ಹಾಳಾದ ಹಾರುಗೊಪ್ಪ ರಸ್ತೆ ದುರಸ್ತಿ ಯಾವಾಗ ?

| Published : Sep 22 2024, 01:50 AM IST

ಸಾರಾಂಶ

ಬೈಲಹೊಂಗಲ ಮತಕ್ಷೇತ್ರ ವ್ಯಾಪ್ತಿಯ ಸವದತ್ತಿ ತಾಲೂಕಿನ ಹಾರುಗೊಪ್ಪ ರಸ್ತೆಯ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ನರಕಯಾತನೆ ಅನುಭವಿಸುತ್ತಿ

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಬೈಲಹೊಂಗಲ ಮತಕ್ಷೇತ್ರ ವ್ಯಾಪ್ತಿಯ ಸವದತ್ತಿ ತಾಲೂಕಿನ ಹಾರುಗೊಪ್ಪ ರಸ್ತೆಯ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ನರಕಯಾತನೆ ಅನುಭವಿಸುತ್ತಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಬೈಲಹೊಂಗಲ-ಮುರಗೋಡ ರಸ್ತೆಗೆ ಹೊಂದಿಕೊಂಡಿರುವ ಮರಕುಂಬಿಯಿಂದ ಸುಮಾರು 6 ಕಿಮೀ ಅಂತರವಿರುವ ಈ ರಸ್ತೆಯಲ್ಲಿ ಬೃಹದಾಕಾರದ ತೆಗ್ಗು-ಗುಂಡಿಗಳು ನಿರ್ಮಾಣವಾಗಿದ್ದು, ರಸ್ತೆ ಸ್ಥಿತಿ ನೋಡಿದರೆ ಇದು ಹೊಲಕ್ಕೆ ಹೋಗುವ ದಾರಿಯಂತೆ ಗೋಚರಿಸುತ್ತಿದೆ. ರಸ್ತೆಯಲ್ಲಿ ಗುಂಡಿಗಳಿಯೋ ಅಥವಾ ಗುಂಡಿಯಲ್ಲೇ ರಸ್ತೆಯಿದೆಯೋ ಎಂಬ ಅನುಮಾನ ಪ್ರಯಾಣಿಕರನ್ನು ಕಾಡುತ್ತದೆ. ಗುಂಡಿಗಳಲ್ಲಿ ಮಳೆ ನೀರು ನಿಲ್ಲುವುದರಿಂದ ವಾಹನ ಚಾಲಕರಿಗೆ ಗೊತ್ತಾಗದೆ ವಾಹನಗಳು ಅಪಘಾತಗಳು ಸಂಭವಿಸುತ್ತಿವೆ.

ರಸ್ತೆ ಆವರಿಸಿದ ಗಿಡಗಂಟೆಗಳು:

ಮರಕುಂಬಿಯಿಂದ ಚಚಡಿಗೆ ತೆರಳಲು ಮುಖ್ಯರಸ್ತೆ ಇದಾಗಿದ್ದು, ರಾಜ್ಯ ಹೆದ್ದಾರಿಯಿಂದ ತಿರುವು ಪಡೆಯುವ ವೇಳೆ ಅಧಿಕ ಗಿಡಗಂಟೆಗಳು ಆವರಿಸಿವೆ. ಹೀಗಾಗಿ ಮುಂದಿನ ದಾರಿ ಕಾಣದೇ ಚಾಲಕರು ಯಾಮಾರುವಂತಾಗಿದೆ. ಗಿಡಗಳ ಕೊಂಬೆಗಳನ್ನು ತೆಗೆಯಬೇಕೆಂದು ಸ್ಥಳೀಯರು ಅನೇಕ ಬಾರಿ ಅಧಿಕಾರಿಗಳಿಗೆ ಮೌಖಿಕವಾಗಿ ಹೇಳಿದರೂ ಯಾರೂ ಕೇಳುವವರಿಲ್ಲ.

ರಸ್ತೆ ತೀರಾ ಹದಗೆಟ್ಟಿದ್ದರಿಂದ ಮೇಲಿಂದ ಮೇಲೆ ಅಫಘಾತಗಳು ಸಂಭವಿಸುತ್ತಿವೆ. ದ್ವಿಚಕ್ರ ವಾಹನ ಸವಾರರು, ಇತರ ವಾಹನ ಚಾಲಕರು ಕೈಯಲ್ಲಿ ಜೀವ ಹಿಡದುಕೊಂಡೇ ಸಾಗಬೇಕಾದ ಅನಿವಾರ್ಯತೆ ಉಂಟಾಗಿದೆ. ಈ ರಸ್ತೆಯ ಮುಂಖಾಂತರ ಸಾಗುವ ಸಾರಿಗೆ ಬಸ್‌ಗಳು ಎದ್ದುಬಿದ್ದು ಹೋಗುವುದರಿಂದ ಪಾಟಾ ಮುರಿದು ಮೇಲಿಂದ ಮೇಲೆ ರಸ್ತೆಯಲ್ಲಿ ಕೆಟ್ಟು ನಿಲ್ಲುತ್ತಿವೆ. ಹಲವಾರು ವಾಹನಗಳ ಬಿಡಿಭಾಗಗಳು ಕಿತ್ತು ಬೀಳುತ್ತಿರುವುದರಿಂದ ಸುಗಮ ಬಸ್ ಸಂಚಾರಕ್ಕೂ ವ್ಯತ್ಯಯಾಗುತ್ತಿದೆ.

ಅಪಾಯವಿಲ್ಲದೆ ದಾಟುವುದೇ ಸವಾಲು:

ರಸ್ತೆಯು ವಾಹನ ಸಾಗದಷ್ಟು ಹದಗೆಟ್ಟಿರುವುದರಿಂದ ಹಲವು ವಾಹನ ಸವಾರರು ಹಲವು ಕಿ.ಮೀ. ಸುತ್ತುವರಿದು ತಮ್ಮ ಊರುಗಳನ್ನು ಸೇರಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ರಸ್ತೆಯಲ್ಲಿ ಗರ್ಣಿಣಿಯರು ಸಾಗಿದರೆ ಮಧ್ಯೆದಲ್ಲೇ ಹೆರಿಗೆ ಗ್ಯಾರಂಟಿ ಎಂದು ಜನರು ಆಡಿಕೊಳ್ಳುವಂತಾಗಿದೆ. ಪರವೂರಿನವರು ಈ ಮಾರ್ಗದಲ್ಲಿ ಸಂಚರಿಸಿದರೆ ಅಪಾಯವಿಲ್ಲದೆ ದಾಟಿದರೆ ನಿಟ್ಟುಸಿರು ಬಿಡುತ್ತಿದ್ದಾರೆ.

ಪಂಚಗ್ಯಾರಂಟಿಗಳನ್ನು ನೀಡಿ ಜನರ ಸಂಕಷ್ಟ ದೂರ ಮಾಡುತ್ತಿದ್ದೇವೆ. ನಮ್ಮದು ಜನಪರ ಸರ್ಕಾರ ಎಂದು ಹೇಳಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಜನರಿಗೆ ನಿತ್ಯ ಅವಶ್ಯಕ ಮೂಲಸೌಲಭ್ಯಗಳು ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೂಡಲೇ ಎಚ್ಚೆತ್ತು ರಸ್ತೆ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ವಾಹನ ಸವಾರರ ಆಗ್ರಹವಾಗಿದೆ.ಬೈಲಹೊಂಗಲ ಉಪವಿಭಾಗ ವ್ಯಾಪ್ತಿಗೆ ಒಳಪಡುವ ಹಾರುಗೊಪ್ಪ ರಸ್ತೆಯು ತೀರಾ ಹದಗೆಟ್ಟಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಸುಮಾರು ನಾಲ್ಕುವರೆ ಕಿಮೀ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಮಳೆಗಾಲ ಮುಗಿದ ನಂತರ ರಸ್ತೆಯ ಅಭಿವೃದ್ಧಿಗೆ ಚಾಲನೆ ನೀಡಿ, ಇನ್ನುಳಿದ ಭಾಗವನ್ನು ಹಂತ ಹಂತವಾಗಿ ಅಭಿವೃದ್ಧಿಪರಿಸಲಾಗುವುದು.

-ಬಸವರಾಜ ಹಾಲಗಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಬೈಲಹೊಂಗಲ