ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹುಬ್ಬಳ್ಳಿಗೆ ಸೀಮಿತರಾಗಿದ್ದಾರೆ. ಎಂದೂ ಕೂಡ ಬಳ್ಳಾರಿಗೆ ಬಂದು ಈ ಭಾಗದ ಪ್ರಗತಿಯ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳ ಜೊತೆ ಚರ್ಚಿಸಿಲ್ಲ.

ಬಳ್ಳಾರಿ: ಜಿಲ್ಲೆಯ ಅಭಿವೃದ್ಧಿ ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೊಡುಗೆ ಏನು ಎಂದು ಈಶಾನ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಾರಾ ಪ್ರತಾಪ ರೆಡ್ಡಿ ಪ್ರಶ್ನಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಅಭ್ಯರ್ಥಿ ಪರ ಮತ ಕೇಳಲು ಬಳ್ಳಾರಿಗೆ ಬಂದಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಈವರೆಗೆ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚಿಸಲು ಎಷ್ಟು ಬಾರಿ ಬಂದಿದ್ದಾರೆ ಎಂದು ಪ್ರಶ್ನಿಸಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹುಬ್ಬಳ್ಳಿಗೆ ಸೀಮಿತರಾಗಿದ್ದಾರೆ. ಎಂದೂ ಕೂಡ ಬಳ್ಳಾರಿಗೆ ಬಂದು ಈ ಭಾಗದ ಪ್ರಗತಿಯ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳ ಜೊತೆ ಚರ್ಚಿಸಿಲ್ಲ. ಬಳ್ಳಾರಿಯ ರಿಂಗ್ ರಸ್ತೆ ಏನಾಗಿದೆ? ಬೈಪಾಸ್‌ ರಸ್ತೆಯ ಪರಿಸ್ಥಿತಿ ಹೇಗಿದೆ? ಮೂಲಸೌಕರ್ಯ ಏನಾಗಬೇಕಾಗಿದೆ ಎಂದು ಸ್ಥಳೀಯ ಸಚಿವರು, ಶಾಸಕರು ಹಾಗೂ ಜನಪ್ರತಿನಿಧಿಗಳ ಜೊತೆ ಒಂದೇ ಒಂದು ಸಭೆ ನಡೆಸಿಲ್ಲ. ಇದೀಗ ಚುನಾವಣೆ ಬಂದಿತೆಂದು ಬಳ್ಳಾರಿಗೆ ಬಂದು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಾರೆ. ಈಶಾನ್ಯ ಪದವೀಧರ ಕ್ಷೇತ್ರದಿಂದ ಈ ಹಿಂದೆ ಗೆದ್ದಿದ್ದ ನಿಮ್ಮ ಪಕ್ಷದ ಅಭ್ಯರ್ಥಿ ಈ ಭಾಗಕ್ಕೆ ಮಾಡಿದ ಕೆಲಸವೇನು ಎಂದು ಹೇಳುವುದು ಬಿಟ್ಟು, ದೇಶದ ವಿಚಾರಗಳನ್ನು ಮಾತನಾಡಿ ಹೋಗುತ್ತಾರೆ ಎಂದು ಟೀಕಿಸಿದರು.

ಭ್ರಮನಿರಸನ:

ಈಶಾನ್ಯ ಪದವೀಧರ ಕ್ಷೇತ್ರದ ಏಳು ಜಿಲ್ಲೆಗಳಲ್ಲಿ ಈಗಾಗಲೇ ಪ್ರಚಾರ ಕಾರ್ಯ ನಡೆಸಲಾಗಿದೆ. ಕಾಂಗ್ರೆಸ್‌-ಬಿಜೆಪಿದಿಂದ ಗೆದ್ದ ಅಭ್ಯರ್ಥಿಗಳ ಬಗ್ಗೆ ಜನರು ಭ್ರಮನಿರಸನಗೊಂಡಿದ್ದಾರೆ. ಕಾಲೇಜುಗಳು, ಉಪನ್ಯಾಸಕರು, ಶಿಕ್ಷಕರು, ಅತಿಥಿ ಉಪನ್ಯಾಸಕರು ಹೀಗೆ ಯಾರನ್ನೇ ಮಾತನಾಡಿಸಿದರೂ ಈ ಹಿಂದೆ ಕಾಂಗ್ರೆಸ್‌-ಬಿಜೆಪಿಯಿಂದ ಗೆದ್ದವರ ಬಗ್ಗೆ ತೀವ್ರ ಬೇಸರದ ಮಾತುಗಳನ್ನಾಡುತ್ತಾರೆ ಎಂದರು.

ಆರು ವರ್ಷದಲ್ಲಿ ಕಾಂಗ್ರೆಸ್‌ನ ಚಂದ್ರಶೇಖರ ಪಾಟೀಲ್ ಒಂದು ಕೆಲಸ ಮಾಡಿಲ್ಲ. ಶೈಕ್ಷಣಿಕ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ಮತದಾರರು ದೂರುತ್ತಿದ್ದಾರೆ. ಗುಲ್ಬರ್ಗ ವಿವಿಯಲ್ಲಿ 2 ವರ್ಷ ಕಳೆದರೂ ಪದವಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಿಲ್ಲ. ತಾಂತ್ರಿಕ ಕಾರಣವೊಡ್ಡಿ ವಿವಿ ಮುಂದೂಡುತ್ತಲೇ ಬಂದಿದೆ. ಹೀಗಾದರೆ ವಿದ್ಯಾರ್ಥಿಗಳ ಗತಿ ಏನು? ಬೀದರ್, ಗುಲ್ಬರ್ಗದಲ್ಲಿರುವ ಚಂದ್ರಶೇಖರ ಪಾಟೀಲ್, ಶಶಿಲ್ ನಮೂಶಿ, ಅಮರನಾಥ ಪಾಟೀಲ್ ಮಾಡುತ್ತಿರುವುದೇನು? ಅರ್ಧಗಂಟೆ ವಿವಿಯಲ್ಲಿದ್ದು ಸಮಸ್ಯೆ ಪರಿಹರಿಸಬಹುದು. ಆದರೆ, ವಿದ್ಯಾರ್ಥಿಗಳ ಬಗ್ಗೆ ಏಕೆ ಕಾಳಜಿ ತೋರಿಸುತ್ತಿಲ್ಲ. ಅತಿಥಿ ಶಿಕ್ಷಕರು, ಉಪನ್ಯಾಸಕರ ಧ್ವನಿಯಾಗಿ ಬಿಜೆಪಿ, ಕಾಂಗ್ರೆಸ್ ನ ಪದವೀಧರ ಕ್ಷೇತ್ರದ ಅಭ್ಯರ್ಥಿಗಳು ಏಕೆ ಕೆಲಸ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಕಳೆದ ಚುನಾವಣೆಯಲ್ಲಿ ಕುಲಗೆಟ್ಟ ಮತಗಳಿಂದ ನಾನು ಸೋಲಬೇಕಾಯಿತು. ಈ ಬಾರಿ ಕ್ಷೇತ್ರದ ಪದವೀಧರರು ನನ್ನ ಪರವಾಗಿದ್ದಾರೆ. ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿದ್ದೇನೆ. ಆರು ಬಾರಿ ಚುನಾವಣೆಯಲ್ಲೂ ಬೀದರ್, ಗುಲ್ಬರ್ಗದವರಿಗೆ ಅವಕಾಶ ಮಾಡಿಕೊಡಲಾಗಿದ್ದು, ನಮಗೊಂದು ಅವಕಾಶ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು.