ಸಾರಾಂಶ
ನಾಗೇಂದ್ರ ಜೆ. ಕನ್ನಡಪ್ರಭ ವಾರ್ತೆ ಪಾವಗಡ
ಪ್ಲೋರೈಡ್ ಯುಕ್ತ ನೀರಿನ ಸೇವನೆಯಿಂದ ತಾಲೂಕಿನ ಜನತೆ ಈಗಾಗಲೇ ತತ್ತರಿಸಿದ್ದು ಶುದ್ಧ ನೀರಿಗೆ ಹಾಹಾಕಾರ ಶುರುವಾಗಿದೆ. ಈಗಾಗಲೇ ಬೃಹತ್ ಟ್ಯಾಂಕ್‌ಗಳಿಗೆ ತುಂಗಭದ್ರಾ ಕುಡಿಯುವ ನೀರು ಬಂದಿದ್ದು ಮನೆಮನೆಗೆ ಬರಲು ಇನ್ನೂ ಎಷ್ಟು ದಿನ ಕಾಯಬೇಕೆಂದು ತಾಲೂಕಿನ ಜನತೆ ಮುಖ್ಯಮಂತ್ರಿ, ಶಾಸಕ ಹಾಗೂ ಜಿಲ್ಲಾಧಿಕಾರಿಗಳಿಗೆ ಪ್ರಶ್ನಿಸುತ್ತಿದ್ದಾರೆ.ಬಯಲು ಸೀಮೆ ವ್ಯಾಪ್ತಿಗೆ ಒಳಪಟ್ಟ ಪಾವಗಡ ತಾಲೂಕು ನಂಜುಂಡಪ್ಪ ವರದಿ ಅತ್ಯಂತ ಹಿಂದುಳಿದ ತಾಲೂಕಾಗಿದೆ. ಮಳೆಯ ಪ್ರಮಾಣ ಕಡಿಮೆ ಬೀಳುವ ಪರಿಣಾಮ ಪ್ರತಿ ವರ್ಷ ನೀರಿಗೆ ಹಾಹಾಕಾರ ಶುರುವಾಗುವುದು ಸಾಮಾನ್ಯ . ಅಂತರ್ಜಲ ಕುಸಿದ ಹಿನ್ನೆಲೆಯಲ್ಲಿ ಸಾವಿರಾರು ಅಡಿ ಡ್ರಿಲ್ ಮಾಡಿದರೆ ಮಾತ್ರ ಕೊಳವೆಬಾವಿಗಳಲ್ಲಿ ನೀರು ಬರತಿದ್ದು ಈ ನೀರು ಪ್ಲೂರೈಡ್ ಯುಕ್ತವಾದ ಪರಿಣಾಮ ಈ ನೀರಿನ ಸೇವನೆಯಿಂದ ಇಲ್ಲಿನ ಜನತೆ ಮೊಳೆ ಸವೆತ, ಹಲ್ಲು ನೋವು, ಅಂಗವೈಕಲ್ಯ, ಅಪೌಷ್ಟಿಕತೆ, ಚರ್ಮ ರೋಗದಂತಹ ನಾನಾ ರೀತಿಯ ರೋಗರುಜನೆಗಳಿಗೆ ತುತ್ತಾಗಿದ್ದರು. ಈ ಹಿನ್ನಲೆಯಲ್ಲಿ 2019ರಲ್ಲಿ ಇಲ್ಲಿನ ರೈತ ಹಾಗೂ ಇತರೆ 30ಕ್ಕಿಂತ ಹೆಚ್ಚು ಜನಪರ ಸಂಘಟನೆಗಳು 30ದಿನಗಳ ಕಾಲ ಜನಾದೋಲನ ಅನಿರ್ದಿಷ್ಟಾವದಿ ಮುಷ್ಕರ ಕೈಗೊಂಡಿದ್ದರು.ಈ ಸಂಬಂಧ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು. ಈವೇಳೆ ಮಾಜಿ ಸಚಿವ ವೆಂಕಟರಮಣಪ್ಪ ಇತರೆ ಸ್ಥಳೀಯ ಶಾಸಕರು ಹಾಗೂ ರೈತ ಮುಖಂಡರು ಒತ್ತಡಹೇರಿದ ಪರಿಣಾಮ ಜ್ವಲಂತ ಸಮಸ್ಯೆ ಕುರಿತು ವರದಿ ಪಡೆದ ಅಂದಿನ ಸಿಎಂ ಸಿದ್ದರಾಮಯ್ಯ ತುಮಕೂರು ಜಿಲ್ಲೆಯ ಗಡಿ ಪ್ರದೇಶ ಪಾವಗಡ ಸೇರಿದಂತೆ ಹೊಸಪೇಟೆ ಡ್ಯಾಂನಿಂದ 135 ಕಿ.ಮೀ ದೂರದ ಪಾವಗಡಕ್ಕೆ ಪೈಪ್ ಲೈನ್ ಮೂಲಕ ಮೂಲಕ ಕುಡಿಯುವ ನೀರು ಪೂರೈಕೆಗೆ ಆಸಕ್ತಿವಹಿಸಿ ಪಟ್ಟಣ ಸೇರಿದಂತೆ ತಾಲೂಕಿನ 357 ಗ್ರಾಮ ಹಾಗೂ ಬಳ್ಳಾರಿಯ ಚಿಲಕನಹಟ್ಟಿ, ಕೂಡ್ಲಗಿ, ಚಳ್ಳಕೆರೆ, ತುರುವನೂರು, ಮೊಳಕಾಲ್ಮೂರು ತಾಲೂಕುಗಳ 787 ಗ್ರಾಮಗಳಿಗೆ ಶುದ್ಧೀಕರಿಸಲಾದ ಕುಡಿಯುವ ನೀರು ಪೂರೈಕೆಗೆ ಆದೇಶಿಸಿದ್ದರು.
