ಹಾಸ್ಟೆಲ್‌ ದುರಸ್ತಿ ಯಾವಾಗ?

| Published : Sep 16 2025, 12:03 AM IST

ಸಾರಾಂಶ

ಮಳೆಗಾಲದಲ್ಲಿ ಹಾಸ್ಟೆಲ್‌ ಕಟ್ಟಡದ ಪ್ರತಿ ಕೋಣೆಯ ಮೇಲ್ಛಾವಣಿ ಸೋರುತ್ತವೆ. ವಿದ್ಯಾರ್ಥಿಗಳು ಮಲಗುವ ಕೊಠಡಿಗಳ ಗೋಡೆಗಳಿಂದ ಸಿಮೆಂಟ್ ಪ್ಲಾಸ್ಟರ್ ಪದರಗಳು ಕಳಚಿ ಬೀಳುತ್ತಿದ್ದು, ಯಾವಾಗ ದೊಡ್ಡ ಅನಾಹುತ ಸಂಭವಿಸುತ್ತದೋ ಎಂಬ ಭೀತಿ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ‘ನಾವಿಲ್ಲಿ ಓದಲು ಬಂದಿದ್ದೇವೆ, ಆದರೆ ಪ್ರತಿದಿನವೂ ಜೀವಭಯದಲ್ಲಿ ಇರಬೇಕಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಕನ್ನಡಪ್ರಭ ವಾರ್ತೆ ಚೇಳೂರು

ಚೇಳೂರು ತಾಲೂಕಿನ ಚಿಲಕಲನೇರ್ಪು ಗ್ರಾಮದಲ್ಲಿರುವ ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರ್ವಹಿಸುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವು ಅಪಾಯಕಾರಿ ಸ್ಥಿತಿಯಲ್ಲಿದ್ದು, ಇಲ್ಲಿನ ವಿದ್ಯಾರ್ಥಿಗಳ ಭಯದಲ್ಲೇ ವಿದ್ಯಾಭ್ಯಾಸ ಮಾಡುವಂತಾಗಿದೆ..

ಸುಮಾರು ಮೂವತ್ತು ವರ್ಷಗಳಷ್ಟು ಹಳೆಯದಾದ ಈ ಕಟ್ಟಡವು ಸಂಪೂರ್ಣ ಶಿಥಿಲಗೊಂಡಿದ್ದು, ಮಳೆಗಾಲದಲ್ಲಿ ಸೋರುತ್ತಾ, ಸೀಮೆಂಟ್ ಮತ್ತು ಗೋಡೆಗಳ ಭಾಗಗಳು ಕಿತ್ತುಬೀಳುತ್ತಿವೆ. ಆದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯಾವುದೇ ಕ್ರಮ ಕೈಗೊಂಡಿಲ್ಲ.

ಉದುರುತ್ತಿರುವ ಸಿಮೆಂಟ್‌ ಪ್ಲಾಸ್ಟರ್‌

ಮಳೆಗಾಲದಲ್ಲಿ ಕಟ್ಟಡದ ಪ್ರತಿ ಕೋಣೆಯ ಮೇಲ್ಛಾವಣಿ ಸೋರುತ್ತವೆ. ವಿದ್ಯಾರ್ಥಿಗಳು ಮಲಗುವ ಕೊಠಡಿಗಳ ಗೋಡೆಗಳಿಂದ ಸಿಮೆಂಟ್ ಪ್ಲಾಸ್ಟರ್ ಪದರಗಳು ಕಳಚಿ ಬೀಳುತ್ತಿದ್ದು, ಯಾವಾಗ ದೊಡ್ಡ ಅನಾಹುತ ಸಂಭವಿಸುತ್ತದೋ ಎಂಬ ಭೀತಿ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ‘ನಾವಿಲ್ಲಿ ಓದಲು ಬಂದಿದ್ದೇವೆ, ಆದರೆ ಪ್ರತಿದಿನವೂ ಜೀವಭಯದಲ್ಲಿ ಇರಬೇಕಾಗಿದೆ. ನಮ್ಮ ಸಮಸ್ಯೆಗಳನ್ನು ಕೇಳುವವರೇ ಇಲ್ಲ’ ಎಂದು ವಿದ್ಯಾರ್ಥಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಮಳೆಗಾಲದಲ್ಲಿ ಅಡುಗೆ ಕೊಠಡಿ ಸಂಪೂರ್ಣ ಜಲಾವೃತಗೊಳ್ಳುತ್ತದೆ. ಊಟದ ಕೋಣೆಯ ಮೇಲ್ಭಾಗದ ಸಿಮೆಂಟ್ ಕಿತ್ತುಬಿದ್ದಿದ್ದು, ಗೋಡೆಗಳು ತೇವಾಂಶದಿಂದ ಕೂಡಿದೆ. ಈ ವಸತಿ ನಿಲಯಕ್ಕೆ ಬರುವ ರಸ್ತೆ ಸಂಪೂರ್ಣ ಮಣ್ಣಿನಿಂದ ಕೂಡಿದ್ದು, ಮಳೆಗಾಲದಲ್ಲಿ ಕೆಸರು ಗದ್ದೆಯಾಗಿ ಪರಿಣಮಿಸುತ್ತದೆ. ಹಾಸ್ಟೆಲ್‌ನ ಗೇಟ್ ಮುಂಭಾಗದ ಚರಂಡಿ ಸಂಪೂರ್ಣ ಮುಚ್ಚಿದೆ. ಕಟ್ಟಡ ದುರಸ್ತಿಗೆ ಒತ್ತಾಯ

ಈ ಘಟನೆಯು ಸರ್ಕಾರದ ಮತ್ತು ಸಂಬಂಧಪಟ್ಟ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಇತ್ತ ಗಮನ ಹರಿಸಬೇಕು. ವಿದ್ಯಾರ್ಥಿಗಳ ಜೀವನಕ್ಕೆ ಅಪಾಯ ತರುವ ಈ ಶಿಥಿಲ ಕಟ್ಟಡವನ್ನು ತಕ್ಷಣ ದುರಸ್ತಿಪಡಿಸಬೇಕು ಅಥವಾ ಸೂಕ್ತ ಸ್ಥಳಕ್ಕೆ ವಸತಿ ನಿಲಯವನ್ನು ವರ್ಗಾಯಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.