಹಲವಾರು ಅಭಿವೃಧ್ಧಿಗಳನ್ನು ಮಾಡಿದ್ದೇವೆ. ಆ ಅಭಿವೃದ್ಧಿ ಆಧಾರದ ಮೇಲೆ ಮತಗಳನ್ನು ಕೇಳುತ್ತೇವೆ.

-ರಾಜು ಕಾಗೆ, ಶಾಸಕ.

ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ನೀಡುತ್ತೇವೆ ಎಂದಿದ್ದರು. ಅವ್ಯಾವವು ಆಗಲಿಲ್ಲ. ಆದ್ದರಿಂದ ಈ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕು.

-ಲಕ್ಷ್ಮಣ ಸವದಿ, ಶಾಸಕ.