ಸರ್ಕಾರಿ ಶಾಲೆಗಳಿಗೆ ದುರಸ್ತಿ ಭಾಗ್ಯ ಯಾವಾಗ?

| Published : May 17 2024, 12:34 AM IST

ಸಾರಾಂಶ

ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ವಿದ್ಯಾರ್ಥಿಗಳು ಶಾಲೆಗಳತ್ತ ಹೆಜ್ಜೆ ಹಾಕಲು ಅಣಿಯಾಗಿದ್ದಾರೆ. ಇನ್ನೇನು ಮಳೆಗಾಲ ಸಹಿತ ಪ್ರಾರಂಭಗೊಳ್ಳಲಿದೆ. ಹೀಗಾಗಿ ತಾಲೂಕಿನಲ್ಲಿ ಅರ್ಧಕ್ಕೂ ಅಧಿಕ ಶಾಲೆಗಳು ದುರಸ್ತಿ ಹಂತದಲ್ಲಿವೆ. ಹೀಗಾಗಿ ಶಿಕ್ಷಣ ಇಲಾಖೆ ಶಾಲೆ ಆರಂಭಕ್ಕೂ ಮುನ್ನ ಎಚ್ಚೆತ್ತುಕೊಂಡು ಶಾಲೆಗಳ ದುರಸ್ತಿ ಮಾಡಿಸಿದರೇ ಮುಂದೆ ಸಂಭವಿಸಬಹುದಾದ ಅನಾಹುತಗಳಿಂದ ಪಾರಾಗಬಹುದಾಗಿದೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ವಿದ್ಯಾರ್ಥಿಗಳು ಶಾಲೆಗಳತ್ತ ಹೆಜ್ಜೆ ಹಾಕಲು ಅಣಿಯಾಗಿದ್ದಾರೆ. ಇನ್ನೇನು ಮಳೆಗಾಲ ಸಹಿತ ಪ್ರಾರಂಭಗೊಳ್ಳಲಿದೆ. ಹೀಗಾಗಿ ತಾಲೂಕಿನಲ್ಲಿ ಅರ್ಧಕ್ಕೂ ಅಧಿಕ ಶಾಲೆಗಳು ದುರಸ್ತಿ ಹಂತದಲ್ಲಿವೆ. ಹೀಗಾಗಿ ಶಿಕ್ಷಣ ಇಲಾಖೆ ಶಾಲೆ ಆರಂಭಕ್ಕೂ ಮುನ್ನ ಎಚ್ಚೆತ್ತುಕೊಂಡು ಶಾಲೆಗಳ ದುರಸ್ತಿ ಮಾಡಿಸಿದರೇ ಮುಂದೆ ಸಂಭವಿಸಬಹುದಾದ ಅನಾಹುತಗಳಿಂದ ಪಾರಾಗಬಹುದಾಗಿದೆ. ಜೂನ್‌ ತಿಂಗಳು ಬಂದರೆ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಜತೆಗೆ ಮಳೆಗಾಲ ಕೂಡ ಶುರುವಾಗುತ್ತದೆ. ಮಳೆಗಾಲ ಬಂದರೆ ಖುಷಿಯಲ್ಲಿ ಇರಬೇಕಾದ ಮಕ್ಕಳು, ಪೋಷಕರಿಗೆ ದುಗುಡ ಆರಂಭವಾಗುತ್ತದೆ. ಶಿಥಿಲಗೊಂಡ ಶಾಲೆಗಳು, ಚಾವಣಿಯಿಂದ ಮಳೆನೀರು ಸೋರುವ ಭೀತಿ ಎದುರಾಗಿದೆ. ಜತೆಗೆ ಶಾಲೆಗಳು, ಶಾಲಾ ರಸ್ತೆಗಳು ತೆಗ್ಗು ಗುಂಡಿಗಳಿಂದ ಕೂಡಿದ್ದರಿಂದ ಮಕ್ಕಳಿಗೆ ಅಪಾಯವಾಗುತ್ತದೆ ಏನೋ ಎಂಬ ಭೀತಿ ಕೂಡ ಪಾಲಕರನ್ನು ಕಾಡುತ್ತಿದೆ. ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ, ದಾಖಲಾತಿ ಅಂದೋಲನ ಎಂದೆಲ್ಲ ದುಡಿಯುತ್ತಿರುವ ಶಿಕ್ಷಣ ಇಲಾಖೆ, ಸ್‌ಕಾರಿ ಶಾಲಾ ಕೊಠಡಿಗಳ ದುರಸ್ತಿ ಕಾರ್ಯವನ್ನೇ ಮರೆತಿದೆ. ತಾಲೂಕಿನಲ್ಲಿ 50ಕ್ಕೂ ಹೆಚ್ಚು ಶಾಲಾ ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. ಈವರೆಗೂ ದುರಸ್ತಿ ಭಾಗ್ಯವನ್ನೇ ಕಾಣದಂತಾಗಿದೆ.

ಮೇಜರ್ ಸರ್ಜರಿಗೆ ಕಾದಿವೆ:

ಇಂಡಿ ತಾಲೂಕಿನಲ್ಲಿ 278 ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿದ್ದು, ಅದರಲ್ಲಿ 18 ಸರ್ಕಾರಿ ಪ್ರೌಢಶಾಲೆಗಳಿವೆ. ಇದರಲ್ಲಿ 30ಕ್ಕೂ ಹೆಚ್ಚು ಶಾಲಾ ಕೋಣೆಗಳು ಮೇಜರ್ ರಿಪೇರಿ ಆಗಬೇಕಾಗಿದ್ದು, 20ಕ್ಕೂ ಹೆಚ್ಚು ಕೊಠಡಿಗಳು ಅಲ್ಪ ಪ್ರಮಾಣದ ರಿಪೇರಿ ಆಗಬೇಕಿದೆ. ಹೀಗಾಗಿ ಇಷ್ಟು ಶಾಲೆಗಳಲ್ಲಿ ಓದುವ ಮಕ್ಕಳು ಜೀವ ಕೈಯಲ್ಲಿ ಹಿಡಿದುಕೊಂಡು ಓದಬೇಕಾದ ಪರಿಸ್ಥಿತಿ ಉಂಟಾಗಿದೆ.

ಉಳಿದ ಶಾಲೆಗಳಿಗೂ ಅನುದಾನ ನೀಡಲಿ:

ಪ್ರತಿವರ್ಷ ಶೈಕ್ಷಣಿಕ ಪ್ರಗತಿಗೆ ಸಾಕಷ್ಟು ಅನುದಾನ ನೀಡಲಾಗುತ್ತದೆ ಎಂದು ಹೇಳುವ ಸರ್ಕಾರಗಳು, ವಸತಿ ಶಾಲೆಯಲ್ಲಿ ಕಲಿತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ರಾಜ್ಯದ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿನಿ ಕಲಿತ ವಸತಿ ಶಾಲೆ ಅಭಿವೃದ್ದಿಗೆ ₹1 ಕೋಟಿ ಅನುದಾನ ನೀಡಲು ಘೋಷಣೆ ಮಾಡಿದ ಮುಖ್ಯಮಂತ್ರಿಗಳು ಉತ್ತೇಜನ ನೀಡಿದ್ದಾರೆ. ಮರಾಠಿ ಭಾಷೆಯನ್ನು ಲೆಕ್ಕಿಸದೇ ಗಡಿಭಾಗದಲ್ಲಿ ಕನ್ನಡ ಭಾಷೆ ಬೆಳೆಸುತ್ತಿರುವ ಇಂಡಿ ತಾಲೂಕಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಅಗತ್ಯವಾಗಿ ಬೇಕಿದೆ.

ಶಿಕ್ಷಣ ಇಲಾಖೆ ನಿರ್ಲಕ್ಷ್ಯ:

ತಾಲೂಕಿನಲ್ಲಿ ಮೇಜರ್‌ 50 ಕೊಠಡಿಗಳಲ್ಲಿ ದುರಸ್ತಿ ಕೆಲಸ ಬೇಗ ನಡೆಯಬೇಕಿದೆ. ಈ ಶಾಲಾ ಕೋಣೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಚಾವಣಿ ಸಹ ಉದುರುತ್ತಿದೆ. ಕೆಲವೊಂದು ಕೋಣೆಗಳು ಕುಸಿಯುವ ಹಂತ ತಲುಪಿದ್ದು, ಮಕ್ಕಳ ಜೀವದ ಜತೆ ಶಿಕ್ಷಣ ಇಲಾಖೆ ಚೆಲ್ಲಾಟವಾಡುವ ಸ್ಥಿತಿ ನಿರ್ಮಾಣವಾಗಿದೆ. ಸಣ್ಣಪುಟ್ಟ ದುರಸ್ತಿಯಾಗಬೇಕಾದ 20 ಕೋಣೆಗಳೂ ಸಹ ಪಾಠ ಬೋಧನೆಗೆ ಅನುಕೂಲವಾದ ಸ್ಥಿತಿಯಲ್ಲಿ ಇಲ್ಲದಂತಾಗಿವೆ.

ಶೌಚಾಲಯ ಇದ್ದರೂ ನೀರಿಲ್ಲ:

ತಾಲೂಕಿನ 278 ಶಾಲೆಗಳಲ್ಲಿ 100ಕ್ಕೂ ಹೆಚ್ಚು ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯ ಸೌಲಭ್ಯವಿಲ್ಲ. ಶೌಚಾಲಯ ಇದ್ದರೂ ನೀರಿನ ಕೊರತೆಯಿಂದ ಶೌಚಾಲಯಗಳಿಗೆ ಸದಾ ಕೀಲಿ ಹಾಕಲಾಗುತ್ತದೆ. ಇನ್ನೂ ಕೆಲವು ಶಾಲೆಗಳಿಗೆ ಗ್ರಂಥಾಲಯ ಮತ್ತು ಕೆಲವು ಶಾಲೆಗಳಿಗೆ ಆಟದ ಮೈದಾನ ವ್ಯವಸ್ಥೆ ಮಾಡಬೇಕಾಗಿದೆ. ಇನ್ನೂ ಕೆಲವೊಂದು ಶಾಲೆಗಳಲ್ಲಿ ಮಳೆ ಬಂದರೆ ಆಟದ ಮೈದಾನದಲ್ಲಿ ನೀರು ನಿಲ್ಲುತ್ತದೆ. ತಾಲೂಕಿನ ಎಲ್ಲ ಶಾಲೆಗಳಲ್ಲಿ ಕಂಡು ಬರುವ ಸಮಸ್ಯೆಗಳನ್ನು ಬಗೆ ಹರಿಸಿ,ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕಾಗಿರುವುದು ಅವಶ್ಯಕ ಇದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.

---

ಬಾಕ್ಸ್‌

ಜೀವ ಭಯದಲ್ಲೇ ಬೋಧನೆ

ಒಂದೆಡೆ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ಲಭಿಸುತ್ತಿದ್ದರೂ, ಮಕ್ಕಳ ಪಾಠ ಬೋಧನೆಗೆ ಕೋಣೆಗಳು ಇಲ್ಲದಂತಾಗಿದೆ. ಹೀಗಾಗಿ ಇರುವ ಶಿಥಿಲ ಕೋಣೆಗಳಲ್ಲಿಯೇ ಮಕ್ಕಳು ಶಿಕ್ಷಣ ಪಡೆಯಬೇಕಾಗಿದೆ. ಮಳೆ ಬಂದರೆ ಯಾವ ಸಮಯದಲ್ಲಾದರೂ ಚಾವಣಿ ಕುಸಿದು ಮಕ್ಕಳಿಗೆ ಅಪಾಯವಾಗುತ್ತದೆಯೇನೋ ಎಂಬ ಭಯದಲ್ಲಿ ಶಿಕ್ಷಕರು ಪಾಠ ಬೋಧನೆ ಮಾಡುವ ವಾತಾವರಣ ಇದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಪ್ರಸಕ್ತ ವರ್ಷ ಶೈಕ್ಷಣಿಕ ವರ್ಷ ಆರಂಭಗೊಳ್ಳುವುದಕ್ಕಿಂತ ಮುಂಚೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಗುಣವಾಗಿ ಕೋಣೆಗಳು ಒದಗಿಸಲು ಕ್ರಮ ಕೈಗೊಳ್ಳಬೇಕು. ದುರಸ್ತಿ ಮಾಡಬೇಕಾದ ಕೋಣೆಗಳು ದುರಸ್ತಿಗೆ ಕಾಳಜಿ ವಹಿಸಬೇಕು ಎಂಬುದು ಪಾಲಕರ ಆಗ್ರಹವಾಗಿದೆ.

