ಬಾಲಕೃಷ್ಣರ ಬಂಡಲ್ ಪುಸ್ತಕದಲ್ಲಿ ಏನು ಇಲ್ಲ: ಮಂಜುನಾಥ್

| Published : Apr 25 2024, 01:06 AM IST

ಬಾಲಕೃಷ್ಣರ ಬಂಡಲ್ ಪುಸ್ತಕದಲ್ಲಿ ಏನು ಇಲ್ಲ: ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಮಾಗಡಿ: ಶಾಸಕ ಬಾಲಕೃಷ್ಣ ಅವರ 6 ತಿಂಗಳ ಸಾಧನಾ ಪಥ ಎಂದು ಬಿಡುಗಡೆ ಮಾಡಿರುವ ಪುಸ್ತಕ ಒಂದು ಬಂಡಲ್‌, ಅದರಲ್ಲಿ ಏನೂ ಇಲ್ಲ ಎಂದು ಮಾಜಿ ಶಾಸಕ ಎ.ಮಂಜುನಾಥ್ ವ್ಯಂಗ್ಯವಾಡಿದರು.

ಮಾಗಡಿ: ಶಾಸಕ ಬಾಲಕೃಷ್ಣ ಅವರ 6 ತಿಂಗಳ ಸಾಧನಾ ಪಥ ಎಂದು ಬಿಡುಗಡೆ ಮಾಡಿರುವ ಪುಸ್ತಕ ಒಂದು ಬಂಡಲ್‌, ಅದರಲ್ಲಿ ಏನೂ ಇಲ್ಲ ಎಂದು ಮಾಜಿ ಶಾಸಕ ಎ.ಮಂಜುನಾಥ್ ವ್ಯಂಗ್ಯವಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಮಗಾರಿ ಆರಂಭವಾಗದಿದ್ದರೂ ಡಿಜಿಟಲ್ ಫೋಟೋಗಳ ಮೂಲಕ ಪುಸ್ತಕ ಬಿಡುಗಡೆ ಮಾಡಿ ಜನರನ್ನು ಮರಳು ಮಾಡುತ್ತಿದ್ದಾರೆ. ವರ್ಕ್‌ ಆರ್ಡರ್, ಓಎಂ, ಯಾರು ಗುತ್ತಿಗೆದಾರರು, ಯಾವ ಅನುದಾನ ಎಂಬುದನ್ನೇ ತೋರಿಸಿ ಜನರಿಗೆ ಮಂಕುಬೂತಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಡಿಜಿಟಲ್ ಫೋಟೋ ಹಾಕಿಸಿ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ. ಅವರ ಒಂದು ವರ್ಷದ ಸಾಧನೆ ಶೂನ್ಯ ಎಂದು ಲೇವಡಿ ಮಾಡಿದರು.

ನಾನು ಶಾಸಕನಾಗಿದ್ದ ಅವಧಿಯಲ್ಲಿ ಯಾವ ಯಾವ ಕಾಮಗಾರಿಗಳನ್ನು ಮಾಡಿದ್ದೇನೆ ಎಂಬುದನ್ನು ಫೋಟೋ ಸಮೇತ ಕಾಮಗಾರಿ ವಿವರವನ್ನು ಹಾಕಿದ್ದೇನೆ. ಈ ರೀತಿ ಬಣ್ಣ ಬಣ್ಣದ ಫೋಟೋಗಳು ಇರುವ ಬಂಡಲ್ ಪುಸ್ತಕವನ್ನು ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ರೈತರಿಗೆ ಟಿಸಿ ಹಾಕಿಸಿಕೊಳ್ಳಲು ಕನಿಷ್ಠ 2ರಿಂದ 3ಲಕ್ಷ ರು. ಆಗುತ್ತಿದೆ. ಈಗ ಅವರು ಬಿಟ್ಟಿರುವ ಪುಸ್ತಕದಲ್ಲಿ ಉಚಿತವಾಗಿ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಒಬ್ಬ ರೈತರಿಗೆ ಉಚಿತವಾಗಿ ಟಿಸಿ ಕೊಡಿಸಲಿ ಅದನ್ನು ಬಿಟ್ಟು ಜನಗಳಿಗೆ ಮಂಕುಬೂದಿ ಎರಚುವ ಕೆಲಸ ಮಾಡಬೇಕಿಲ್ಲ. ಸತ್ಯಗಾಲ ಯೋಜನೆ ಜಾರಿಯಾದಾಗ ಬಾಲಕೃಷ್ಣ ಮಾಜಿ ಶಾಸಕರಾಗಿದ್ದರು. ಅವರ ಪಾತ್ರವೇನಾದರೂ ಇತ್ತಾ? ನಾನು ಶಾಸಕನಾಗಿದ್ದಾಗ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸತ್ಯಗಾಲದಿಂದ ಮಾಗಡಿ ಜಲಾಶಯಕ್ಕೆ ಕಾವೇರಿ ನೀರನ್ನು ತರಲಾಗಿದೆ. ಈಗ ನಾನು ಸೋತ ಮೇಲೆ ಎಂಪಿ ಜೊತೆ ಹೋಗಿ ನಾನೇ ನೀರು ತಂದೆ ಎಂದು ಫೋಟೋ ಹಾಕಿಸಿಕೊಳ್ಳುತ್ತಿರುವುದು ಎಷ್ಟರಮಟ್ಟಿಗೆ ಸರಿ? ಹೇಮಾವತಿ ಕಾಮಗಾರಿಯಲ್ಲಿ ಪೈಪ್‌ಲೈನ್ ಹಾಕಿಸಲು ಅನುಮೋದನೆ ಪಡೆದಿದ್ದಾರಾ? ಎಂದು ಪ್ರಶ್ನೆ ಮಾಡಿದ್ದಾರೆ ಸರ್ಕಾರದ ಕಾಮಗಾರಿ ಆಗಿರುವುದರಿಂದ ಇಲಾಖೆಯಿಂದಲೆ ಅನುಮೋದನೆ ಪಡೆಯಬಹುದು, ಇದು ದೊಡ್ಡ ವಿಚಾರವಲ್ಲ, ಹೇಮಾವತಿ ವಿಚಾರದಲ್ಲಿ ಕಾಮಗಾರಿ ಎಷ್ಟು ಆಗಿದೆ ಎಂಬುದನ್ನು ಬಾಲಕೃಷ್ಣ ಪರಿಶೀಲನೆ ಮಾಡಿಲ್ಲ ಎಂದು ಟೀಕಿಸಿದರು.

