ರೈಲ್ವೆ ಗೇಟ್ 63ರ ಸೇತುವೆ ಸಿದ್ಧ, ಸಂಚಾರಕ್ಕೆ ಮುಕ್ತ ಯಾವಾಗ?

| Published : Jul 08 2024, 12:33 AM IST

ಸಾರಾಂಶ

ಭಾಗ್ಯನಗರದ ಮತ್ತು ಕೊಪ್ಪಳ ಮಧ್ಯೆ ಇರುವ ರೈಲ್ವೆ ಗೇಟ್ ನಂಬರ್ 63ರಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರೂ ರಸ್ತೆ ಕಾಮಗಾರಿ ಆಗದಿರುವುದರಿಂದ ಸಂಚಾರಕ್ಕೆ ಮುಕ್ತವಾಗಿಲ್ಲ. ಹೀಗಾಗಿ, ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ರೈಲ್ವೆ ಕಾಮಗಾರಿ ಮುಗಿದಿದ್ದರೂ ರಸ್ತೆ ಕಾಮಗಾರಿ ಬಾಕಿ

ಯಾವಾಗ ಪೂರ್ಣಗೊಳಿಸುತ್ತೀರಿ ಅಣ್ತಮ್ಮ: ಜನರ ಪ್ರಶ್ನೆ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಭಾಗ್ಯನಗರದ ಮತ್ತು ಕೊಪ್ಪಳ ಮಧ್ಯೆ ಇರುವ ರೈಲ್ವೆ ಗೇಟ್ ನಂಬರ್ 63ರಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರೂ ರಸ್ತೆ ಕಾಮಗಾರಿ ಆಗದಿರುವುದರಿಂದ ಸಂಚಾರಕ್ಕೆ ಮುಕ್ತವಾಗಿಲ್ಲ. ಹೀಗಾಗಿ, ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಶಾಸಕರು ನೀವೇ, ಸಂಸದರು ನೀವೇ ಆಗಿದ್ದು, ಯಾವಾಗ ಪೂರ್ಣಗೊಳಿಸುತ್ತೀರಿ ಎಂದು ಅಣ್ತಮ್ಮ (ಸಂಸದ ರಾಜಶೇಖರ ಹಿಟ್ನಾಳ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ) ಅವರನ್ನು ಜನರು ಪ್ರಶ್ನೆ ಮಾಡುತ್ತಿದ್ದಾರೆ.

ಹೌದು, ಗೇಟ್ ನಂ. 63ರಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ತರಾತುರಿಯಲ್ಲಿ ರೈಲ್ವೆ ಸೇತುವೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಆದರೆ, ಸೇತುವೆಯ ಎರಡು ಬದಿಯಲ್ಲಿ ರಸ್ತೆ ಸಂಪರ್ಕ ಕಲ್ಪಿಸಿಲ್ಲ ಮತ್ತು ರಸ್ತೆ ಅಗಲೀಕರಣ ಕಾಮಗಾರಿ ಮಾಡಿಲ್ಲ.

ಸೇತುವೆ ಕಾಮಗಾರಿ ಕೇಂದ್ರ ಸರ್ಕಾರದ್ದಾಗಿದ್ದು, ಅದನ್ನು ಪೂರ್ಣಗೊಳಿಸಲಾಗಿದೆ. ಆದರೆ, ರಸ್ತೆ ಕಾಮಗಾರಿ ಮೂಲಭೂತ ಸೌಕರ್ಯ ಇಲಾಖೆಯ ಅಡಿಯಲ್ಲಿ ಮಾಡಬೇಕಾಗಿದ್ದು, ರಾಜ್ಯ ಸರ್ಕಾರ ಅನುದಾನ ನೀಡದೆ ಇರುವುದರಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ. ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರೂ ಸೇತುವೆ ಮುಚ್ಚಿ, ಸಂಚಾರಕ್ಕೆ ಅವಕಾಶ ನೀಡದೆ ಇರುವ ಏಕೈಕ ಸಮಸ್ಯೆ ಇದಾಗಿದೆ ಎಂದೇ ಹೇಳಲಾಗುತ್ತದೆ.

ಈ ಹಿಂದೆ ಸಂಸದರಾಗಿ ಸಂಗಣ್ಣ ಕರಡಿ ಇದ್ದರು. ಆಗ ಶಾಸಕ, ಸಂಸದರು ಪರಸ್ಪರ ದೂರಿಕೊಳ್ಳಲು ಅವಕಾಶ ಇತ್ತು. ಆದರೆ, ಈಗ ಸಂಸದರಾಗಿ ರಾಜಶೇಖರ ಹಿಟ್ನಾಳ ಇರುವುದರಿಂದ ಪರಸ್ಪರ ದೂರುವುದಕ್ಕೆ ಅವಕಾಶ ಇಲ್ಲ. ಇಬ್ಬರು ಒಂದೇ ಪಕ್ಷದವರು ಅಷ್ಟೇ ಅಲ್ಲ, ಸಹೋದರರು. ಹೀಗಾಗಿ ಜನರು ಯಾವಾಗ ಕಾಮಗಾರಿ ಪೂರ್ಣಗೊಂಡು, ಸಂಚಾರಕ್ಕೆ ಮುಕ್ತವಾಗುತ್ತದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಪ್ರಮುಖ ರಸ್ತೆ:

ಸ್ವಾಮಿ ವಿವೇಕಾನಂದ ಶಾಲೆಯ ಈ ರಸ್ತೆ ಭಾಗ್ಯನಗರ ಮತ್ತು ಕೊಪ್ಪಳವನ್ನು ಮಧ್ಯೆ ಭಾಗದಲ್ಲಿ ಸಂಪರ್ಕ ಕಲ್ಪಿಸುವ ಮುಖ್ಯವಾದ ರಸ್ತೆಯಾಗಿದೆ. ಹೀಗಾಗಿ, ಇಲ್ಲಿ ಸಂಚಾರ ಮಾಡುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇದೆ. ಹೀಗಾಗಿ, ಈ ರಸ್ತೆಯನ್ನು ಸಂಚಾರಕ್ಕೆ ಮುಕ್ತ ಮಾಡಿ ಎಂದು ಜನರು ಆಗ್ರಹಿಸುತ್ತಲೇ ಇದ್ದಾರೆ.

ವಿಧಾನಸಭೆ ಚುನಾವಣೆ ಮತ್ತು ಲೋಕಸಭಾ ಚುನಾವಣೆ ಹಿನ್ನೆಲೆ ಇದಕ್ಕೆ ಅವಕಾಶ ಸಿಗಲಿಲ್ಲ. ಆದರೆ, ಆಗ ಸಂಸದರಾಗಿದ್ದ ಸಂಗಣ್ಣ ಕರಡಿ ಜನರ ಒತ್ತಾಯದ ಮೇರೆಗೆ ರಸ್ತೆ ಕಾಮಗಾರಿ ಆಗದಿದ್ದರೂ ಸೇತುವೆ ಕಾಮಗಾರಿ ಪೂರ್ಣಗೊಳಿಸಿದ್ದರು. ಅದಾದ ಮೇಲೆ ರಸ್ತೆ ಕಾಮಗಾರಿ ಕಾರ್ಯ ಆಗಲೇ ಇಲ್ಲ. ಸೇತುವೆ ನಿರ್ಮಾಣವಾಗಿದ್ದರೂ ಸಂಚಾರಕ್ಕೆ ಮುಕ್ತವಾಗದಿರುವುದು ನಗೆಪಾಟಲಿಗೀಡಾಗುವಂತೆ ಆಗಿದೆ.

ಏನಾಗಬೇಕು?

ಸೇತುವೆ ಕಾಮಗಾರಿ ಪೂರ್ಣಗೊಂಡಿರುವುದರಿಂದ ಎರಡು ಬದಿಯಲ್ಲಿ ರಸ್ತೆ ಕಾಮಗಾರಿಯಾಗಬೇಕು. ಅದರಲ್ಲೂ ಕೊಪ್ಪಳದ ಕಡೆಗೆ ಅಗಲೀಕರಣವಾಗಬೇಕಾಗಿರುವುದರಿಂದ ಇದಕ್ಕಾಗಿ ರಾಜ್ಯ ಸರ್ಕಾರ ಮೂಲಭೂತ ಸೌಕರ್ಯ ಇಲಾಖೆಯ ಅಡಿಯಲ್ಲಿ ಹಣ ನೀಡಬೇಕಾಗಿದೆ. ಈ ಹಿಂದೆ ಎರಡು ಬಾರಿ ಪ್ರಸ್ತಾವನೆ ಹೋದಾಗಲು ರಾಜ್ಯ ಸರ್ಕಾರ ಅಸ್ತು ಎನ್ನದೇ ಇರುವುದರಿಂದ ನನೆಗುದಿಗೆ ಬಿದ್ದಿದ್ದು, ಈಗಲಾದರೂ ಆದೀತೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ರೈಲ್ವೆ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನು ರಸ್ತೆ ಕಾಮಗಾರಿ ಆಗಿಲ್ಲ. ಹೀಗಾಗಿ, ಬೇಗನೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ.

ಬಸವರಾಜ, ಹೋರಾಟ ಸಮಿತಿ ಸದಸ್ಯ

ಕೋಟ್....

ಸಮಸ್ಯೆಯ ಬಗ್ಗೆ ಗಮನಕ್ಕೆ ಇದ್ದು, ಸೇತುವೆ ಕಾಮಗಾರಿ ಮುಗಿದಿರುವುದರಿಂದ ಈಗ ರಸ್ತೆ ಕಾಮಗಾರಿ ಆಗಬೇಕಾಗಿದೆ. ಹೀಗಾಗಿ, ಕೂಡಲೇ ರಾಜ್ಯ ಸರ್ಕಾರದ ಮೂಲಕ ಮಾಡಿಸಲಾಗುವುದು.

ರಾಜಶೇಖರ ಹಿಟ್ನಾಳ, ಸಂಸದ