ಕನ್ನಡಪ್ರಭ ವಾರ್ತೆ ಕಾಗವಾಡ
ಹಲವು ಮುಖ್ಯಮಂತ್ರಿಗಳ ಸಂಪುಟದಲ್ಲಿ ಸಚಿವರಾಗಿದ್ದ ನಮ್ಮ ತಂದೆ ಸತೀಶ್ ಜಾರಕಿಹೊಳಿ ಅವರಿಗೆ ರಾಜ್ಯದ ಜನತೆ ಯಾವಾಗ ಆಶೀರ್ವಾದ ಮಾಡುತ್ತಾರೆಯೋ ಆಗ ಮುಖ್ಯಮಂತ್ರಿ ಆಗುತ್ತಾರೆ ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.ಉಗಾರ, ಹುಲಗಬಾಳಿ, ಮುರಗುಂಡಿ, ಬಡಚಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಆಗುವ ಕುರಿತಂತೆ ಹಲವು ಬಾರಿ ನಮ್ಮ ತಂದೆ ಇಂಗಿತ ವ್ಯಕ್ತಪಡಿಸಿದ್ದಾರೆ. 2028ಕ್ಕೆ ಹಕ್ಕು ಮಂಡಿಸುವುದಾಗಿಯೂ ಹೇಳಿದ್ದಾರೆ. ಹೀಗಾಗಿ, ಜನರು ಯಾವಾಗ ಆಶೀರ್ವಾದ ಮಾಡುತ್ತಾರೋ ಆಗ ಸಿಎಂ ಆಗುತ್ತಾರೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಡಿಕೆಶಿ ಸೇರಿದಂತೆ ಮಂತ್ರಿ ಮಂಡಲದ ಸದಸ್ಯರೊಂದಿಗೆ ದೆಹಲಿಗೆ ಹೋಗಿದ್ದರು. ಎಲ್ಲರೂ ತಮ್ಮ ಬಯಕೆಗಳನ್ನು ಹೈ ಕಮಾಂಡ್ ಮುಂದೆ ಹೇಳಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿದ್ದಾರೆ. ಯಾವ ಖಾತೆ ಹೈಕಮಾಂಡ್ ನೀಡಿದೆ ಅದನ್ನ ನಿರ್ವಹಿಸುತ್ತಿದ್ದಾರೆ ಅಷ್ಟೇ. ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಅವರು, ಒಳ್ಳೆಯ ಆಡಳಿತ ನೀಡುತ್ತಾರೆ.ಜನರ ಬಯಕೆಗಳ ಈಡೇರಿಸುವ ಕೆಲಸ ಸರ್ಕಾರದಿಂದ ಆಗುತ್ತದೆ. ಸತೀಶ್ ಜಾರಕಿಹೊಳಿ ಲೋಕೋಪಯೋಗಿ ಸಚಿವರಾಗಿ ಮುಂದುವರೆಯುತ್ತಾರೆ. ಸಮಯ ಬಂದಾಗ ಕಾಲಕ್ಕೆ ತಕ್ಕಂತೆ ಹೋಗಬೇಕಾಗುತ್ತೆ ಎಂದರು.ಈ ವೇಳೆ ಬಿಇಒ ಎಂ.ಆರ್.ಮುಂಜೆ, ಕಾಂಗ್ರೆಸ್ ಧುರಿಣರಾದ ರಮೇಶ್ ಸಿಂದಗಿ, ಗಜಾನನ ಮಂಗಸೂಳಿ, ರಾವಸಾಹೇಬ್ ಐಹೊಳೆ, ತೌಶೀಫ ಸಾಂಗ್ಲಿಕರ, ಆಸೀಫ, ಸುನಿತಾ ಐಹೊಳೆ, ರೇಖಾ ಪಾಟೀಲ, ಮುಖ್ಯೋಪಾಧ್ಯಾಯ ರವೀಂದ್ರ ಕಡಾಕಡಿ, ಎಸ್ಡಿಎಂಸಿ ಉಪಾಧ್ಯಕ್ಷ ರವಿ ಶೇಷಗೋಳ, ಲೋಕೋಪಯೋಗಿ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಮಗದುಮ್, ಜಿಪಂ ವೀರಣ್ಣ ವಾಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿವೇಕ್ ಮಠ ಸೇರಿ ಇತರರು ಇದ್ದರು.