ಸಾರಾಂಶ
ಹೊಸ ಮೈಷುಗರ್ ಕಾರ್ಖಾನೆ ನಿರ್ಮಿಸುವ ಶಾಸಕ ಪಿ.ರವಿಕುಮಾರ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಅವರು, ಮೈಷುಗರ್ ಕಾರ್ಖಾನೆ ಅನ್ನೋದು ಜಿಲ್ಲೆಯ ಆಸ್ತಿ. ಅದನ್ನ ಧ್ವಂಸ ಮಾಡಿ ಸ್ವಾರ್ಥ, ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡಬೇಡಿ. ಮೈಷುಗರ್ ತಮಾಷೆಯ ವಿಷಯ ಅಲ್ಲ.
ಕನ್ನಡಪ್ರಭ ವಾರ್ತೆ ಮಂಡ್ಯ
ಮೈಷುಗರ್ ಕಾರ್ಖಾನೆ ವಿಚಾರಕ್ಕೆ ಬಂದರೆ ನಾನು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಹೋರಾಟ ಮಾಡುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಎಚ್ಚರಿಕೆ ನೀಡಿದರು.ಹೊಸ ಮೈಷುಗರ್ ಕಾರ್ಖಾನೆ ನಿರ್ಮಿಸುವ ಶಾಸಕ ಪಿ.ರವಿಕುಮಾರ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಅವರು, ಮೈಷುಗರ್ ಕಾರ್ಖಾನೆ ಅನ್ನೋದು ಜಿಲ್ಲೆಯ ಆಸ್ತಿ. ಅದನ್ನ ಧ್ವಂಸ ಮಾಡಿ ಸ್ವಾರ್ಥ, ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡಬೇಡಿ. ಮೈಷುಗರ್ ತಮಾಷೆಯ ವಿಷಯ ಅಲ್ಲ. ಕಾರ್ಖಾನೆ ವಿಷಯಕ್ಕೆ ಬಂದರೆ ಅಧಿಕಾರದಲ್ಲಿ ಇದ್ದರೂ, ಇಲ್ಲದಿದ್ದರೂ ಹೋರಾಟ ಮಾಡುವೆ. ಹೋರಾಟವನ್ನು ನಾನೇ ಮಾಡಬೇಕು ಅಂತೇನಿಲ್ಲ, ಜನರೇ ಹೋರಾಟ ಮಾಡುತ್ತಾರೆ ಎಂದು ತಿಳಿಸಿದರು.
ಶಾಸಕರು ಹೇಳುತ್ತಿರುವ ಸಾಫ್ಟ್‌ವೇರ್ ಪಾರ್ಕ್ ಕೇವಲ ಮಾತಾಗಿ ಉಳಿಯುವುದೇ ವಿನಃ ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ. ಮೈಷುಗರ್ ಕಾರ್ಖಾನೆ ಜಾಗದಲ್ಲಿ ಮಾಡುವ ಬದಲು ಬೇರೆ ಜಾಗದಲ್ಲಿ ಮಾಡಲಿ. ಅದನ್ನು ನಾನೂ ಸ್ವಾಗತಿಸುತ್ತೇನೆ ಎಂದ ಅವರು, ಐಟಿಯಲ್ಲಿ ಟ್ರೈನಿಂಗ್ ಆಗಿರುವವರಿಗೆ ಮಾತ್ರ ಕೆಲಸ ಕೊಡುವುದು. ಬೆಂಗಳೂರು ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಬಹುತೇಕರು ಹೊರಗಿನವರು. ಮಂಡ್ಯದವರಿಗೆ ಕೆಲಸ ಕೊಡುತ್ತಾರೆ ಎನ್ನುವ ಗ್ಯಾರಂಟಿ ಏನು. ಶಾಸಕರಿಗೆ ಮಾಹಿತಿ ಕೊರತೆ ಇದೆ. ದೊಡ್ಡದಾಗಿ ಪ್ರಚಾರ ಮಾಡಿ ಹೆಸರು ತೆಗೆದುಕೊಳ್ಳಬೇಕೆಂಬ ಆಸೆ ಅವರಲ್ಲಿದೆ. ಅಧಿಕಾರ ಇವತ್ತು ಇರುತ್ತೆ. ನಾಳೆ ಹೋಗುತ್ತೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಆದರೆ, ನಮ್ಮ ಅವಧಿಯಲ್ಲಿ ಜನವಿರೋಧಿ ತೀರ್ಮಾನಗಳಾಗಬಾರದು ಅಷ್ಟೇ ಎಂದು ಹೇಳಿದರು.