ಸಮಾವೇಶ ಮಾಡಿದರೆ ತಪ್ಪೇನು?: ತಿಮ್ಮಾಪುರ

| Published : Dec 01 2024, 01:32 AM IST

ಸಾರಾಂಶ

ಸ್ವಾಭಿಮಾನಿ ಸಮಾವೇಶ ಮಾಡಿದರೆ ತಪ್ಪೇನು? ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಪ್ರಶ್ನಿಸಿದರು.

ಹುಬ್ಬಳ್ಳಿ: ಸ್ವಾಭಿಮಾನಿ ಸಮಾವೇಶ ಮಾಡಿದರೆ ತಪ್ಪೇನು? ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಪ್ರಶ್ನಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರೋ ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿರುತ್ತಾರೆ ಅಷ್ಟೇ. ಆದರೆ ಸಮಾವೇಶ ಮಾಡಿದರೆ ತಪ್ಪೇನು? ಎಂದರು.

ಪಕ್ಷದ ಧ್ವಜ ಇದೆ. ಸಿಎಂ ಬೇರೆ ಅಲ್ಲ. ಪಕ್ಷ ಬೇರೆ ಅಲ್ಲ. ಪಕ್ಷದೊಂದಿಗೆ ಸಿಎಂ ಇಲ್ಲವೇ ಎಂದ ಅವರು, ಸ್ವಾಭಿಮಾನಿ ಸಮಾವೇಶ ನಡೆಸುತ್ತೇವೆ ಎಂದರು.

ಸಚಿವ ಸಂಪುಟ ವಿಸ್ತರಣೆ, ಹಿರಿಯರು ತ್ಯಾಗ ಮಾಡಬೇಕು ಎಂ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ನನಗೇನು ಗೊತ್ತಿಲ್ಲ. ನನಗಂತೂ ಯಾರೂ ಹೇಳಿಲ್ಲ. ನಿಮಗೇನಾದರೂ ಹೇಳಿದ್ದರೆ ನನಗೆ ತಿಳಿಸಿ ಎಂದರು.

ಸಚಿವರ ಮೌಲ್ಯಮಾಪನ ನಡೆಯುತ್ತಿದೆ ಅಂತೆ ಎಂಬ ಪ್ರಶ್ನೆಗೆ ಉತ್ತಮ ಆಡಳಿತ ಕೊಡುತ್ತಿದ್ದೇವೆ. ಇನ್ನಷ್ಟು ಉತ್ತಮ ಪಡಿಸಲು ಮೌಲ್ಯಮಾಪನ ನಡೆಯಲೇಬೇಕಲ್ಲ. ಯಾಕೆ ಮಾಡಬಾರದು? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಸಿಎಲ್‌ಪಿಯಲ್ಲಿ ಆಯ್ಕೆಯಾದವರು. ಅವರನ್ನು ಬದಲಾವಣೆ ಮಾಡಬೇಕೆಂದರೆ ಸಿಎಲ್‌ಪಿ ಅಥವಾ ಎಐಸಿಸಿ ನಿರ್ಧಾರ ಕೈಗೊಳ್ಳಬೇಕು. ಆದರೆ ಅಂತಹ ಯಾವುದೇ ಸೂಚನೆಗಳು ಇಲ್ಲ ಎಂದರು.

ಬಿ.ಆರ್‌. ಪಾಟೀಲ ಅವರ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರಷ್ಟೇ. ಜೀವನಾನೇ ಗ್ಯಾರಂಟಿ ಇಲ್ಲ. ಇನ್ನು ಅಧಿಕಾರ ಗ್ಯಾರಂಟಿನಾ? ಆ ಅರ್ಥದಲ್ಲಿ ಪಾಟೀಲ ಹೇಳಿರಬೇಕಷ್ಟೇ ಎಂದರು.

ವಕ್ಫ್‌ ವಿಚಾರದಲ್ಲಿ ಬಿಜೆಪಿಯವರು ಕೊಟ್ಟಷ್ಟು ನೋಟಿಸ್‌ ನಾವು ಕೊಟ್ಟಿಲ್ಲ. ಈಗ ಸುಳ್ಳು ಆರೋಪ ಮಾಡುತ್ತಿದ್ದಾರೆ ಅಷ್ಟೇ. ಬಿಜೆಪಿ ಒಡೆದು ಮೂರಾಬಟ್ಟೆಯಾಗಿದೆ. ಅದನ್ನು ಮೊದಲು ಅವರು ಸುಧಾರಣೆ ಮಾಡಿಕೊಳ್ಳಲಿ. ಯತ್ನಾಳ ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ. ಹಾಗೆ ಮಾತನಾಡಿದರೆ ಕಾಂಗ್ರೆಸ್‌ ಮುಖವಾಣಿನಾ? ಕಾಂಗ್ರೆಸ್‌ಗೆ ಬಂದಂತೆ ಆಗಿ ಬಿಡುತ್ತಾ? ಅವರು ತಮ್ಮದೇಯಾದ ತತ್ವ ಸಿದ್ಧಾಂತ ಇಟ್ಟುಕೊಂಡಿರುವವರು ಎಂದರು.

ವ್ಯವಸ್ಥೆ ಸುಧಾರಿಸುತ್ತಿದ್ದೇನೆ: ತಿಮ್ಮಾಪುರ

ಅಬಕಾರಿ ಇಲಾಖೆ ಸಚಿವನಾಗಿ ಅಲ್ಲಿನ ವ್ಯವಸ್ಥೆಯನ್ನು ಸುಧಾರಿಸುತ್ತಿದ್ದೇನೆ. ಹಿಂದೆ ಎಷ್ಟು ಜನ ಇಲಾಖೆ ಸಚಿವರಾಗಿದ್ದರೂ ಎಲ್ಲರಿಗೂ ಗೊತ್ತು. ಅಲ್ಲಿನ ವ್ಯವಸ್ಥೆ ಬಗ್ಗೆ ಅಲ್ಪಸ್ವಲ್ಪ ಟೀಕೆ ಬರುತ್ತಲೇ ಇರುತ್ತವೆ. ಇದು ಸಹಜ. ಹೀಗಾಗಿ, ಅಲ್ಲಿನ ವ್ಯವಸ್ಥೆ ಸುಧಾರಿಸಲು ಪ್ರಯತ್ನಿಸುತ್ತಿದ್ದೇನೆ. ತಪ್ಪು ಮಾಡಿದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ್ದೇನೆ ಎಂದು ಸಚಿವ ತಿಮ್ಮಾಪುರ ಹೇಳಿದರು.