ತಾಕತ್ತಿದ್ದರೆ ನಮ್ಮ ಕಾರ್ಯಕರ್ತರನ್ನು ಬಂಧಿಸಲಿ: ದ್ವೇಷದ ರಾಜಕಾರಣ ಮುಂದುವರಿಸಿದರೆ ನಾನು ಸುಮ್ಮನೆ ಕೂರುವುದಿಲ್ಲ. ನಮ್ಮ ಕಾರ್ಯಕರ್ತರ ಮೇಲೆ ಪೊಲೀಸರಿಂದ ಧಮ್ಕಿ ಹಾಕಿಸುವುದಲ್ಲ, ತಾಕತ್ತಿದ್ದರೆ ನಮ್ಮ ಕಾರ್ಯಕರ್ತರನ್ನು ಬಂಧಿಸಲಿ, ಇವರ ಕಾರ್ಯಕರ್ತ ಪಾಕಿಸ್ತಾನಕ್ಕೆ ಜೈ ಎಂದು ಹೇಳಿದ್ದಾರೆ ಎಂದು ಟಿವಿಗಳಲ್ಲಿ ಬಂದಿದ್ದನ್ನು ಜಾಲತಾಣಗಳಲ್ಲಿ ಹಂಚಿದ್ದಾರೆ ಎಂಬ ಒಂದೇ ಕಾರಣಕ್ಕೆ ಕೆಟ್ಟ ಪದಗಳಿಂದ ಪೊಲೀಸರಿಂದ ಕಾರ್ಯಕರ್ತರಿಗೆ ಧಮ್ಕಿ ಹಾಕುತ್ತಿದ್ದು ಗುಂಡಾ ಕಾಯ್ದೆ ಅಡಿ ಗಡಿಪಾರು ಮಾಡಿ ಎಂದು ಹೇಳುತ್ತಿದ್ದಾರೆ. ಪೊಲೀಸರು ನಮ್ಮ ಕಾರ್ಯಕರ್ತರನ್ನು ಮುಟ್ಟಿದರೆ, ನಾವು ಸುಮ್ಮನೆ ಕೂರಲ್ಲ, ನಾವು ಕೂಡ ಎಲ್ಲದಕ್ಕೂ ಸಿದ್ಧವಾಗಿದ್ದೇವೆ ಎಂದು ಬಾಲಕೃಷ್ಣ್ಣ ವಿರುದ್ಧ ಮಂಜುನಾಥ್ ಕಿಡಿ ಕಾರಿದರು. ಜೆಡಿಎಸ್, ಬಿಜೆಪಿ ಮುಖಂಡರು ಹಾಜರಿದ್ದರು.

ಪೋಟೋ 24ಮಾಗಡಿ1:

ಮಾಗಡಿಯಲ್ಲಿ ಶಾಸಕ ಬಾಲಕೃಷ್ಣ ವಿರುದ್ಧ ಮಾಜಿ ಶಾಸಕ ಎ.ಮಂಜುನಾಥ್ ವಾಗ್ದಾಳಿ ಮಾಡಿದರು.