ಸುಮಾರು13.89 ಲಕ್ಷ ಜನರಿಗೆ ಯೋಜನೆಯಿಂದ ಅನುಕೂಲವಾಗುವ ಹಿನ್ನೆಲೆಯಲ್ಲಿ 2019ರ ಡಿಸೆಂಬರ್ 12ರಲ್ಲಿ 2,350 ಕೋಟಿ ರು.ವೆಚ್ಚದಲ್ಲಿ ಆರಂಭವಾದ ಕಾಮಗಾರಿ ಇದೀಗ ಬಹುತೇಕ ಪೂರ್ಣಗೊಂಡಿದೆ. ತಾಲೂಕಿಗೆ ನೀರು ಹರಿಸಲು 317 ಕೋಟಿ ವೆಚ್ಚವಾಗಿದ್ದು ಪೈಪ್ ಲೈನ್ ಕಾಮಗಾರಿಯ ಗುತ್ತಿಗೆಯನ್ನು ಆಂಧ್ರ ಹೈದರಬಾದ್‌ನ ಮೆಗಾ ಕಂಪನಿಗೆ ವಹಿಸಲಾಗಿತ್ತು. ತಾಲೂಕಿನ ನಿಡಗಲ್ (ಕಾರನಾಗನಹಟ್ಟಿ) ಬಳಿ ಒಂದು ಮಾಸ್ಟರ್ ಬ್ಯಾಲೆನ್ಸಿಂಗ್ ಸಂಗ್ರಹಾಗಾರ (ಎಂಬಿಆರ್) ನಿರ್ಮಿಸಲಾಗಿದೆ. ಈ ಸಂಗ್ರಹಾಗಾರಕ್ಕೆ ನಿತ್ಯ 13 ಲಕ್ಷ ಲೀಟರ್ ನೀರು ಹರಿಯಲಿದ್ದು ಬಳಿಕ ತಾ,ಕೆ.ಟಿ.ಹಳ್ಳಿ,ಮೇಗಳಪಾಳ್ಯ, ಲಿಂಗದಹಳ್ಳಿ, ಬುಡ್ಡಾರೆಡ್ಡಿಹಳ್ಳಿ ವೀರ್ಲಗೊಂದಿ, ರಾಜವಂತಿ, ಸಿಂಗರೆಡ್ಡಿಹಳ್ಳಿ, ಮರಿದಾಸನಹಳ್ಳಿ ಹೊರವಲಯಗಳಲ್ಲಿ ನಿರ್ಮಿಸಿರುವ ಜೋನಲ್ ಬ್ಯಾಲೆನ್ಸಿಂಗ್ ಸಂಗ್ರಹಾಗಾರಕ್ಕೆ (ಜೆಡ್ಬಿಆರ್) ನೀರು ಹರಿಸಲಾಗಿದೆ. ಇಲ್ಲಿಂದ ಪಂಪ್ ಮಾಡುವ ಮೂಲಕ ಗ್ರಾಮಗಳ ಮನೆಮನೆಗೆ ಕುಡಿಯುವ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗಿದ್ದು, ಚಿಕ್ಕನಾಯಕನಹಳ್ಳಿ, ಸಿ.ಕೆ.ಪುರ ಬಳಿ ಐಪಿಎಸ್ (ಇಂಟರ್ ಮಿಡಿಯಟ್ ಪಂಪಿಂಗ್ ಸ್ಟೇಷನ್) ನಿರ್ಮಿಸಲಾಗಿದೆ. ಈ ಎಲ್ಲ ಸಂಗ್ರಹಾಗಾರಗಳಿಂದ ಪ್ರತಿ ಗ್ರಾಮದ ಟ್ಯಾಂಕ್‌ಳಿಗೆ ನೀರು ಪೂರೈಕೆಯಾಗಲಿದೆ.ಈ ಸಂಬಂಧ ಶಾಸಕ ಎಚ್.ವಿ.ವೆಂಕಟೇಶ್ ಸಂಬಂಧಪಟ್ಟ ಸಚಿವ ಹಾಗೂ ಜಿಲ್ಲಾಧಿಕಾರಿಗಳ ಅಸಕ್ತಿ ಹಿನ್ನಲೆಯಲ್ಲಿ ಹೊಸಪೇಟೆ ಡ್ಯಾಂನಿಂದ ಸರಬರಾಜ್ ಅಗುವ ಪೈಪ್‌ಲೈಲ್ ಕಾಮಗಾರಿ ಪೂರ್ಣಗೊಂಡಿದ್ದು ತಾಲೂಕಿನ ಹೊರಪ್ರದೇಶಗಳಲ್ಲಿ ನೆಲದ ತಳಮಟ್ಟದಲ್ಲಿ ನಿರ್ಮಿಸಿದ್ದ 15ರಿಂದ 20 ಲಕ್ಷ ಲೀಟರ್ ಸಾಮಾರ್ಥ್ಯದ 17ಬೃಹತ್ ಓವರ್ ಹೆಡ್ ಟ್ಯಾಂಕ್‌ಗಳಿಗೆ ತುಂಗಭದ್ರಾ ಯೋಜನೆಯ ನೀರು ಪೂರೈಕೆ ಆಗಿದೆ. 2024ರ ಜುಲೈ ಮೊದಲನೆ ವಾರದಲ್ಲಿ ತಾಲೂಕಿನ ಗಡಿಯ ಕೆಂಚಮ್ಮನಹಳ್ಳಿ ಓವರ್ ಹೆಡ್ ಟ್ಯಾಂಕ್‌ಗೆ ತುಂಗಭದ್ರಾ ಪ್ರಯೋಗಿಕವಾಗಿ ತಲುಪಿದ್ದು ಈ ಸಂಬಂಧ ಜು.10ರಂದು ಸಚಿವ ಪ್ರಿಯಾಂಕ ಖರ್ಗೆ ಅವರು ಪಾವಗಡಕ್ಕೆ ಅಗಮಿಸಿ ಇಲ್ಲಿನ ಕಾರನಾಗನಹಟ್ಟಿಯ ಬೃಹತ್ ಒವರ್‌ಹೆಡ್ ಟ್ಯಾಂಕ್ ಪರಿಶೀಲನೆ ಸಹ ನಡೆಸಿದ್ದರು.
ಇನ್ನೂ ಸಿಎಂ ಸಿದ್ದರಾಮಯ್ಯ ಅವರ ಗಡುವಿಗಾಗಿ ಶಾಸಕರು ಹಾಗೂ ಇಲ್ಲಿನ ಜನತೆ ಕಾಯುತ್ತಿದ್ದು ಸಿದ್ದರಾಮಯ್ಯ ಅವರೇ ಪಾವಗಡಕ್ಕೆ ಯಾವಾಗ ಬರುತ್ತೀರಿ ಯುಗಾದಿಗಾದರೂ ನೀರು ಕೊಡಿ ಎಂದು ಅನೇಕ ಮಂದಿ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ.ಕೋಟ್...
ಅಗತ್ಯವಿರುವ ಗ್ರಾಮಗಳಿಗೆ ತುಂಗಭದ್ರೆ ನೀರು ಪೂರೈಕೆಗೆ ಈಗಾಗಲೇ ಜಿಪಂ ಹಾಗೂ ಗ್ರಾಪಂ ಪಿಡಿಒಗಳಿಗೆ ಸೂಚಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಬಂದ ಕೊಡಲೇ ತುಂಗಭದ್ರಾ ಯೋಜನೆ ಪೂರೈಕೆಗೆ ಅಧಿಕೃತ ಚಾಲನೆ ನೀಡಲಾಗುವುದು - ಎಚ್.ವಿ.ವೆಂಕಟೇಶ್ ಶಾಸಕ.ಕೋಟ್.
ಬೇಸಿಗೆ ಆರಂಭವಾಗುತ್ತಿದ್ದು ಯೋಜನೆಯ ನೀರು ಬೃಹತ್ ಟ್ಯಾಂಕ್‌ಗಳಿಗೆ ಸರಬರಾಜ್ ಅಗಿದ್ದು ಸರ್ಕಾರದ ನಿಯಮನುಸಾರ ಪೈಪ್ ಲೈನ್ ಕಾಮಗಾರಿ ಹಾಗೂ ಟ್ಯಾಂಕ್ ಗಳ ಟೆಸ್ಟಿಂಗ್ ಪರಿಶೀಲನೆ ನಡೆಸಲಾಗಿದೆ. ಶಾಸಕರ ಆದೇಶದ ಹಿನ್ನಲೆಯಲ್ಲಿ ಅಗತ್ಯವಿರುವ ಗ್ರಾಮಗಳಿಗೆ ತುಂಗಭದ್ರಾ ನೀರನ್ನು ಟ್ಯಾಂಕರ್ ಮೂಲಕ ಹಾಗೂ ಪೈಪ್ ಮೂಲಕ ಸರಬರಾಜು ಮಾಡಲಾಗುತ್ತಿದೆ. - ಬಸವಲಿಂಗಪ್ಪ, ಎಇ, ಜಿಪಂ ಉಪ ವಿಭಾಗ.