ಬಳ್ಳಾರಿ: ನಾಟಕ, ನೃತ್ಯ ಮತ್ತು ಸಂಗೀತ ಮಾನವ ಜೀವನದ ಭಾವನಾತ್ಮಕ ಮತ್ತು ಸಾಂಸ್ಕೃತಿಕ ವಿಕಾಸದಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಇವು ಮನುಷ್ಯನ ಒಳಗಿನ ಭಾವಗಳಿಗೆ ಜೀವ ತುಂಬುತ್ತವೆ ಎಂದು ಯುವ ಆಧ್ಯಾತ್ಮಿಕ ಚಿಂತಕ ಎಂ. ಚಂದ್ರಶೇಖರಗೌಡ ಮಸೀದಿಪುರ ಅವರು ತಿಳಿಸಿದರು.

ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ನೇತ್ರ ಕಲಾ ಸಂಘದ 15ನೇ ವಾರ್ಷಿಕೋತ್ಸವ ಹಾಗೂ ವಿವಿಧ ಸಾಧಕರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ಪೂರ್ವಜರು ಈ ನೆಲೆದಲ್ಲಿ ಮೌಲ್ಯಗಳು, ಜ್ಞಾನ ಮತ್ತು ಧೈರ್ಯವನ್ನು ಬಿತ್ತಿದ್ದಾರೆ. ಆದ್ದರಿಂದ ಈ ನೆಲ ಸಾಧನೆಗೆ ದಾರಿ ತೋರಿಸುವ ಪ್ರೇರಣೆಯ ಮೂಲವಾಗಿದೆ. ಯಾರು ಈ ನೆಲದ ಮಹತ್ವವನ್ನು ಅರಿತು ಪರಿಶ್ರಮಿಸುತ್ತಾರೋ ಅವರು ಜೀವನದಲ್ಲಿ ಯಶಸ್ಸು ಕಾಣುತ್ತಾರೆ. ಈ ನೆಲದಲ್ಲಿನ ಪರಿಶ್ರಮ, ಸಂಸ್ಕೃತಿ ಮತ್ತು ಪ್ರೇರಣೆಯನ್ನು ಅರಿತುಕೊಂಡಾಗಲೇ ಮಾನವನಿಗೆ ಸಾಧನೆಯ ದಾರಿ ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು. ಇದೇ ವೇಳೆ ನೇತ್ರ ಕಲಾ ಸಂಘದ ಸೇವೆಯನ್ನು ಸ್ಮರಿಸಿದ ಎಂ. ಚಂದ್ರಶೇಖರಗೌಡ ಅವರು, ಒಂದೂವರೆ ದಶಕದಿಂದ ನಿರಂತರ ಸಾಂಸ್ಕೃತಿಕ ಸಾಮಾಜಿಕ ಬೀದಿ ನಾಟಕಗಳ ಮೂಲಕ ಜನಜಾಗೃತಿ ಸೇವೆಯನ್ನು ಮಾಡುತ್ತಿರುವ ಸಂಘದ ಕೊಡುಗೆ ಸ್ಮರಣೀಯವಾದದ್ದು. ಸಮಾಜದ ಬೆಳವಣಿಗೆಗೆ ಅನೇಕರು ತೆರೆಮರೆಯಲ್ಲಿದ್ದು ಶ್ರಮಿಸುತ್ತಿರುತ್ತಾರೆ. ಅಂತಹ ಮಹನೀಯರನ್ನು ಗುರುತಿಸಿ ಅವರಿಗೆ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸುತ್ತಿರುವುದು ನಿಜಕ್ಕೂ ಸಾರ್ಥಕವಾದ ಕೆಲಸ. ಸಮಾಜದ ಪ್ರಗತಿಗೆ ಯಾವುದೇ ಸ್ವಾರ್ಥವಿಲ್ಲದೆ ದುಡಿಯುವವರನ್ನು ಸ್ಮರಿಸುವುದು ನಮ್ಮ ಕರ್ತವ್ಯವೂ ಹೌದು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೇಯರ್ ಪಿ. ಗಾದೆಪ್ಪ ಮಾತನಾಡಿ, ಬಳ್ಳಾರಿ ಕಲಾವಿದರ ಜಿಲ್ಲೆಯಾಗಿದೆ. ಇಲ್ಲಿನ ಕಲಾವಿದರು ದೇಶ-ವಿದೇಶದಲ್ಲಿ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಜಿಲ್ಲೆಯ ಅನೇಕ ಕಲಾ ಸಂಸ್ಥೆಗಳು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ಅಭಿನಂದನೀಯ. ಕಲಾವಿದರಿಗೆ ಬೇಕಾದ ನೆರವು ನೀಡಲು ನಾನು ಸಿದ್ಧನಿದ್ದೇನೆ. ಕಲಾ ಸಂಸ್ಥೆಗಳನ್ನು ಪ್ರೋತ್ಸಾಹಿಸಲು ಮಹಾನಗರ ಪಾಲಿಕೆಯಿಂದ ಸಹ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ಚಿಕ್ಕುಂತಿ ಮಹಾಮಠದ ಬಸವಲಿಂಗ ಶಿವಮೂರ್ತಿ ಮಹಾಸ್ವಾಮಿಗಳು ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎ. ಮಾನಯ್ಯ, ಹಿರಿಯ ಸಾಹಿತಿ ಗಂಗಾಧರ್ ಪತ್ತಾರ, ನೇತ್ರಕಲಾ ಸಂಘದ ಅಧ್ಯಕ್ಷ ದಳವಾಯಿ ಈರಣ್ಣ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರ ಬಂಡೆ, ರಂಗ ತೋರಣ ಮುಖ್ಯಸ್ಥ ಪ್ರಭುದೇವ ಕಪ್ಪಗಲ್, ಕೊರಲಗುಂದಿ ಬಸವನಗೌಡ, ಕಲಾಸಂಘದ ಕಾರ್ಯದರ್ಶಿ ವೀರೇಶ ದಳವಾಯಿ, ದೊಡ್ಡ ಹುಸೇನಪ್ಪ, ತೊಗಲಗೊಂಬೆ ಕಲಾವಿದ ಸುಬ್ಬಣ್ಣ, ರಂಗಭೂಮಿ ಕಲಾವಿದ ಮುದ್ದಟನೂರು ಎಚ್. ತಿಪ್ಪೇಸ್ವಾಮ ಹಾಗೂ ಸುಂಕಪ್ಪ ಯರಗುಡಿ ಉಪಸ್ಥಿತರಿದ್ದರು.ಸೌಮ್ಯ, ಎರ್ರಿಸ್ವಾಮಿ ಹಾಗೂ ಹನುಮಯ್ಯ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಕಲಾ ತಂಡಗಳು ಹಾಗೂ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 86 ಮಹನೀಯರಿಗೆ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.