ಬಾಳೆಹೊನ್ನೂರು: ಪ್ರತಿಯೊಬ್ಬ ದಲಿತ ಮಕ್ಕಳು ಶಿಕ್ಷಣವಂತರಾದಾಗ ಮಾತ್ರ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.ಖಾಂಡ್ಯ ಹೋಬಳಿತ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಅಂಬೇಡ್ಕರ್ ಅವರ ಆಶಯ. ಈ ನಿಟ್ಟಿನಲ್ಲಿ ದಲಿತ ಸಂಘಗಳು ಹುಟ್ಟಿಕೊಂಡು ಕಾರ್ಯಪ್ರವೃತ್ತರಾಗಿದ್ದು ಸರಿಯಷ್ಟೆ. ಆದರೆ ಇಂದು ಸಂಘನೆಗಳೊಳಗೆ ರಾಜಕೀಯ ನುಸುಳಿ ಸಂಘಟನೆ ಮೂಲ ಧ್ಯೇಯ ಮತ್ತು ಧೋರಣೆಗೆ ಕೊಡಲಿ ಪೆಟ್ಟು ಬಿದ್ದಿದೆ.

ಸಂಘಟನೆಗಳು ಒಡೆದು ಹೋಳಾಗುತ್ತಿರುವುದು ದೊಡ್ಡ ದುರಂತ. ನಮ್ಮ ಮಕ್ಕಳು ಶಿಕ್ಷಣವಂತರಾಗಿ ಇತಿಹಾಸವನ್ನು ಅರ್ಥ ಮಾಡಿಕೊಂಡು ಸಂಘಟನೆಯ ವಿಚಾರ ಬಂದಾಗ ರಾಜಕೀಯವನ್ನು ಬದಿಗೊತ್ತಿ ಸಂಘಟಿತರಾಗಿ ಹೋರಾಟ ಮಾಡಿ ಹಕ್ಕುಗಳನ್ನು ಗಳಿಸಲು ಮುಂದಾಗಬೇಕು ಎಂದರು.ಸಿಪಿಐ ಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿ, ರಾಜ್ಯದಲ್ಲಿ ಸಂವಿಧಾನ ಪೀಠಿಕೆಯನ್ನು ಪಠಣ ಮಾಡಿಸಿರುವುದು ಸ್ವಾಗತಾರ್ಹ. ಅದೇ ರೀತಿ ಅದರ ತತ್ವ, ಸಿದ್ಧಾಂತಗಳನ್ನು ಜಾರಿಗೊಳಿಸಬೇಕು. ಇಲ್ಲದಿದ್ದಲ್ಲಿ ಇದು ಕೇವಲ ರಾಜಕೀಯ ಪ್ರೇರಿತವಾಗುತ್ತದೆ. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನತೆ ಹಕ್ಕು ಕಲ್ಲಿಸಲಾಗಿದೆ. ಆದರೆ ಇಂದಿನವರಿಗೂ ಜಾರಿಯಾಗಿಲ್ಲ. ಸಮಾನತೆ ಹಕ್ಕನ್ನು ಜಾರಿಗೊಳಿಸಿದಲ್ಲಿ ಇಂದು ಮೀಸಲಾತಿ ವ್ಯವಸ್ಥೆ ಅಗತ್ಯವಿರಲಿಲ್ಲ. ಆದರೆ ಸಮಾನತೆ ಬಗ್ಗೆ ಯಾವ ಸರ್ಕಾರಗಳು ಮುಂದಾಗಲಿಲ್ಲ. ಮೀಸಲಾತಿ ಕೇವಲ ಶಿಕ್ಷಣ, ಉದ್ಯೋಗ ಮತ್ತು ರಾಜಕಾರಣಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಇದರಿಂದ ಸಮಾನತೆ ಸಾಧಿಸಲು ಸಾಧ್ಯವಿಲ್ಲ. ಬದಲಾಗಿ ಭೂಮಿ ಹಕ್ಕು ಸಿಗಬೇಕು. ಆಗ ಹಸಿವು, ಬಡತನ ಮತ್ತು ನಿರುದ್ಯೋಗ ಸಮಸ್ಯೆ ತನ್ನಷ್ಟಕ್ಕೆ ನಿವಾರಣೆಯಾಗುತ್ತದೆ. ದೇಶ ಶ್ರೀಮಂತವಾಗುತ್ತದೆ ಎಂದರು.ಚಲನಚಿತ್ರ ನಟ ಕಾಫಿ ಗಿರೀಶ್ ಮಾತನಾಡಿ, ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ಮಾತ್ರ ಗಣ್ಯರೆಲ್ಲ ವೇದಿಕೆ ಮೇಲೆ ಕುಳಿತು ಅಂಬೇಡ್ಕರ್ ಗುಣಗಾನ ಮಾಡುತ್ತೇವೆ. ಆದರೆ ಅಸ್ಪೃಶ್ಯತೆ ಮತ್ತು ಜಾತಿ ಪದ್ಧತಿ ತೊಲಗಬೇಕಿದೆ ಎಂದು ಹೇಳು ತ್ತೇವೆ. ಆದರೆ ಕಾರ್ಯಕ್ರಮದ ನಂತರ ಜಾತಿ ಪದ್ಧತಿ ಆಚರಣೆ ಮಾಡುತ್ತೇವೆ. ವೇದಿಕೆಗಳಲ್ಲಿ ಭಾಷಣ ಮಾಡುವ ನಾವುಗಳು ನಮ್ಮ ಮನೆಯಿಂದಲೇ ಜಾತಿ ನಿರ್ಮೂಲನೆಗೆ ಮುಂದಾಗಬೇಕಿದೆ. ನಮ್ಮ ಮಕ್ಕಳಿಗೂ ಅದನ್ನು ಕಲಿಸಬೇಕಿದೆ ಎಂದರು. ಹಿರಿಯರಾದ ಬಿ.ಎಸ್.ಮಾರ್ಕಾಂಡೇಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಿಎಸ್‌ಎಸ್ ಅಧ್ಯಕ್ಷ ಬಿ.ಕೆ.ರಮೇಶ್, ಪ್ರಮುಖರಾದ ನವರಾಜ್, ಸಂಪತ್ ಮಾಗಲು, ಸುರೇಶ್ ಬಿದರೆ, ಕೃಷ್ಣಮೂರ್ತಿ ಕಡವಂತಿ, ಅಜಗಯ್ಯ, ಶೀಲಾವತಿ, ಬಿ.ಸಿ.ಗುರುಮೂರ್ತಿ, ಲಕ್ಷ್ಮಿ, ಗಿರೀಶ್, ಉಮೇಶ್, ಸುಂದರೇಶ್, ಪೂರ್ಣೇಶ್, ಹರೀಶ್, ರಾಘವೇಂದ್ರ ಮತ್ತಿತರರು ಹಾಜರಿದ್ದರು.೧೮ಬಿಹೆಚ್‌ಆರ್ ೧: ಬಾಳೆಹೊನ್ನೂರು ಸಮೀಪದ ಖಾಂಡ್ಯ ಹೋಬಳಿ ಡಿಎಸ್‌ಎಸ್ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಸಿಪಿಐ ಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿದರು.