ಧರ್ಮದ ಸಾರವನ್ನು ಅರ್ಥ ಮಾಡಿಕೊಂಡಾಗ ಮನುಷ್ಯ ಮನುಷ್ಯನ ನಡುವೆ ಭೇದ ಹುಟ್ಟಲು ಸಾಧ್ಯವಿಲ್ಲ ಎಂದು ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಲೋಹಿತ್ ಎಸ್.ಕೆ. ಹೇಳಿದರು.
ಪುತ್ತೂರು : ಧರ್ಮದ ಸಾರವನ್ನು ಅರ್ಥ ಮಾಡಿಕೊಂಡಾಗ ಮನುಷ್ಯ ಮನುಷ್ಯನ ನಡುವೆ ಭೇದ ಹುಟ್ಟಲು ಸಾಧ್ಯವಿಲ್ಲ ಎಂದು ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಲೋಹಿತ್ ಎಸ್.ಕೆ. ಹೇಳಿದರು.ಅವರು ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ನೇತೃತ್ವದಲ್ಲಿ ಇಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಶುಕ್ರವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ೧೭೨ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಮಂಗಳೂರಿನ ಮಣಿಪಾಲ್ ದಂತ ವೈದ್ಯಕೀಯ ಮಹಾ ವಿದ್ಯಾಲಯದ ಆರ್ಥೋಡಾಂಟಿಕ್ ವಿಭಾಗದ ಮುಖ್ಯಸ್ಥ ಪ್ರೊ. ಡಾ.ಆಶಿತ್ ಎಂ.ವಿ. ಮಾತನಾಡಿ, ಪುತ್ತೂರಿನಲ್ಲಿ ಬಿಲ್ಲವ ಸಂಘ ಕಟ್ಟಿದ ಹಿರಿಯರು ಬಳಿಕ ನಾರಾಯಣ ಗುರು ಮಂದಿರ, ಸಭಾಭವನ ನಿರ್ಮಿಸಲು ಸಾಕಷ್ಟು ಶ್ರಮಿಸಿದ್ದರು. ೫೦ ವರ್ಷಗಳ ಹಿಂದೆ ಸ್ಥಾಪನೆಯಾದ ಸಂಘವನ್ನು ಮುಂದಿನ ಪೀಳಿಗೆಗೆ ಸಶಕ್ತವಾಗಿ ಕೊಂಡೊಯ್ಯುವ ಕೆಲಸ ಆಗಬೇಕು ಎಂದರು. ಕಾರ್ಕಳ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್ ಕಾರ್ಕಳ ಶುಭ ಹಾರೈಸಿದರು. ಪುತ್ತೂರಿನ ಹಿರಿಯ ಲೆಕ್ಕ ಪರಿಶೋಧಕ ಎಸ್. ರಾಮ ಭಟ್ ಮತ್ತು ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಪಿ. ಶೇಷಪ್ಪ ಬಂಗೇರ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ಬಿಲ್ಲವ ಸಮಾಜದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವನ್ನು ಗೌರವಿಸಲಾಯಿತು. ಬಿಲ್ಲವ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅಧ್ಯಕ್ಷತೆ ವಹಿಸಿದ್ದರು.ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಸದಸ್ಯ ಮೋಹನ್ ತೆಂಕಿಲ ಪ್ರಾರ್ಥಿಸಿದರು. ಬಿಲ್ಲವ ಸಂಘದ ಉಪಾಧ್ಯಕ್ಷ ಚಿದಾನಂದ ಸುವರ್ಣ ಗೆಣಸಿನಕುಮೇರು ಸ್ವಾಗತಿಸಿದರು. ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಪುಷ್ಪಾವತಿ ಕೇಕುಡೆ, ಬಿಲ್ಲವ ಸಂಘದ ಜೊತೆ ಕಾರ್ಯದರ್ಶಿ ಪುರುಷೋತ್ತಮ ಬರೆಂಬೆಟ್ಟು, ಕೋಶಾಧಿಕಾರಿ ಜನಾರ್ದನ ಪೂಜಾರಿ ಪದಡ್ಕ, ಮಾಜಿ ಉಪಾಧ್ಯಕ್ಷ ವೇದನಾಥ ಸುವರ್ಣ ಅತಿಥಿಗಳನ್ನು ಗೌರವಿಸಿದರು. ಸಂತೋಷ್ ಕುಮಾರ್ ಮರಕ್ಕಡ ಹಾಗೂ ದೇವಿಕಾ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.
ಧಾರ್ಮಿಕ ಕಾರ್ಯಕ್ರಮ: ಬ್ರಹ್ಮಶ್ರೀ ನಾರಾಯಣ ಗುರುಗಳ ೧೭೨ನೇ ಜನ್ಮ ದಿನಾಚರಣೆ ಅಂಗವಾಗಿ ಗುರು ಮಂದಿರದಲ್ಲಿ ಬೆಳಗ್ಗೆ ಪ್ರಾರ್ಥನೆ, ಗಣಹೋಮ, ಪಂಚಾಮೃತ ಅಭಿಷೇಕ, ಗುರು ಪೂಜೆ, ಮಧ್ಯಾಹ್ನ ಮಹಾಪೂಜೆ ಕಾರ್ಯಕ್ರಮಗಳು ನವೀನ್ ಶಾಂತಿ ಅಡ್ಯಾಲು ಅವರ ಪೌರೋಹಿತ್ಯದಲ್ಲಿ ನಡೆಯಿತು.