ಸಾರಾಂಶ
ಧಾರವಾಡ:
ಕರ್ನಾಟಕ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ರೈತರ ಸಹಭಾಗಿತ್ವದ ನೀರಾವರಿ ಪದ್ಧತಿ ಅನುಷ್ಠಾನಗೊಳಿಸಲು ಕೈಗೊಂಡ ಕ್ರಮಗಳನ್ನು ಗುರುತಿಸಿ, ರಾಜ್ಯದ ಜಲ ಸಂಪನ್ಮೂಲ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಧಾರವಾಡದಲ್ಲಿ ಕೇಂದ್ರ ಕಚೇರಿ ಹೊಂದಿರುವ ಇಲ್ಲಿಯ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ)ಗೆ ವಾಟ್ಸೇವ್ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ, ಅಂತಾರಾಷ್ಟ್ರೀಯ ನೀರಾವರಿ ಮತ್ತು ಕಾಲುವೆ ಆಯೋಗ (ಐಸಿಐಡಿ)ದಿಂದ ಕೊಡಮಾಡುವ ಈ ಪ್ರಶಸ್ತಿಯನ್ನು 9ನೇ ಏಷಿಯನ್ ಪ್ರಾದೇಶಿಕ ಸಮ್ಮೇಳನದಲ್ಲಿ ಸೆ. 3ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸಮ್ಮೇಳನದ ಅಧ್ಯಕ್ಷ ಡಾ. ಮಾರ್ಕೋ ಆರ್ಸಿಯೆರಿ ಅವರಿಂದ ಪ್ರಶಸ್ತಿ ಸ್ವೀಕರಿಸಲಾಯಿತು ಎಂದರು.
ರೈತರ ಸಹಭಾಗಿತ್ವದ ನೀರಾವರಿ ಪದ್ಧತಿ ಕರ್ನಾಟಕದಲ್ಲಿ ವಾಲ್ಮಿ ಸಂಸ್ಥೆಯು ಯಶಸ್ವಿಗೊಳಿಸಿದೆ. ಈ ಪದ್ಧತಿ ಅಡಿಯಲ್ಲಿ ಸಾವಿರಾರು ನೀರು ಬಳಕೆದಾರ ಸಹಕಾರಿ ಸಂಘಗಳನ್ನು ಸ್ಥಾಪಿಸಲಾಗಿದ್ದು, ಅವುಗಳ ಮೂಲಕ ಸಮರ್ಥ, ಸಮಾನ ಮತ್ತು ಸುಸ್ಥಿರ ನೀರಾವರಿಯನ್ನು ಸಾಧಿಸಲಾಗಿದೆ. ಜತೆಗೆ ವಾಲ್ಮಿಯು ನರೇಗಾ ಮೂಲಕ ಕಾಲುವೆ ಸ್ವಚ್ಛತೆ, ಸವಳು-ಜವಳು ನಿರ್ವಹಣೆ, ನೀರು ಬಳಕೆದಾರರ ಸಂಘಗಳ ಪುನಶ್ಚೇತನ, ಉಪಗ್ರಹ ಆಧಾರಿತ ಮೂಲಕ ತರಬೇತಿ ಅಂತಹ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ರೈತರಲ್ಲಿ ವೈಜ್ಞಾನಿಕ ನೀರು ಮತ್ತು ಮಣ್ಣಿನ ನಿರ್ವಹಣೆ ಕಲ್ಪನೆ ಮೂಡಿದೆ ಎಂದರು.ಜಲ ಸಂಕಷ್ಟವು ಬರೀ ಕರ್ನಾಟಕ ಮಾತ್ರವಲ್ಲದೇ ಇಡೀ ಜಗತ್ತಿಗೆ ಇದೆ. ನಮಗೆ ಬೇಕಾದಷ್ಟು ಮಳೆ ಆಗುತ್ತಿದೆ. ದೊಡ್ಡ ದೊಡ್ಡ ಆಣೆಕಟ್ಟುಗಳಿವೆ. ಅಗತ್ಯ ಕಾಲುವೆಗಳು, ಫಲವತ್ತಾದ ಮಣ್ಣು ಹಾಗೂ ದುಡಿಯುವ ರೈತರು ನಮ್ಮಲ್ಲಿ ಇದ್ದಾರೆ. ಇಷ್ಟೆಲ್ಲ ಕೃಷಿ ಹಾಗೂ ನೀರಾವರಿ ವ್ಯವಸ್ಥೆ ಇದ್ದರೂ ಕೃಷಿ ಕ್ಷೇತ್ರವು ಸಂಕಷ್ಟದಲ್ಲಿದೆ. ಇದಕ್ಕೆ ಕಾರಣ ಮಣ್ಣು ಮತ್ತು ನೀರಿನ ನಿರ್ವಹಣೆ ಇಲ್ಲದೇ ಇರುವುದು. ಈ ಕಾರ್ಯವನ್ನು ವಾಲ್ಮಿ ಯಶಸ್ವಿಯಾಗಿ ಮಾಡುತ್ತೆದೆ ಎಂದು ಡಾ. ಪೋದ್ದಾರ ಹೇಳಿದರು.ಸುದ್ದಿಗೋಷ್ಠಿಯಲ್ಲಿ ವಾಲ್ಮೀ ಸಂಸ್ಥೆಯ ಪ್ರಾಧ್ಯಾಪಕರು, ಎಂಜಿನಿಯರ್‌ಗಳು ಇದ್ದರು.