---

ಬಾಕ್ಸ್‌

ಶಾಲೆಗಳು ದುರಸ್ತಿಯಲ್ಲಿವೆಯೇ? ಸಂರ್ಪಕಿಸಿ...

ನಿಮ್ಮೂರಲ್ಲಿ ಇರುವ ಶಾಲೆಗಳು ಸಹಿತ ದುರಸ್ತಿ ಇದ್ದರೆ, ವಿದ್ಯಾರ್ಥಿಗಳ ತೀವ್ರ ತೊಂದರೆ ಆಗುತ್ತಿದ್ದರೆ ಕನ್ನಡಪ್ರಭ ಜಿಲ್ಲಾ ವರದಿಗಾರರ ಮೊ.ನಂ. 9986878952(ಶಶಿಕಾಂತ ಮೆಂಡೆಗಾರ) ಇವರನ್ನು ಸಂಪರ್ಕಿಸಿ ಮಾಹಿತಿ ಅಥವಾ ಇ-ಮೇಲ್‌ ಐಡಿ ( kannadaprabhavijaypur@gmail.com) ಮೇಲ್‌ ಮಾಡಿ. ಕನ್ನಡ ಶಾಲೆ ಉಳಿಸಿ ಬೆಳೆಸುವುದೇ ನಮ್ಮ ಉದ್ದೇಶ.

--

ಕೋಟ್‌

ಇಂಡಿ ಶೈಕ್ಷಣಿಕ ವಲಯದಲ್ಲಿ ಬರುವ ಸರ್ಕಾರಿ ಶಾಲೆಗಳಲ್ಲಿನ ಕೋಣೆಗಳು ಶಿಥಿಲಗೊಂಡಿರುವ ಹಾಗೂ ಭಾಗಶ ಶಿಥಿಲಗೊಂಡಿರುವ ಶಾಲೆಗಳ ದುರಸ್ತಿ ಮಾಡುವ ಪಟ್ಟಿಯನ್ನು ತಯಾರಿಸಿ ತಾಲೂಕು ಪಂಚಾಯಿತಿ ಮುಖಾಂತರ ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಬಂದಿರುವುದರಿಂದ ಪ್ರಕ್ರಿಯೇ ಅಲ್ಲಿಗೆ ನಿಂತಿದೆ. ನೀತಿ ಸಂಹಿ ಮುಗಿದ ಮೇಲೆ ಮೇಲಧಿಕಾರಿಗಳ ಮೂಲಕ ಮತ್ತೊಮ್ಮೆ ಜಿಲ್ಲಾ ಪಂಚಾಯಿತಿಗೆ ಪತ್ರ ಬರೆಯಲಾಗುತ್ತದೆ.

-ಟಿ.ಎಸ್‌.ಆಲಗೂರ,ಬಿಇಒ,ಇಂಡಿ.

----

ಗಡಿಭಾಗದ ಕನ್ನಡ ಶಾಲೆಗಳ ಅಭಿವೃದ್ದಿಗೆ ಸರ್ಕಾರಗಳು ವಿಶೇಷ ಪ್ಯಾಕೇಜ್‌ ಪ್ರತಿ ಬಜೆಟ್‌ನಲ್ಲಿ ಮೀಸಲಿಡಬೇಕು. ಪ್ರತಿ ವರ್ಷ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನ ಶಾಲೆಗಳ ಕೋಣೆಗಳು ದುರಸ್ತಿಗೊಳಿಸುವ,ಅಂದಗೊಳಿಸುವುದಕ್ಕಾಗಿ ಅನುಧಾನ ಮೀಸಲಿಡಬೇಕು.

-ಬಾಳು ಮುಳಜಿ, ಕರವೇ ತಾಲೂಕು ಅಧ್ಯಕ್ಷ, ಇಂಡಿ.